AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್ ದೇಶಮುಖ್ ವಿರುದ್ಧ ಆರೋಪ ಮಾಡಿದ್ದ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ವಿರುದ್ಧ ವಾರಂಟ್ ಜಾರಿ

ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಜಾರಿಯಾಗಿದೆ.

ಅನಿಲ್ ದೇಶಮುಖ್ ವಿರುದ್ಧ ಆರೋಪ ಮಾಡಿದ್ದ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ವಿರುದ್ಧ ವಾರಂಟ್ ಜಾರಿ
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 07, 2021 | 4:31 PM

Share

ಮುಂಬೈ: ಬಾಂಬೆ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರ ಏಕ ಸದಸ್ಯ ಆಯೋಗದ ಎದುರು ಹಾಜರಾಗಲು ವಿಫಲರಾದ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಜಾರಿಯಾಗಿದೆ. ನ್ಯಾಯಮೂರ್ತಿ ಕೈಲಾಸ್ ಉತ್ತಮ್​ಚಂದ್ ಚಾಂಡಿವಾಲ್ ವಾರಂಟ್ ಜಾರಿ ಮಾಡಿದ್ದಾರೆ.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರ ವಿರುದ್ಧ ಪರಮ್​ಬಿರ್ ಸಿಂಗ್ ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ಏಕ ಸದಸ್ಯ ಆಯೋಗ ರಚಿಸಿತ್ತು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಪರಮ್​ ಬಿರ್ ಸಿಂಗ್, ಮುಂಬೈನ ರೆಸ್ಟೊರೆಂಟ್ ಮತ್ತು ಬಾರ್ ಮಾಲೀಕರಿಂದ ಲಂಚ ಪಡೆದು ನೀಡುವಂತೆ ಅನಿಲ್ ದೇಶಮುಖ್ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ದೂರಿದ್ದರು.

ಸಿಂಗ್ ಮಾಡಿರುವ ಆರೋಪಗಳ ಬಗ್ಗೆ ರಾಜ್ಯ ಭ್ರಷ್ಟಾಚಾರ ವಿರೋಧಿ ದಳದ ತನಿಖೆ ನಡೆಯಬೇಕೆ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಆಯೋಗಕ್ಕೆ ಆರು ತಿಂಗಳ ಸಮಯಾವಕಾಶ ನೀಡಲಾಗಿತ್ತು. ದೇಶಮುಖ್ ಅಥವಾ ಇತರ ಯಾವುದೇ ಸಿಬ್ಬಂದಿ ವಿರುದ್ಧ ಸಿಂಗ್ ಮಾಡಿರುವ ಆರೋಪಕ್ಕೆ ಆಧಾರಗಳಿವೆಯೇ ಎಂಬುದನ್ನೂ ಆಯೋಗ ಖಚಿತಪಡಿಸಬೇಕಿತ್ತು. ಈ ಆಯೋಗವನ್ನು ವಜಾ ಮಾಡುವಂತೆ ಸಿಂಗ್ ಬಾಂಬೆ ಹೈಕೋರ್ಟ್​ಗೆ ಆಗಸ್ಟ್ 4ರಂದು ಮನವಿ ಮಾಡಿದ್ದರು.

ದೇಶ್​ಮುಖ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಬಾಂಬೆ ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗಳು ಕೇಂದ್ರೀಯ ತನಿಖಾ ದಳಕ್ಕೆ (Central Bureau of Investigation – CBI) ಸೂಚನೆ ನೀಡಿವೆ. ಹೀಗಿರುವಾಗ ಚಾಂಡಿವಾಲ್ ಸಮಿತಿಯ ಅಗತ್ಯ ಏನು ಎಂದು ಪರಮ್​ಬಿರ್ ಸಿಂಗ್ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ಈ ಹಿಂದೆ ಚಾಂಡಿವಾಲ್ ಆಯೋಗವು ಹಲವು ಬಾರಿ ಸಿಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಿ, ತನ್ನೆದುರು ಹಾಜರಾಗುವಂತೆ ಹೇಳಿತ್ತು. ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಒಮ್ಮೆ ₹ 5000 ಮತ್ತೊಮ್ಮೆ ₹ 25,000 ದಂಡ ವಿಧಿಸಿತ್ತು.

ಸಿಂಗ್ ವಿರುದ್ಧ ಈವರೆಗೆ ಒಟ್ಟು ನಾಲ್ಕು ಪ್ರಥಮ ವರ್ತಮಾನ ವರದಿ (First Information Reports – FIR) ದಾಖಲಾಗಿವೆ. ಮುಂಬೈ ಮತ್ತು ಥಾಣೆ ನಗರಗಳಲ್ಲಿ ತಲಾ ಎರಡು ಎಫ್​ಐಆರ್​ಗಳು ದಾಖಲಾಗಿವೆ. ಸಿಂಗ್ ಅವರು ಲಂಚಕ್ಕಾಗಿ ಒತ್ತಾಯಿಸಿದರು ಎಂದು ವ್ಯಾಪಾರಿಯೊಬ್ಬರು ನೀಡಿದ ದೂರು ಆಧರಿಸಿ ಈ ಎಫ್​ಐಆರ್​ಗಳು ದಾಖಲಾಗಿವೆ. ಸಿಂಗ್ ವಿರುದ್ಧ ಥಾಣೆ ಪೊಲೀಸರು ಲುಕ್​ಔಟ್​ ನೊಟೀಸ್ ಜಾರಿ ಮಾಡಿದ್ದು, ಪರಮ್​ ಬಿರ್ ಸಿಂಗ್ ಅವರಿಗೆ ದೇಶಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

(Warrant issued against Param Bir Singh former Mumbai police commissioner)

ಇದನ್ನೂ ಓದಿ: ಮಹಾರಾಷ್ಟ್ರದ ಹೊರಗೆ ತನಿಖೆ ವರ್ಗಾಯಿಸಬೇಕು ಎಂಬ ಪರಮ್ ಬಿರ್ ಸಿಂಗ್ ಮನವಿ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಮುಂಬೈ ಪೊಲೀಸ್ ಇನ್​ಸ್ಪೆಕ್ಟರ್

ಇದನ್ನೂ ಓದಿ: ಮಾಜಿ ಪೊಲೀಸ್ ಆಯುಕ್ತ ಪರಮ್ ಸಿಂಗ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ತಕ್ಷಣ ರಿಪೋರ್ಟ್​ ಕೊಡಿ: ಮಹಾರಾಷ್ಟ್ರ ಸರ್ಕಾರ