ಕೊವಿಡ್ನಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್ ಮಡದಿ ನಿರ್ಮಲ್ ಕೌರ್ ನಿಧನ
ಕೊರೊನಾ ಸೋಂಕಿತರಾಗಿದ್ದ ಅವರು ಮೂರು ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯೂ ಆಗಿದ್ದ ನಿರ್ಮಲ್ ಅವರ ಆರೋಗ್ಯವು ಕಳೆದ ಕೆಲ ದಿನಗಳಿಂದ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಂಡಿಗಡ: ಮಿಲ್ಖಾಸಿಂಗ್ ಮಡದಿ ಮತ್ತು ಖ್ಯಾತ ವಾಲಿಬಾಲ್ ಆಟಗಾರ್ತಿ ನಿರ್ಮಲ್ ಕೌರ್ (85) ಕೊವಿಡ್-19ರಿಂದ ಭಾನುವಾರ ನಿಧನರಾದರು. ಕೊರೊನಾ ಸೋಂಕಿತರಾಗಿದ್ದ ಅವರು ಮೂರು ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯೂ ಆಗಿದ್ದ ನಿರ್ಮಲ್ ಅವರ ಆರೋಗ್ಯವು ಕಳೆದ ಕೆಲ ದಿನಗಳಿಂದ ಹದಗೆಟ್ಟಿತ್ತು.
ಕೊರೊನಾ ಸೋಂಕಿನಿಂದಾಗಿ ನಿರ್ಮಲ್ ಕೌರ್ ಅವರ ಆಕ್ಸಿಜನ್ ಮಟ್ಟ ಕುಸಿದಿತ್ತು. ಅವರಿಗೆ ಎಚ್ಎಫ್ಎನ್ಸಿ (High Flow Nasal Cannula – HFNC) ಮತ್ತು ಎನ್ಐವಿ Non Invasive Ventilator – NIV) ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಆದರೂ ಅವರ ದೇಹಸ್ಥಿತಿ ಸುಧಾರಿಸಲಿಲ್ಲ. ಮೇ ಕೊನೆಯ ವಾರದಲ್ಲಿ ಆಸ್ಪತ್ರೆಗೆ ದಾಖಲಾದ ನಂತರ ಅವರಲ್ಲಿ ನ್ಯೂಮೊನಿಯಾ ಕಾಣಿಸಿಕೊಂಡಿತು. ಇದೇ ವೇಳೆ 91 ವರ್ಷದ ಮಿಲ್ಖಾ ಸಿಂಗ್ ಅವರನ್ನು ಸಹ ಮೊಹಾಲಿಯ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಮಿಲ್ಖಾ ಸಿಂಗ್ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳಿಸಲಾಯಿತು. ಆದರೆ ನಿರ್ಮಲ್ ಅವರ ಆರೋಗ್ಯ ಸುಧಾರಿಸಲಿಲ್ಲ. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು.
‘ಕೊವಿಡ್ ವಿರುದ್ಧ ಸುದೀರ್ಘ ಹೋರಾಟದ ನಂತರ ನಿರ್ಮಲ್ ಕೌರ್ ಭಾನುವಾರ ಸಂಜೆ 4 ಗಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರು ಪಂಜಾಬ್ ಸರ್ಕಾರದಲ್ಲಿ ಮಹಿಳೆಯರ ಕ್ರೀಡಾ ವಿಭಾಗದ ಮಾಜಿ ನಿರ್ದೇಶಕಿ ಮತ್ತು ಭಾರತೀಯ ವಾಲಿಬಾಲ್ ತಂಡದ ನಾಯಕಿಯಾಗಿದ್ದರು. ಈಗಲೂ ತೀವ್ರ ನಿಗಾ ಘಟಕದಲ್ಲಿಯೇ ಇರುವ ಮಿಲ್ಖಾಸಿಂಗ್ ಪತ್ನಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ವಿಷಾದದ ಸಂಗತಿ ಎಂದು ಮಿಲ್ಖಾ ಸಿಂಗ್-ನಿರ್ಮಲ್ ಕೌರ್ ಕುಟುಂಬ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಮಿಲ್ಖಾ ಮತ್ತು ನಿರ್ಮಲ್ ದಂಪತಿಗಳು ಚಂಡಿಗಡದಲ್ಲಿ ಅಪಾರ ಪ್ರೀತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ಇವರಿಬ್ಬರ ಪ್ರೇಮದ ಕಥೆಯು 1960ರಷ್ಟರು ಹಿಂದಕ್ಕೆ ಹೋಗುತ್ತದೆ. ಈಗ ಪಾಕಿಸ್ತಾನದಲ್ಲಿರುವ ಶೇಖ್ಪುರದಲ್ಲಿ ನಿರ್ಮಲ್ ಅಕ್ಟೋಬರ್ 8, 1938ರಲ್ಲಿ ಜನಿಸಿದರು. ಪಂಬಾಜ್ ವಾಲಿಬಾಲ್ ತಂಡಕ್ಕೆ ಮೂರು ಬಾರಿ ನಾಯಕಿಯಾಗಿದ್ದರು. 1955ರಲ್ಲಿ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾಗ ಮಿಲ್ಖಾ ಸಿಂಗ್ ಭೇಟಿಯಾಗಿದ್ದರು.
ಚಂಡಿಗಡದಲ್ಲಿ 1960-61ರಲ್ಲಿ ಕ್ರೀಡಾ ಆಡಳಿತಗಾರರಾಗಿ ಇಬ್ಬರನ್ನೂ ನಿಯುಕ್ತಿಗೊಳಿಸಲಾಗಿತ್ತು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. 1962ರಲ್ಲಿ ಮಿಲ್ಖಾ-ನಿರ್ಮಲ್ ಮದುವೆ ನಡೆದಿತ್ತು. 1958ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿರ್ಮಲ್ ಕೌರ್, ವಾಲೀಬಾಲ್ ಪಂದ್ಯಗಳಲ್ಲಿ ಸಲ್ವಾರ್ ಕಮೀಜ್ ಧರಿಸಿಯೇ ಆಡುತ್ತಿದ್ದರು. ಇತರರಂತೆ ಶಾರ್ಟ್ಸ್ ಅಥವಾ ಸ್ಕರ್ಟ್ ಧರಿಸುತ್ತಿರಲಿಲ್ಲ. ಚಂಡಿಗಡದಲ್ಲಿ ಅತ್ಯುತ್ತಮ ದರ್ಜೆಯ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿದ್ದ ನಿರ್ಮಲ್ ಕೌರ್ 1990ರ ದಶಕದ್ಲಿ ನಿವೃತ್ತರಾದರು.
‘ಚಂಡಿಗಡದ ಹಾಕಿ ಮತ್ತು ಟೆನಿಸ್ ಕ್ರೀಡಾಂಗಣಗಳೂ ಸೇರಿದಂತೆ ಪಂಜಾಬ್ನಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಕರ್ಯ ರೂಪುಗೊಳ್ಳಲು ನಿರ್ಮಲ್ ತಮ್ಮದೇ ಅದ ಕೊಡುಗೆ ನೀಡಿದ್ದಾರೆ. ಹಲವು ಕ್ರೀಡಾ ಸಂಕೀರ್ಣಗಳು ಅವರ ಕಾಲದಲ್ಲಿ ಸ್ಥಾಪನೆಯಾದವು. ಚಂಡಿಗಡದಲ್ಲಿ ಹತ್ತಾರು ರಾಷ್ಟ್ರೀಯ, ಅಂತರರಾಷ್ರೀಯ ಪಂದ್ಯಾವಳಿಗಳನ್ನು ಆಯೋಇಸಿದ್ದರು. 1955ರಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ವಾಲೀಬಾಲ್ ತಂಡ ರಷ್ಯಾ ಪ್ರವಾಸ ಕೈಗೊಂಡಾಗ ನಿರ್ಮಲ್ ಅದರ ನಾಯಕಿಯಾಗಿದ್ದರು ಎಂದು ಭಾರತೀಯ ವಾಲಿಬಾಲ್ ಫೇಡರೇಷನ್ನ ಕಾರ್ಯದರ್ಶಿ ವಿಜಯ್ಪಾಲ್ ಸಿಂಗ್ ನೆನಪಿಸಿಕೊಂಡರು.
(Volleyball team captian Nirmal Kaur dies after fighting Covid-19 for 3 weeks Milkha Singhs wife)
ಇದನ್ನೂ ಓದಿ: ಆಮ್ಲಜನಕ ಮಟ್ಟ ಕುಸಿತ; ಆಸ್ಪತ್ರೆಗೆ ದಾಖಲಾದ ಮಿಲ್ಖಾ ಸಿಂಗ್.. ಫ್ಲೈಯಿಂಗ್ ಸಿಖ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
Published On - 11:15 pm, Sun, 13 June 21