ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಮನೆಯಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ ಆಗುವ ಅತ್ಯಂತ ದೊಡ್ಡ ಲಾಭವೆಂದರೆ ಮಾಸಿಕ ವಿದ್ಯುತ್ ಬಿಲ್ ಕಡಿಮೆಯಾಗುವುದು. ಸೂರ್ಯನ ಬೆಳಕಿನಿಂದ ಉಚಿತವಾಗಿ ವಿದ್ಯುತ್ ಉತ್ಪಾದನೆಯಾಗುವುದರಿಂದ, ನೀವು ಸರ್ಕಾರದ ಗ್ರಿಡ್‌ನಿಂದ ಪಡೆಯುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಪ್ರತಿ ತಿಂಗಳು ಹಣ ಉಳಿತಾಯವಾಗುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರವು "ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ"ಯಂತಹ ಕಾರ್ಯಕ್ರಮಗಳ ಮೂಲಕ ಸೋಲಾರ್ ಅಳವಡಿಕೆಗೆ ಭಾರಿ ಸಬ್ಸಿಡಿ ನೀಡುತ್ತಿದೆ. ಇದರಿಂದ ಆರಂಭಿಕ ವೆಚ್ಚದ ಹೊರೆ ಕಡಿಮೆಯಾಗುತ್ತದೆ ಮತ್ತು ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಬಹುದು.

ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?
Solar Panel
Image Credit source: Getty Image

Updated on: Jul 04, 2026 | 10:19 PM

ಮುಖ್ಯಾಂಶಗಳು

  • ಮನೆ ಮೇಲೆ ಸೋಲಾರ್ ಪ್ಯಾನೆಲ್ ಹಾಕಿಸಬೇಕಾ?
  • ಸೌರ ವಿದ್ಯುತ್ ಅಳವಡಿಕೆಗೆ ಯಾವ ಯೋಜನೆ ಉತ್ತಮ?
  • ಕೇಂದ್ರ ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತದೆ?

ನವದೆಹಲಿ, ಜುಲೈ 4: ಭಾರತದಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು (Solar Panels) ಅಳವಡಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯೆಂದರೆ “ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” (PM Surya Ghar: Muft Bijli Yojana). ಪರಿಸರ ಸ್ನೇಹಿ ಜೀವನ ಮತ್ತು ವಿದ್ಯುತ್ ಉಳಿತಾಯಕ್ಕೆ ನಿಮ್ಮ ಮನೆಗೆ ಸೋಲಾರ್ ಫಲಕಗಳನ್ನು ಹಾಕಿಸಲು ನೀವು ಯೋಚಿಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ವಿವರಗಳು ಇಲ್ಲಿವೆ…

ಈ ಯೋಜನೆಯ ಪ್ರಮುಖ ಉದ್ದೇಶಗಳು:

– ದೇಶದ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು.

– ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಪರಿಸರಸ್ನೇಹಿ ಇಂಧನ ಬಳಕೆಯನ್ನು ಹೆಚ್ಚಿಸುವುದು.

– ಸಾರ್ವಜನಿಕರ ವಿದ್ಯುತ್ ಬಿಲ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು.

ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿಯ ವಿವರಗಳು:

ಪಿಎಂ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಸಿಸ್ಟಮ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಭಾರಿ ಸಬ್ಸಿಡಿಯನ್ನು ನೀಡುತ್ತದೆ. ಸಾಮಾನ್ಯ ಮಧ್ಯಮ ವರ್ಗದ ಮನೆಗಳಿಗೆ 2ರಿಂದ 3 ಕಿಲೋವ್ಯಾಟ್ ಸೋಲಾರ್ ಸಿಸ್ಟಮ್ ಸಾಕಾಗುತ್ತದೆ.

1 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 30,000 ರೂ. ಸಬ್ಸಿಡಿ ಸಿಗುತ್ತದೆ.

2 ಕಿಲೋವ್ಯಾಟ್ ಸಾಮರ್ಥ್ಯಕ್ಕೆ: 60,000 ರೂ. ಸಬ್ಸಿಡಿ ಸಿಗುತ್ತದೆ.

3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ಕಿಲೋವ್ಯಾಟ್​ ಸಾಮರ್ಥ್ಯಕ್ಕೆ: ಗರಿಷ್ಠ 78,000ರವರೆಗೆ ಸಬ್ಸಿಡಿ ದೊರೆಯುತ್ತದೆ.

ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:

– ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.

– ಸ್ವಂತ ಮನೆ ಮತ್ತು ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ, ನೆರಳು ಬೀಳದ ಟೆರೇಸ್ ಹೊಂದಿರಬೇಕು.

– ಮನೆಗೆ ಸೂಕ್ತವಾದ ವಿದ್ಯುತ್ ಸಂಪರ್ಕ ಇರಬೇಕು.

– ಈ ಹಿಂದೆ ಯಾವುದೇ ಸೌರ ಫಲಕ ಯೋಜನೆಯಡಿ ಸರ್ಕಾರದಿಂದ ಸಬ್ಸಿಡಿ ಪಡೆದಿರಬಾರದು.

ಈ ಯೋಜನೆಯಿಂದ ಗ್ರಾಹಕರಿಗೆ ಆಗುವ ಲಾಭಗಳು:

ಉಚಿತ ವಿದ್ಯುತ್: ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುವುದರಿಂದ ವಿದ್ಯುತ್ ಬಿಲ್ ಸಂಪೂರ್ಣ ಉಳಿತಾಯವಾಗುತ್ತದೆ.

ಹೆಚ್ಚುವರಿ ಆದಾಯ: ನಿಮ್ಮ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ನೀವು ಸರ್ಕಾರದ ಗ್ರಿಡ್‌ಗೆ (Bescom, Mescom ಇತ್ಯಾದಿ) ಮಾರಾಟ ಮಾಡಿ ಹಣ ಗಳಿಸಬಹುದು.

ಕಡಿಮೆ ಬಡ್ಡಿದರದಲ್ಲಿ ಸಾಲ: ಸೋಲಾರ್ ಖರೀದಿಸಲು ಹಣದ ಕೊರತೆ ಇದ್ದರೆ ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತ ಸಾಲ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್​​ಟಾಪ್ ಸೋಲಾರ್ ಸ್ಕೀಮ್

ಅರ್ಜಿ ಸಲ್ಲಿಸುವುದು ಹೇಗೆ?:

ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟು…

– ಅಧಿಕೃತ ವೆಬ್‌ಸೈಟ್‌ pmsuryaghar.gov.in ಪೋರ್ಟಲ್‌ಗೆ ಭೇಟಿ ನೀಡಿ.

– ನಿಮ್ಮ ರಾಜ್ಯ, ವಿದ್ಯುತ್ ಸರಬರಾಜು ಕಂಪನಿ (ಉದಾಹರಣೆಗೆ: BESCOM/ HESCOM/ MESCOM), ಗ್ರಾಹಕ ಖಾತೆ ಸಂಖ್ಯೆ (ನಿಮ್ಮ ಕರೆಂಟ್​ ಬಿಲ್​ನಲ್ಲಿರುತ್ತದೆ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.

– ಲಾಗಿನ್ ಆದ ನಂತರ ‘Rooftop Solar’ಗಾಗಿ ಅರ್ಜಿ ಸಲ್ಲಿಸಿ.

– ನಿಮ್ಮ ಸ್ಥಳೀಯ DISCOM ಪರಿಶೀಲಿಸುವವರೆಗೆ ಮತ್ತು ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೆ ಕಾಯಿರಿ.

– ನಿಮ್ಮ ಸ್ಥಳೀಯ ವಿದ್ಯುತ್ ಕಂಪನಿಯಿಂದ ಅನುಮೋದನೆ ಸಿಕ್ಕ ನಂತರ, ನೋಂದಾಯಿತ ವೆಂಡರ್‌ಗಳ (Registered Vendors) ಮೂಲಕ ನಿಮ್ಮ ಮನೆಯ ಮೇಲೆ ಸೋಲಾರ್ ಅಳವಡಿಸಿ.

– ಸೋಲಾರ್ ಅಳವಡಿಕೆ ಪೂರ್ಣಗೊಂಡ ನಂತರ ನೆಟ್ ಮೀಟರ್ (Net Meter) ಅಳವಡಿಕೆಗೆ ಅರ್ಜಿ ಸಲ್ಲಿಸಿ.

– ಸಬ್ಸಿಡಿ ಪಡೆಯಲು ಪಿಎಂ ಸೂರ್ಯ ಘರ್ ಯೋಜನೆಯ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ರದ್ದಾದ ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯೊಂದಿಗೆ ಸಲ್ಲಿಸಿ.

– ಅಪ್ರೂವ್ ಆದ 30 ದಿನದೊಳಗೆ ಸರ್ಕಾರದ ಸಬ್ಸಿಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us