ಲಾಸ್ಟ್ ಬೆಂಚ್ ಮೋದಿ; ಬಿಜೆಪಿ ಕಾರ್ಯಾಗಾರದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಕೊನೆ ಸಾಲಿನಲ್ಲಿ ಕುಳಿತ ಪ್ರಧಾನಿ
Narendra Modi sits in last bench during a party workshop: ಮಂಗಳವಾರ (ಸೆ. 9) ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಸಂಸದರನ್ನು ಸಿದ್ಧಗೊಳಿಸಲು ಕಾರ್ಯಾಗಾರ ನಡೆಸಲಾಯಿತು. ಇದರಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಸಾಮಾನ್ಯ ಸಂಸದರ ಜೊತೆ ಕೊನೆಯ ಸಾಲಿನಲ್ಲಿ ಕೂತಿದ್ದರು. ಬಿಜೆಪಿ ಸಂಸದ ರವಿ ಕಿಶನ್ ಈ ಫೋಟೋ ಹಂಚಿಕೊಂಡು, ಬಿಜೆಪಿಯ ಶಕ್ತಿ ಎಂದು ಬಣ್ಣಿಸಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 7: ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಲು ಎನ್ಡಿಎ ಸಂಸದರಿಗೆ ನಡೆಸಲಾದ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಭಾಗವಹಿಸಿದ್ದರು. ಸಂಸತ್ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಾಮಾನ್ಯ ಬಿಜೆಪಿ ಸಂಸದರಂತೆ ನರೇಂದ್ರ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿದ್ದರು.
ವರ್ಕ್ಶಾಪ್ನಲ್ಲಿ ಇತರ ಸಂಸದರ ಜೊತೆ ಪ್ರಧಾನಿ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿದ್ದ ದೃಶ್ಯದ ಫೋಟೋವೊಂದನ್ನು ಬಿಜೆಪಿ ಸಂಸದ ರವಿ ಕಿಶನ್ ಅವರು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿಯ ಶಕ್ತಿಗೆ ಇದು ದ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಎನ್ಡಿಎ ಸಂಸದರ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಅವರು ಬಿಜೆಪಿಯ ಶಕ್ತಿಯ ದ್ಯೋತಕವಾಗಿದ್ದಾರೆ. ಈ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಒಂದು ಭಾಗವಾಗಿದ್ದಾರೆ’ ಎಂದು ರವಿ ಕಿಶನ್ ತಿಳಿಸಿದ್ದಾರೆ.
ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿಗಳ ಆಯ್ಕೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎನ್ಡಿಎ ಸಂಸದರಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿಯ ಸಂಬಿತ್ ಪಾತ್ರಾ ಅವರ ಎಕ್ಸ್ ಪೋಸ್ಟ್
सदैव कार्यकर्ता! 🙏 pic.twitter.com/y3b1r4VNPi
— Sambit Patra (@sambitswaraj) September 7, 2025
ಸೆ. 9ರಂದು ನಡೆಯುವ ವೈಸ್ ಪ್ರೆಸಿಡೆಂಟ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸ್ಪರ್ಧಿಸಿದ್ದಾರೆ. ವಿಪಕ್ಷಗಳು ಸೇರಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿವೆ.
ಪಕ್ಷಗಳ ಬಲಾಬಲ ಪರಿಗಣಿಸಿದರೆ ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣವ್ ಅವರಿಗೆ 439 ಸಂಸದರ ಬೆಂಬಲ ಇದೆ. ವಿಪಕ್ಷಗಳ ಅಭ್ಯರ್ಥಿಗೆ ಕೇವಲ 324 ಸದಸ್ಯರ ಬೆಂಬಲ ಇದೆ. ಬಿಜೆಡಿ, ಬಿಆರ್ಎಸ್ ಪಕ್ಷಗಳ ಸಂಸದರ ಬೆಂಬಲ ಯಾರಿಗೆ ಇದೆ ಎನ್ನುವ ಸುಳಿವು ಇನ್ನೂ ಸಿಕ್ಕಿಲ್ಲ. ಆದಾಗ್ಯೂ ರಾಧಾಕೃಷ್ಣನ್ ಅವರು ಮುಂದಿನ ಉಪರಾಷ್ಟ್ರಪತಿಯಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಬಿಜೆಪಿ ನಾಯಕನ ಬಾಯಿಗೆ ಆ್ಯಸಿಡ್ ಸುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಟಿಎಂಸಿ ಶಾಸಕ
ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಕಣಕ್ಕಿಳಿಸಿ, ಎನ್ಡಿಎ ಬೆಂಬಲಿಗರಲ್ಲಿ ಹಲವರನ್ನು ತಮ್ಮೆಡೆಗೆ ಸೆಳೆದು ಗೆಲ್ಲುವ ದೂರದ ಆಸೆಯಲ್ಲಿ ವಿಪಕ್ಷಗಳು ಇವೆ. ಸೆ. 9ರಂದ ರಹಸ್ಯ ಮತದಾನ ನಡೆಯುವುದರಿಂದ ವಿಪಕ್ಷಗಳಿಗೆ ಕ್ರಾಸ್ ವೋಟಿಂಗ್ ಸಾಧ್ಯತೆಯು ಎಲ್ಲೋ ಒಂದು ಸಣ್ಣ ಭರವಸೆ ಮೂಡಿಸಿರಬಹುದು. ಇಂಡಿಯಾ ಬ್ಲಾಕ್ನಿಂದ ಹೊರಗಿರುವ ಎಎಪಿಯ 10 ಸಂಸದರು ಹಾಗೂ ವೈಎಸ್ಸಾರ್ ಕಾಂಗ್ರೆಸ್ನ 11 ಸಂಸದರು ರಾಧಾಕೃಷ್ಣವ್ ಅವರಿಗೆ ಬೆಂಬಲ ನೀಡಿರುವುದು ಗಮನಾರ್ಹ ಸಂಗತಿ ಎನಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




