ಕೇರಳ ರಾಜ್ಯಪಾಲರ ಕಾರಿನ ಮೇಲೆ ದಾಳಿ, ಕಪ್ಪು ಬಾವುಟ ಪ್ರದರ್ಶನ: 7 ಎಸ್ಎಫ್ಐ ಕಾರ್ಯಕರ್ತರ ಬಂಧನ

Arif Mohammad Khan: ತಿರುವನಂತಪುರದ ರಸ್ತೆಗಳಲ್ಲಿ ಗುಂಡಾಗಳು ಆಳ್ವಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ, ಅವರು ಬಂದಾಗ ನಾನು ನನ್ನ ಕಾರನ್ನು ನಿಲ್ಲಿಸಿ (ನನ್ನ ಕಾರಿನಿಂದ) ಇಳಿದೆ. ಅವರೇಕೆ ಓಡಿಹೋದರು?... ಏಕೆಂದರೆ ಅವರ ತಂತ್ರಗಳಿಗೆ ನಾನು ಒತ್ತಡಕ್ಕೆ ಒಳಗಾಗಲು ಬಯಸುವುದಿಲ್ಲ, ಆದ್ದರಿಂದ ಅವರು ನನಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಕೇರಳ ರಾಜ್ಯಪಾಲರ ಕಾರಿನ ಮೇಲೆ ದಾಳಿ, ಕಪ್ಪು ಬಾವುಟ ಪ್ರದರ್ಶನ: 7 ಎಸ್ಎಫ್ಐ ಕಾರ್ಯಕರ್ತರ ಬಂಧನ
ಆರಿಫ್ ಮೊಹಮ್ಮದ್ ಖಾನ್
Follow us
ರಶ್ಮಿ ಕಲ್ಲಕಟ್ಟ
|

Updated on: Dec 12, 2023 | 6:37 PM

ತಿರುವನಂತಪುರಂ ಡಿಸೆಂಬರ್ 12: ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ವಾಹನದೊಳಗೆ ಇದ್ದಾಗ ಅವರ ವಾಹನದ ಮೇಲೆ ದಾಳಿ ನಡೆಸಿದ ಘಟನೆ ನಿನ್ನೆ(ಸೋಮವಾರ)ನಡೆದಿದೆ. ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಏಳು ಮಂದಿ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧಿತ ಏಳು ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 143, 149 (ಕಾನೂನುಬಾಹಿರ ಸಭೆಗೆ ಶಿಕ್ಷೆ), 147 (ಗಲಭೆಗೆ ಶಿಕ್ಷೆ), 283 (ಸಾರ್ವಜನಿಕ ಮಾರ್ಗ ಅಥವಾ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿಪಡಿಸುವುದು), 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ).ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಕೇರಳ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಪಾಲರು ಆರ್‌ಎಸ್‌ಎಸ್ ನಾಮನಿರ್ದೇಶಿತರನ್ನು ಸೆನೆಟ್ ಸದಸ್ಯರನ್ನಾಗಿ ನೇಮಿಸಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಸಂಚಾರಕ್ಕೆ ಅಡ್ಡಿಪಡಿಸಿದರು. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆದಿದ್ದಾರೆ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.

ರಾಜಭವನದ ಮೂಲಗಳ ಪ್ರಕಾರ, ಖಾನ್‌ಗೆ ಮೂರು ಸ್ಥಳಗಳಲ್ಲಿ ಕಪ್ಪು ಬಾವುಟ ತೋರಿಸಲಾಗಿದ್ದು, ಎರಡು ಸಂದರ್ಭಗಳಲ್ಲಿ ಅವರ ಕಾರಿಗೆ ಪ್ರತಿಭಟನಾಕಾರರು ಗುದ್ದಿದ್ದಾರೆ. ಮತ್ತೊಂದೆಡೆ ರಾಜ್ಯಪಾಲರ ವಾಹನವನ್ನು ಎಸ್‌ಎಫ್‌ಐ ಕಾರ್ಯಕರ್ತರು ಒಂದೇ ಸ್ಥಳದಲ್ಲಿ ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ

ತಮ್ಮ ವಿರುದ್ಧ ಎಸ್‌ಎಫ್‌ಐ ಕಪ್ಪು ಬಾವುಟ ಪ್ರತಿಭಟನೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, “ಇಂದು ತಿರುವನಂತಪುರದ ರಸ್ತೆಗಳಲ್ಲಿ ಗುಂಡಾಗಳು ಆಳ್ವಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ, ಅವರು ಬಂದಾಗ ನಾನು ನನ್ನ ಕಾರನ್ನು ನಿಲ್ಲಿಸಿ (ನನ್ನ ಕಾರಿನಿಂದ) ಇಳಿದೆ. ಅವರೇಕೆ ಓಡಿಹೋದರು?… ಏಕೆಂದರೆ ಅವರ ತಂತ್ರಗಳಿಗೆ ನಾನು ಒತ್ತಡಕ್ಕೆ ಒಳಗಾಗಲು ಬಯಸುವುದಿಲ್ಲ, ಆದ್ದರಿಂದ ಅವರು ನನಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ನನ್ನ ಕಾರಿಗೆ ಎರಡೂ ಕಡೆಯಿಂದ ಹೊಡೆದರು. ನೀವು ಯಾರನ್ನಾದರೂ ಕಾರಿನ ಬಳಿ ಬರಲು ಬಿಡುತ್ತೀರಾ? ಸಿಎಂಗೆ ಗೊತ್ತಾ?ಪೊಲೀಸರಿಗೆ ಗೊತ್ತಿತ್ತು ಆದರೆ ಸಿಎಂ ನಿರ್ದೇಶನ ನೀಡುತ್ತಿರುವಾಗ ಪೊಲೀಸರು ಏನು ಮಾಡಲು ಸಾಧ್ಯ. ಸಿಎಂ ಅವರೇ ಷಡ್ಯಂತ್ರ ಮಾಡಿ ನನ್ನನ್ನು ದೈಹಿಕವಾಗಿ ನೋಯಿಸಲು ಈ ಜನರನ್ನು ಕಳುಹಿಸುತ್ತಿದ್ದಾರೆ. ಸಾಂವಿಧಾನಿಕ ಸುವ್ಯವಸ್ಥೆ ಕುಸಿದು ಬೀಳುವುದನ್ನು ಅನುಮತಿಸಲಾಗುವುದಿಲ್ಲ ಎಂದಿದ್ದಾರೆ.

ಪಿಣರಾಯಿ ವಿಜಯನ್ ವಿರುದ್ಧ ಗುಡುಗಿದ ವಿರೋಧ ಪಕ್ಷದ ನಾಯಕರು

ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯಪಾಲರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೇರಿದಂತೆ ಪ್ರತಿಪಕ್ಷಗಳು ಪಿಣರಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಕಳೆದ ಕೆಲವು ವಾರಗಳಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕೇರಳ ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ವಿ ಮುರಳೀಧರನ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ರಾಜ್ಯಪಾಲರು ದೃಢ ನಿಲುವು ತಳೆಯುತ್ತಿರುವುದರಿಂದ ಕಳೆದ ಕೆಲವು ವಾರಗಳಿಂದ ಕೇರಳ ಸಿಎಂ ಹಾಗೂ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕೇರಳ ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದಿದ್ದಾರೆ ಮುರಳೀಧರನ್.

ರಾಜ್ಯಪಾಲರ ಮೇಲಿನ ಹಲ್ಲೆ ರಾಜ್ಯದ ಕಾನೂನು ಸುವ್ಯವಸ್ಥೆಯ ಮಟ್ಟವನ್ನು ಬಿಂಬಿಸುತ್ತದೆ ಎಂದ ಅವರು, ನಿನ್ನೆ ತಿರುವನಂತಪುರದಲ್ಲಿ ಕೇರಳ ರಾಜ್ಯಪಾಲರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಜ್ಯದ ಕಾನೂನು ಸುವ್ಯವಸ್ಥೆಯ ಮಟ್ಟವನ್ನು ಬಿಂಬಿಸುತ್ತದೆ.  “ರಾಜಭವನದಿಂದ ವಿಮಾನ ನಿಲ್ದಾಣಕ್ಕೆ ಸುಮಾರು 5 ಕಿ.ಮೀ ದೂರದ ಪ್ರಯಾಣದ ಸಮಯದಲ್ಲಿ ಅವರ ಮೇಲೆ ಮೂರು ಬಾರಿ ದಾಳಿ ನಡೆಸಲಾಯಿತು. ರಾಜ್ಯಪಾಲರ ಮೇಲೆ ದಾಳಿ ಮಾಡಲು ಈ ಜನರನ್ನು ಆಡಳಿತ ಪಕ್ಷವು ಬಿಟ್ಟಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ರಾಜ್ಯದ ಯುವಜನತೆ ಬಯಸುತ್ತಿರುವ ನವ ಕೇರಳ ಇದಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಪಿಣರಾಯಿ ವಿಜಯನ್ ಪ್ರಕಾರ ನವ ಕೇರಳವು ಹಮಾಸ್ ಭಯೋತ್ಪಾದಕರನ್ನು ಸ್ವಾಗತಿಸುತ್ತಿದೆ. ಸಂವಿಧಾನಾತ್ಮಕ ರಾಜ್ಯಪಾಲರನ್ನು ಬೆದರಿಸುತ್ತಿದೆ, ವ್ಯಾಪಕ ಭ್ರಷ್ಟಾಚಾರ, ಆರ್ಥಿಕತೆಯನ್ನು ನಾಶಪಡಿಸುತ್ತಿದೆ, ಹೂಡಿಕೆದಾರರನ್ನು ಬೆನ್ನಟ್ಟುತ್ತಿದೆ, ಉದ್ಯೋಗಗಳನ್ನು ನಾಶಪಡಿಸುತ್ತಿದೆ, ಮಾಧ್ಯಮಗಳು ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದೆ. ಅವರನ್ನು ಪ್ರಶ್ನಿಸುತ್ತಿರುವವರನ್ನು ಥಳಿಸುತ್ತಿದೆ.

ಕೇರಳದ ಮಲಯಾಳಿ ಯುವಕರು ಬಯಸುವುದು ಅದು ಅಲ್ಲ – ಕೇರಳದ ಭವಿಷ್ಯವು ಅಭಿವೃದ್ಧಿ ಹೊಂದಿದ, ಸಮೃದ್ಧ ಕೇರಳವಾಗಿದ್ದು, ಎಡ ಅಥವಾ ಅದರ ಭ್ರಷ್ಟ ಇಂಡಿಯಾ ಒಕ್ಕೂಟದ ಮಿತ್ರ ಕಾಂಗ್ರೆಸ್ ಇಲ್ಲದೆ ಮಾತ್ರ ಸಾಧ್ಯ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಎಸ್‌ಎಫ್‌ಐನ ಪ್ರತಿಭಟನೆ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. “ನಿನ್ನೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕಾರನ್ನು ತಡೆದು ಅವರ ವಾಹನದ ಮೇಲೆ ದಾಳಿ ಮಾಡಿದ್ದು ಎಸ್‌ಎಫ್‌ಐ ಗೂಂಡಾಗಳ ಅವಮಾನಕರ ವರ್ತನೆ. ಅವರ ಆಕ್ರೋಶ ಸಂಪೂರ್ಣವಾಗಿ ಅರ್ಥವಾಗುವಂತಹದ್ದಾಗಿದೆ. ಕಮ್ಯುನಿಸ್ಟ್ ಆಡಳಿತದಲ್ಲಿರುವ ಪೊಲೀಸರು ಅರಾಜಕತೆಯ ಏಜೆಂಟ್‌ಗಳಾಗಿದ್ದಾರೆ, ಆಡಳಿತ ಪಕ್ಷದ ಕೆಟ್ಟ ಅತಿಕ್ರಮಣಕ್ಕೆ ಸಹಕರಿಸಿದ್ದಾರೆ. ಅವರು ಹಲ್ಲೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಿಎಂ ವಿರುದ್ಧ ಶಾಂತಿಯುತ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವವರು,ರಾಜ್ಯಪಾಲರ ಮೇಲೆ ಹಲ್ಲೆಗೆ ಅವಕಾಶ ಮಾಡಿಕೊಟ್ಟರು. ಇದು ನಾಚಿಕೆಗೇಡು ಎಂದಿದ್ದಾರೆ.

ಇದನ್ನೂ ಓದಿ: ಮನಿ ಹೈಸ್ಟ್; ಒಡಿಶಾದಲ್ಲಿ ಕೋಟಿ ನಗದು ವಶಪಡಿಸಿರುವ ವಿಡಿಯೊ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ 

ನಾಮನಿರ್ದೇಶನಕ್ಕೆ ಹೈಕೋರ್ಟ್ ತಡೆ

ಕೇರಳ ವಿಶ್ವವಿದ್ಯಾನಿಲಯದ ಸೆನೆಟ್‌ಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನಾಲ್ವರು ವಿದ್ಯಾರ್ಥಿಗಳ ನಾಮನಿರ್ದೇಶನವನ್ನು ಕೇರಳ ಹೈಕೋರ್ಟ್ ಮಂಗಳವಾರ ತಡೆಹಿಡಿದಿದೆ. ವಿವಿಯ ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳ ಮೇಲೆ ನ್ಯಾಯಮೂರ್ತಿ ಟಿ ಆರ್ ರವಿ ಅವರು ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಲ್ಕು ವಿದ್ಯಾರ್ಥಿಗಳ ನಾಮನಿರ್ದೇಶನವನ್ನು ತಡೆಹಿಡಿದಿದ್ದಾರೆ. ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ, ಕುಲಪತಿಗಳು ಅತ್ಯುತ್ತಮ ಸಾಮರ್ಥ್ಯಗಳನ್ನು ಹೊಂದಿರುವ ನಾಲ್ಕು ವಿದ್ಯಾರ್ಥಿಗಳನ್ನು (ಹ್ಯುಮಾನಿಟೀಸ್, ವಿಜ್ಞಾನ, ಕ್ರೀಡೆ ಮತ್ತು ಆರ್ಟ್ಸ್ ತಲಾ ಒಬ್ಬರು) ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನ ಮಾಡುತ್ತಾರೆ. ಆರ್ಟ್ಸ್ ಮತ್ತು ಕ್ರೀಡೆಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳ ಖಾಲಿ ಹುದ್ದೆಗಳಲ್ಲಿ ಎರಡನೇ ಪ್ರತಿವಾದಿಯ (ಕೇರಳ ವಿಶ್ವವಿದ್ಯಾನಿಲಯ) ಸೆನೆಟ್‌ಗೆ ನಾಮನಿರ್ದೇಶನಗೊಳ್ಳುವವರೆಗೆ Ext. P9 (ಕುಲಪತಿಗಳ ನಾಮನಿರ್ದೇಶನ) ಕಾರ್ಯಾಚರಣೆಗೆ ಮಧ್ಯಂತರ ತಡೆ ಅಂದರೆ ಎರಡು ವಾರ ತಡೆನೀಡಲಾಗಿದೆ ಎಂದು ಹೈಕೋರ್ಟ್ ಆದೇಶ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ