ಬಂಗಾಳ ಚುನಾವಣೆಗೆ ಬಿಜೆಪಿ ‘ಮಹಾ’ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

West Bengal Assembly Election BJP Manifesto:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 'ಸಂಕಲ್ಪ ಪತ್ರ' ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 3,000 ರೂ. ಆರ್ಥಿಕ ನೆರವು, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ನಿರುದ್ಯೋಗಿ ಯುವಕರಿಗೆ ಭತ್ಯೆ ಹಾಗೂ 7ನೇ ವೇತನ ಆಯೋಗದ ಭರವಸೆಗಳನ್ನು ನೀಡಿದೆ. ಮಮತಾ ಬ್ಯಾನರ್ಜಿ ಆಡಳಿತದ ಬಗ್ಗೆ ಅಮಿತ್ ಶಾ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಭರವಸೆಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆಯೇ ಎಂಬುದು ಫಲಿತಾಂಶದ ಬಳಿಕ ತಿಳಿಯಲಿದೆ.

ಬಂಗಾಳ ಚುನಾವಣೆಗೆ ಬಿಜೆಪಿ ಮಹಾ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
ಅಮಿತ್ ಶಾ

Updated on: Apr 10, 2026 | 3:07 PM

ಕೋಲ್ಕತ್ತಾ, ಏಪ್ರಿಲ್ 10: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣಾ ಕಣ ಈಗ ರಂಗೇರಿದೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಭೇದಿಸಲು ಬಿಜೆಪಿ ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದ್ದು, ಭರಪೂರ ಭರವಸೆಗಳ ‘ಸಂಕಲ್ಪ ಪತ್ರ’ವನ್ನು ಮತದಾರರ ಮುಂದಿಟ್ಟಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸಂಕಲ್ಪ ಪತ್ರ ಎಂದು ಕರೆಯಲಾದ ಈ ಪ್ರಣಾಳಿಕೆಯು ರಾಜ್ಯದ ರಾಜಕೀಯ ಸಮೀಕರಣಗಳನ್ನು ಬದಲಿಸುವ ಆಕರ್ಷಕ ಯೋಜನೆಗಳನ್ನು ಒಳಗೊಂಡಿದೆ.

ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 3,000 ರೂ. ಆರ್ಥಿಕ ನೆರವು ನೀಡಲಾಗುವುದು. ಬಿಜೆಪಿ ಸರ್ಕಾರ ರಚನೆಯಾದ ಕೇವಲ ಆರು ತಿಂಗಳೊಳಗೆ ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದು. ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ. ಭತ್ಯೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ 15,000 ರೂ. ಒದಗಿಸಲಾಗುವುದು. ಸರ್ಕಾರಿ ನೌಕರರಿಗೆ 45 ದಿನಗಳೊಳಗೆ 7ನೇ ವೇತನ ಆಯೋಗ ಜಾರಿ ಹಾಗೂ ಬಾಕಿ ಇರುವ ತುಟ್ಟಿ ಭತ್ಯೆಯನ್ನು (DA) ಪಾವತಿಸುವ ಭರವಸೆ ನೀಡಲಾಗಿದೆ.

ಮಮತಾ ಆಡಳಿತದ ಮೇಲೆ ಅಮಿತ್ ಶಾ ವಾಗ್ದಾಳಿ
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, ಕಳೆದ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಕತ್ತಲೆಯ ಅವಧಿ ಎಂದು ಬಣ್ಣಿಸಿದರು.ಬಂಗಾಳದ ಜನತೆ ಈಗ ಭಯದ ವಾತಾವರಣದಲ್ಲಿದ್ದಾರೆ ಮತ್ತು ಬದಲಾವಣೆಯನ್ನು ಬಯಸುತ್ತಿದ್ದಾರೆ.
ಬಂಗಾಳದಲ್ಲಿ ದಶಕಗಳಿಂದ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಬಿಜೆಪಿಯು ವಿಶೇಷ ಆಯೋಗ ರಚಿಸುವ ಭರವಸೆ ನೀಡಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಆಯೋಗವು ಕಾರ್ಯನಿರ್ವಹಿಸಲಿದ್ದು, ಎಲ್ಲಾ ಹಿಂಸಾಚಾರದ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತರುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ.

ಮತ್ತಷ್ಟು ಓದಿ: 1971ರ ಯುದ್ಧ ನೆನಪಿಸಿಕೊಳ್ಳಿ; ಕೊಲ್ಕತ್ತಾ ಮೇಲೆ ದಾಳಿಯ ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ

ಹಂತ 1: ಏಪ್ರಿಲ್ 23, 2026 (152 ಕ್ಷೇತ್ರಗಳು)

ಹಂತ 2: ಏಪ್ರಿಲ್ 29, 2026 (142 ಕ್ಷೇತ್ರಗಳು)

ಮತ ಎಣಿಕೆ: ಮೇ 4, 2026

ಮಮತಾ ಬ್ಯಾನರ್ಜಿ ಅವರ ‘ಲಕ್ಷ್ಮೀರ್ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ‘3,000 ರೂ.’ ಮೊತ್ತದ ಭರವಸೆ ನೀಡಿದೆ. ಏಕರೂಪ ನಾಗರಿಕ ಸಂಹಿತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಈ ಭರವಸೆಗಳು ಮತದಾರರ ಮನಗೆಲ್ಲುತ್ತದೆಯೇ ಎಂಬುದನ್ನು ಮೇ 4ರ ಫಲಿತಾಂಶ ನಿರ್ಧರಿಸಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:07 pm, Fri, 10 April 26

Follow Us