ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಕೊರತೆ ನಿವಾರಣೆ ಎಂದು?
Amphotericin B Drug: ದಿಢೀರನೇ ಎದುರಾಗಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ಬಳಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸುವುದು ಈಗ ಅನಿವಾರ್ಯವಾಗಿದೆ . ಹೀಗಾಗಿ ಕೇಂದ್ರ ಫಾರ್ಮಾಸೂಟಿಕಲ್ಸ್ ಇಲಾಖೆಯು ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆ ಹೆಚ್ಚಿಸಲು ಕಂಪನಿಗಳಿಗೆ ಸೂಚಿಸಿದೆ.
ಭಾರತದಲ್ಲಿ ಕೊರೊನಾದ ಸಂಕಷ್ಟದಿಂದ ಜನರು ಇನ್ನೂ ಕಣ್ಣೀರು ಹಾಕುತ್ತಿರುವಾಗಲೇ, ಬ್ಲ್ಯಾಕ್ ಫಂಗಸ್ ಈ ಕಣ್ಣೀರನ್ನು ಇನ್ನೂ ಜಾಸ್ತಿಯಾಗಿಸಿದೆ . ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗದೇ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಡುತ್ತಿದ್ದಾರೆ. ಈಗ ಕೇಂದ್ರ ಸರ್ಕಾರವು ಅಂಪೋಟೆರಿಸಿನ್ ಬಿ ಡ್ರಗ್ಸ್ ಪೂರೈಕೆ ಹೆಚ್ಚಳಕ್ಕೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ದೇಶಕ್ಕೆ ಎಷ್ಟು ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗುತ್ತೆ? ಯಾವಾಗ ದೇಶದಲ್ಲಿ ಅಂಪೋಟೆರಿಸಿನ್ ಬಿ ಡ್ರಗ್ಸ್ ಕೊರತೆ ನಿವಾರಣೆಯಾಗುತ್ತೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.
ಭಾರತದಲ್ಲಿ ಕೊರೊನಾದ ಎರಡನೇ ಅಲೆಯ ಹೊಡೆತದಿಂದ ಸಾವಿರಾರು ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿ ಮಕ್ಕಳು ಅನಾಥರಾಗಿದ್ದಾರೆ. ಕೊರೊನಾದ ಈ ಹೊಡೆತದ ಜೊತೆಗೆ ಈಗ ಬ್ಲ್ಯಾಕ್ ಫಂಗಸ್ ಸೋಂಕು ಕೂಡ ಜನರನ್ನು ಕಾಡುತ್ತಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ನಮ್ಮ ದೇಶದಲ್ಲಿ ದಿನೇ ದಿನೇ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೂ ದೇಶದಲ್ಲಿ 7,251ಕ್ಕೂ ಹೆಚ್ಚಿನ ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ ಎಂದು ಕೇಂದ್ರ ಸರ್ಕಾರವೇ ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಬಳಸಲಾಗುತ್ತೆ. ದೇಶದಲ್ಲಿ ಸದ್ಯ ಈ ಡ್ರಗ್ಸ್ ನ ಬಾರಿ ಕೊರತೆ ಇದೆ. ವಿದೇಶದಲ್ಲಿ ಎಲ್ಲಿಯೇ ಇದ್ದರೂ, ಈ ಡ್ರಗ್ಸ್ ಅನ್ನು ಅಮದು ಮಾಡಿಕೊಂಡು ಜನರಿಗೆ ಚಿಕಿತ್ಸೆ ಕೊಡಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಬ್ಲ್ಯಾಕ್ ಫಂಗಸ್ ನಿಂದ ದೇಶದಲ್ಲಿ 219 ಮಂದಿ ಸಾವನ್ನಪ್ಪಿದ್ದಾರೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಬಳಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಪೂರೈಕೆಗಾಗಿ ಎಲ್ಲ ರಾಜ್ಯ ಸರ್ಕಾರಗಳು ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ದಿಢೀರನೇ ಎದುರಾಗಿರುವ ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ಬಳಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸುವುದು ಈಗ ಅನಿವಾರ್ಯವಾಗಿದೆ . ಹೀಗಾಗಿ ಕೇಂದ್ರ ಫಾರ್ಮಾಸೂಟಿಕಲ್ಸ್ ಇಲಾಖೆಯು ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆ ಹೆಚ್ಚಿಸಲು ಕಂಪನಿಗಳಿಗೆ ಸೂಚಿಸಿದೆ.
ಇನ್ನೂ ಬೆಂಗಳೂರಿನಲ್ಲಿ ಮಾತನಾಡಿರುವ ಕೇಂದ್ರದ ಫಾರ್ಮಾಸೂಟಿಕಲ್ಸ್ ಖಾತೆ ಮಂತ್ರಿ ಡಿ.ವಿ.ಸದಾನಂದಗೌಡ, ಬ್ಲ್ಯಾಕ್ ಫಂಗಸ್ ನಮಗೆ ಹೊಸ ಸವಾಲಾಗಿದೆ. ಇದಕ್ಕೆ ಔಷಧ ನೀಡುವುದು ಕೂಡ ಸವಾಲಾಗಿದೆ. ವಿದೇಶದಿಂದ ಡ್ರಗ್ಸ್ ಅನ್ನು ಅಮದು ಮಾಡಿಕೊಳ್ಳುತ್ತಿದ್ದೇವೆ. ನಾಳೆ ಕೇಂದ್ರ ಸರ್ಕಾರಕ್ಕೆ ಸಿಗುವ ಔಷಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಔಷಧಿ ನೀಡಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿ ಸದ್ಯ ಐದು ಕಂಪನಿಗಳು ಅಂಪೋಟೆರಿಸಿನ್ ಬಿ ಡ್ರಗ್ಸ್ ಅನ್ನು ಉತ್ಪಾದಿಸುತ್ತಿವೆ. ಭಾರತ್ ಸೆರಮ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್, ಬಿಡಿಆರ್ ಫಾರ್ಮಾಸೂಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮಾ ಲಿಮಿಟೆಡ್, ಸಿಪ್ಲಾ, ಲೈಫ್ ಕೇರ್ ಇನ್ನೋವೇಷನ್ ಕಂಪನಿಗಳು ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದಿಸುತ್ತಿವೆ. ಮೈಲಾನ್ ಲ್ಯಾಬ್ಸ್ ಕಂಪನಿಯು ಈ ಡ್ರಗ್ಸ್ ಅನ್ನು ಅಮದು ಮಾಡಿಕೊಳ್ಳುವ ಕಂಪನಿಯಾಗಿದೆ . ಈ ಐದು ಕಂಪನಿಗಳು ಉತ್ಪಾದಿಸುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಪ್ರಮಾಣ ಎಷ್ಟು, ವಿದೇಶದಿಂದ ಎಷ್ಟುನ್ನು ಅಮದು ಮಾಡಿಕೊಳ್ಳಲಾಗುತ್ತೆ ಎನ್ನುವುದನ್ನು ವಿವರ ಇಲ್ಲಿದೆ.
ಮೇ ತಿಂಗಳಲ್ಲಿ ಎಷ್ಟು ಸಿಗುತ್ತೆ? ಮೇ ತಿಂಗಳಿನಲ್ಲಿ ಭಾರತದಲ್ಲಿ 1,63,752 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಯಾಗಲಿದೆ. ಮೇ ತಿಂಗಳಿನಲ್ಲಿ ವಿದೇಶದಿಂದ 3,63,000 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಆಮದು ಮಾಡಿಕೊಳ್ಳಲಿದೆ. ಇದರಿಂದಾಗಿ ಮೇ ತಿಂಗಳಿನಲ್ಲಿ ಭಾರತಕ್ಕೆ 5,26,752 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗಲಿದೆ. ಜೂನ್ ತಿಂಗಳಲ್ಲಿ ಐದು ಕಂಪನಿಗಳು ತಮ್ಮ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಿವೆ. ಜೂನ್ ತಿಂಗಳಲ್ಲೂ ವಿದೇಶದಿಂದ ಅಂಪೋಟೆರಿಸಿನ್ ಬಿ ಡ್ರಗ್ಸ್ ಅಮದು ಮಾಡಿಕೊಳ್ಳಲಾಗುತ್ತೆ
ಜೂನ್ ತಿಂಗಳಲ್ಲಿ ಎಷ್ಟು ಸಿಗುತ್ತೆ? ಜೂನ್ ತಿಂಗಳಲ್ಲಿ ಭಾರತದಲ್ಲಿ 2,55, 114 ವಯಲ್ ಡ್ರಗ್ಸ್ ಉತ್ಪಾದನೆಯಾಗಲಿದೆ. ಜೂನ್ ತಿಂಗಳಲ್ಲಿ 3,15,000 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ವಿದೇಶದಿಂದ ಅಮದು ಮಾಡಿಕೊಳ್ಳಲಾಗುತ್ತೆ. ಇದರಿಂದಾಗಿ ಜೂನ್ ತಿಂಗಳಲ್ಲಿ ಭಾರತಕ್ಕೆ 5,70,114 ವಯಲ್ ಇಂಜೆಕ್ಷನ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗಲಿದೆ.
ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರತಕ್ಕೆ ಒಟ್ಟಾರೆ, 10 ಲಕ್ಷದ 96 ಸಾವಿರದ 866 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗಲಿದೆ. ಇನ್ನೂ ಕೇಂದ್ರ ಸರ್ಕಾರವು ಐದು ಹೊಸ ಕಂಪನಿಗಳಿಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಗೆ ಅನುಮತಿ ನೀಡಿದೆ. ಹೈದರಾಬಾದ್ ನ ನಾಟ್ಕೋ ಫಾರ್ಮಾಸೂಟಿಕಲ್ಸ್, ವಡೋದಾರ ನಗರದ ಅಲೆಂಬಿಕ್ ಫಾರ್ಮಾಸೂಟಿಕಲ್ಸ್, ಗುಜರಾತ್‌ನ ಗುಪಿಕ್ ಬಯೋಸೈನ್ಸಸ್ ಲಿಮಿಟೆಡ್, ಪುಣೆಯ ಎಂಕ್ಯೂರ್ ಫಾರ್ಮಾಸೂಟಿಕಲ್ಸ್ ಹಾಗೂ ಗುಜರಾತ್‌ನ ಲೈಕಾ ಕಂಪನಿಗಳಿಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಗೆ ಡಿಸಿಜಿಐ, ವಿಷಯ ತಜ್ಞರ ಸಮಿತಿ ಅನುಮೋದನೆ ನೀಡಿವೆ. ಈ ಐದು ಕಂಪನಿಗಳು ಜುಲೈ ತಿಂಗಳಲ್ಲಿ ಒಂದು ಲಕ್ಷದ 11 ಸಾವಿರ ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಆದರೇ, ಕೇಂದ್ರದ ಫಾರ್ಮಾಸೂಟಿಕಲ್ಸ್ ಇಲಾಖೆಯು ಈ ಐದು ಕಂಪನಿಗಳ ಪೈಕಿ ಕೆಲ ಕಂಪನಿಗಳು ಜೂನ್ ತಿಂಗಳಲ್ಲೇ ಉತ್ಪಾದನೆ ಮಾಡಲು ಕೆಲ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದಾಗಿ ಜೂನ್ ತಿಂಗಳಲ್ಲೇ ಹೆಚ್ಚುವರಿಯಾಗಿ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗಬೇಕೆಂಬುದು ಕೇಂದ್ರ ಸರ್ಕಾರದ ಪ್ಲ್ಯಾನ್.
ಇವುಗಳ ಜೊತೆಗೆ ಕೇಂದ್ರದ ಆರೋಗ್ಯ ಇಲಾಖೆಯು ವಿದೇಶಾಂಗ ಇಲಾಖೆಯ ಜೊತೆಗೂಡಿ ವಿದೇಶಗಳಿಂದ ಅಂಪೋಟೆರಿಸಿನ್ ಬಿ ಡ್ರಗ್ಸ್ ಆಮದಿಗೆ ಯತ್ನಿಸುತ್ತಿದೆ. ಕೇಂದ್ರದ ಆರೋಗ್ಯ ಇಲಾಖೆಯು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಇತರೆ ಆ್ಯಂಟಿ ಫಂಗಲ್ ಡ್ರಗ್ಸ್ ಗಳ ಖರೀದಿಗೂ ಯತ್ನಿಸುತ್ತಿದೆ. ಭಾರತದಲ್ಲಿ ಏಪ್ರಿಲ್ ತಿಂಗಳವರೆಗೂ ಆ್ಯಂಟಿ ಫಂಗಲ್ ಡ್ರಗ್ಸ್ ಆಗಿರುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಗೆ ಬೇಡಿಕೆಯೇ ಇರಲಿಲ್ಲ. ಆಸ್ಪತ್ರೆಗಳಲ್ಲಿ ತಿಂಗಳಿಗೊಬ್ಬರು ರೋಗಿ ಮಾತ್ರ ಬಂದು ದಾಖಲಾಗುತ್ತಿದ್ದರು . ಆದರೇ ಈಗ ಪ್ರಮುಖ ಆಸ್ಪತ್ರೆಗಳಲ್ಲಿ ನಿತ್ಯ 25 ರಿಂದ 50 ರೋಗಿಗಳು ಬಂದು ದಾಖಲಾಗುತ್ತಿದ್ದಾರೆ. ಓರ್ವ ರೋಗಿಯ ಚಿಕಿತ್ಸೆಗೆ 40 ರಿಂದ 60 ಇಂಜೆಕ್ಷನ್ ಬೇಕಾಗಿದೆ.
ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಅನ್ನು ಲೆಪಸೋಮಲ್ ತಂತ್ರಜ್ಞಾನ ಬಳಸಿ ಉತ್ಪಾದಿಸಲಾಗುತ್ತೆ. ಈ ಇಂಜೆಕ್ಷನ್ ಉತ್ಪಾದನೆಯ ಸೈಕಲ್ 25 ರಿಂದ 28 ದಿನ ಕಾಲಾವಕಾಶ ತೆಗೆದುಕೊಳ್ಳುತ್ತೆ. ಇಂಜೆಕ್ಷನ್ ಬಿಡುಗಡೆ ಮಾಡುವ ಮುನ್ನ ಸ್ಟೆರಿಲಿಟಿ ಪರೀಕ್ಷೆ ನಡೆಸಬೇಕು. ಸಿಡಿಎಸ್‌ಸಿಓ ಮತ್ತು ಡಿಸಿಜಿಐ ಈ ಡ್ರಗ್ಸ್ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ವಡೋದಾರದ ಅಲೆಂಬಿಕ್ ಫಾರ್ಮಾಸೂಟಿಕಲ್ಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಆರ್.ಕೆ.ಬಹೇಂತಿ ಅವರು, ತಮ್ಮ ಕಂಪನಿಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಗೆ ಡಿಸಿಜಿಐ ಒಪ್ಪಿಗೆ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ . ಈಗ ಡ್ರಗ್ಸ್ ಉತ್ಪಾದನೆಯ ಕಚ್ಚಾವಸ್ತುಗಳ ಪೂರೈಕೆಗೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ತಯಾರಕರ ಜೊತೆಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೇ ಯಾವಾಗ ಉತ್ಪಾದನೆ ಆರಂಭವಾಗುತ್ತೆ, ಯಾವಾಗ ಡ್ರಗ್ಸ್ ಪೂರೈಕೆ ಶುರುವಾಗುತ್ತೆ ಎಂಬುದರ ವಿವರ ನೀಡಲು ಆರ್.ಕೆ.ಬಹೇಂತಿ ನಿರಾಕರಿಸಿದರು . ನಾವು ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಅಂಪೋಟೆರಿಸಿನ್ ಬಿ ಡಗ್ಸ್ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ. ಅಡ್ವಾನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಮಗೆ ವಿಶ್ವಾಸ ಇದೆ ಎಂದು ಸನ್ ಫಾರ್ಮಾ ಕಂಪನಿಯ ವಕ್ತಾರರು ಇ ಮೇಲ್ ಮೂಲಕ ಟಿವಿ9ಗೆ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಬಳಸುವ ಡ್ರಗ್ಸ್ ಗಳನ್ನೇ ವೈಟ್ ಫಂಗಸ್ ಚಿಕಿತ್ಸೆಗೂ ಬಳಸಲಾಗುತ್ತೆ. ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗದೇ ಇದ್ದಾಗ, ಇನ್ನುಳಿದ ಎರಡನೇ ಹಂತದ ಆ್ಯಂಟಿ ಫಂಗಲ್ ಔಷಧಿಯನ್ನು ರೋಗಿಗಳಿಗೆ ನೀಡಿ ಚಿಕಿತ್ಸೆ ನೀಡಲಾಗುತ್ತದೆ.
ಇದನ್ನೂ ಓದಿ: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ
Rajiv Gandhi Photos: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಪರೂಪದ ಚಿತ್ರಗಳು (When is shortage of the Amphotericin B used to treat Black Fungus in India)