ಚುನಾವಣೆಯಲ್ಲಿ ಗೆದ್ದರೆ ಪಾರ್ಕ್,ಸ್ಮಾರಕ ನಿರ್ಮಿಸುವುದಿಲ್ಲ: ಬಿಎಸ್ಪಿ ನಾಯಕಿ ಮಾಯಾವತಿ
Mayawati: ತನಗಾಗಿ ಮೀಸಲಾಗಿರುವ ಆಡಂಬರದ ಸ್ಮಾರಕಗಳು ಬೇಡ ಎಂದು ಮಾಯಾವತಿ ಪ್ರತಿಜ್ಞೆ ಮಾಡಿರುವುದು ಇದೇ ಮೊದಲಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು ಕಳೆದ ರಾಜ್ಯ ಚುನಾವಣೆಗೂ ಮುನ್ನ 2016 ರಲ್ಲಿ ಇದೇ ರೀತಿಯ ಭರವಸೆಯನ್ನು ಮತದಾರರಿಗೆ ನೀಡಿದ್ದರು.
ಲಕ್ನೋ: ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಪ್ರಚಾರ ಮಾಡಿದ ಉತ್ತರ ಪ್ರದೇಶದ (Uttar Pradesh) ಮಾಜಿ ಮುಖ್ಯಮಂತ್ರಿ ಮಾಯಾವತಿ (Mayawati) ಚುನಾವಣೆಯಲ್ಲಿ ಗೆದ್ದರೆ ಬೃಹತ್ ಪ್ರತಿಮೆಗಳು, ಸ್ಮಾರಕಗಳು ಅಥವಾ ಉದ್ಯಾನವನಗಳನ್ನು ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆ. “ನಮ್ಮ ಮಾರ್ಗದರ್ಶಕರ ಹೆಸರಿನಲ್ಲಿ ನಾವು ಯಾವುದೇ ಹೊಸ ಸ್ಮಾರಕಗಳು ಅಥವಾ ಉದ್ಯಾನವನಗಳನ್ನು ಮಾಡುವ ಅಗತ್ಯವಿಲ್ಲ. ನಮ್ಮ ಹಿಂದಿನ ಅವಧಿಯಲ್ಲಿ ಒಟ್ಟಾರೆಯಾಗಿ ನಾವು ಎಲ್ಲವನ್ನೂ ಮಾಡಿದ್ದೇವೆ” ಎಂದು ಲಕ್ನೋದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಮಾಯಾವತಿ ಹೇಳಿದ್ದಾರೆ. “ನಾನು ಮತ್ತೊಮ್ಮೆ ಸರ್ಕಾರವನ್ನು ರಚಿಸಿದರೆ, ನಾನು ಪ್ರತಿಮೆಗಳು ಅಥವಾ ಸ್ಮಾರಕಗಳು ಅಥವಾ ಉದ್ಯಾನವನಗಳ ಮೇಲೆ ಗಮನ ಹರಿಸುವ ಬದಲು ರಾಜ್ಯವನ್ನು ಸಾಧ್ಯವಾದಷ್ಟು ಸಮರ್ಥವಾಗಿ ಆಡಳಿತ ನಡೆಸಲು ಗಮನ ಹರಿಸುವೆ ಎಂದು ಬಹುಜನ ಸಮಾಜ ಪಕ್ಷದ (BSP) ನಾಯಕಿ ಹೇಳಿದ್ದಾರೆ.
ತನಗಾಗಿ ಮೀಸಲಾಗಿರುವ ಆಡಂಬರದ ಸ್ಮಾರಕಗಳು ಬೇಡ ಎಂದು ಮಾಯಾವತಿ ಪ್ರತಿಜ್ಞೆ ಮಾಡಿರುವುದು ಇದೇ ಮೊದಲಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು ಕಳೆದ ರಾಜ್ಯ ಚುನಾವಣೆಗೂ ಮುನ್ನ 2016 ರಲ್ಲಿ ಇದೇ ರೀತಿಯ ಭರವಸೆಯನ್ನು ಮತದಾರರಿಗೆ ನೀಡಿದ್ದರು.
ಮುಖ್ಯಮಂತ್ರಿಯಾಗಿ ಮಾಯಾವತಿ ಅವರು “ದಲಿತ ಹೆಮ್ಮೆ” ಹೆಸರಿನಲ್ಲಿ ತನ್ನ ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ ಮತ್ತು ಆನೆಗಳ ( ಪಕ್ಷದ ಚಿಹ್ನೆ) ದೈತ್ಯ ಪ್ರತಿಮೆಗಳುಳ್ಳ ಉದ್ಯಾನವನಗಳು ಮತ್ತು ವಿಸ್ತಾರವಾದ ಸ್ಮಾರಕಗಳನ್ನು ನಿರ್ಮಿಸಿದ್ದರು.
ದೊಡ್ಡತನದ ಮತ್ತು ಸ್ವಯಂ ಪ್ರಚಾರದ ಆರೋಪಗಳಿಂದ ತಲೆಕೆಡಿಸಿಕೊಳ್ಳದ ಮಾಯಾವತಿ ಕೋಟ್ಯಂತರ ಸಾರ್ವಜನಿಕ ಹಣದ ದುಬಾರಿಯಾದ ಯೋಜನೆಗಳಿಗೆ ಆದೇಶಿಸಿದರು. ಆಕೆಯ ಸರ್ಕಾರವು ಉತ್ತರಪ್ರದೇಶದ ಲೋಕಾಯುಕ್ತ ಅಥವಾ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್ಮನ್ ಪ್ರಕಾರ ಸ್ಮಾರಕಗಳಿಗಾಗಿ 4 1,400 ಕೋಟಿಗಳನ್ನು ಖರ್ಚು ಮಾಡಿದೆ.
2012 ರಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಮಾಯಾವತಿ ಉತ್ತರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡರು. ಆಕೆಯ ಪಕ್ಷವು ಆ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಅದರ ಕಾರ್ಯಕ್ಷಮತೆ ನಿರಂತರವಾಗಿ ಕಳಪೆಯಾಗಿದೆ.
ಈ ಬಾರಿ ಅವರು ಒಮ್ಮೆ ಬಿಎಸ್‌ಪಿಗೆ ಅಪಾರ ಚುನಾವಣಾ ಯಶಸ್ಸನ್ನು ತಂದ ಹಳೆಯ ಸೂತ್ರವನ್ನು ಮರುಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಜೂನ್ನಿಂದ ಆಕೆ ಬ್ರಾಹ್ಮಣರನ್ನು ಸಂಪರ್ಕಿಸಲು ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಂದಿನ ಸಭೆಯು ಎರಡು ತಿಂಗಳ ಹಿಂದೆ ಆರಂಭವಾದ ಪಕ್ಷದ “ಬ್ರಾಹ್ಮಣ ಸಮ್ಮೇಳನಗಳು ಉನ್ನತ ಆವೃತ್ತಿಯಾಗಿದೆ.
“ನಾವು 2022 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದಾಗ ನಾವು 2007 ರಲ್ಲಿ ಮಾಡಿದಂತೆ ನಾವು ‘ಸರ್ವಜನ್ ಹಿತಾಯ ಸರ್ವ ಜನ್ ಸುಖಾಯ (ಎಲ್ಲರಿಗೂ ಪ್ರಯೋಜನ, ಎಲ್ಲರಿಗೂ ಶಾಂತಿ)’ ನೀತಿಯನ್ನು ಜಾರಿಗೊಳಿಸುತ್ತೇವೆ. ಆ ಸಮಯದಲ್ಲಿ, ನಾವು ಕೇವಲ ದಲಿತರು ಮತ್ತು ಹಿಂದುಳಿದವರ ಹಿತಾಸಕ್ತಿಗಳನ್ನು ನೋಡದೆ ಮೇಲ್ಜಾತಿಯವರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತಿದ್ದೆವು. ನಮ್ಮ ಪಕ್ಷವು ಒಂದು ಜಾತಿ ಅಥವಾ ಧರ್ಮಕ್ಕಾಗಿ ಅಲ್ಲ. ಇದು ಸಮಾಜದ ಎಲ್ಲಾ ವರ್ಗಗಳ ಪಕ್ಷವಾಗಿದೆ ಎಂದು ಮಾಯಾವತಿ ಹೇಳಿದರು.
ಉತ್ತರ ಪ್ರದೇಶದ ಜನಸಂಖ್ಯೆಯ ಸುಮಾರು 11 ಪ್ರತಿಶತದಷ್ಟು ಬ್ರಾಹ್ಮಣರು ಎಂದು ಅಂದಾಜಿಸಲಾಗಿದೆ. ಉತ್ತರ ಪ್ರದೇಶದಲ್ಲಿ ರಾಜಕೀಯ ಮತ್ತು ಅಧಿಕಾರ ಸಮೀಕರಣಗಳಲ್ಲಿ ಸಾಂಪ್ರದಾಯಿಕವಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: Pegasus Case ಪೆಗಾಸಸ್ ಬೇಹುಗಾರಿಕೆ ಪ್ರಕರಣ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆಯನ್ನು ಸೆ.13ರವರೆಗೆ ಮುಂದೂಡಿದ ಸುಪ್ರೀಂಕೋರ್ಟ್
(If Elected no statues memorials or parks Says Former Uttar Pradesh CM Mayawati)