Yashwant Sinha: ಪ್ರಜಾಪ್ರಭುತ್ವ ಉಳಿಸಲು ನನಗೆ ಮತ ನೀಡಿ; ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಮನವಿ
Presidential Election 2022: ನನ್ನ ವಿರುದ್ಧ ಹಣ ಬಲದ ಬಳಕೆಯಾಗಿದೆ. ದೇಶದಲ್ಲಿ ಪ್ರತಿಪಕ್ಷಗಳನ್ನು ಮಟ್ಟ ಹಾಕಲು ಸರ್ಕಾರಿ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಯಶವಂತ್ ಸಿನ್ಹಾ ನೇರ ಆರೋಪ ಮಾಡಿದ್ದಾರೆ.
ನವದೆಹಲಿ: ಸದ್ಯದಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ಅವರ ಅಧಿಕಾರಾವಧಿ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ (President Election 2022) ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ (Yashwant Sinha) ಈ ವೇಳೆ ಮಾತನಾಡಿದ್ದು, ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ನನಗೆ ಮತ ನೀಡಿ. ಪ್ರಜಾಪ್ರಭುತ್ವವನ್ನು ಉಳಿಸಲು ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ಎಲ್ಲ ಸಂಸದರು, ಶಾಸಕರು ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಇದು ಮಹತ್ವಪೂರ್ಣ ಚುನಾವಣೆ. ಮುಂದಿನ ದಿನಗಳಲ್ಲಿ ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಇಂದಿನ ರಾಷ್ಟ್ರಪತಿ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಇದೇ ಕಾರಣಕ್ಕೆ ನಾನು ಇಡೀ ದೇಶ ಸುತ್ತಿ, ಈ ಸಂದೇಶ ನೀಡಲು ಯತ್ನಿಸಿದ್ದೇನೆ. ಈಗ ಮತದಾನ ನಡೆಯುತ್ತಿದೆ. ಎಲ್ಲ ಮತದಾರರು ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಮತದಾನ ಮಾಡಿ. ಇದು ಗೌಪ್ಯ ಮತದಾನವಾಗಿದೆ. ದೇಶದ ಎಲ್ಲ ಮತದಾರರು ತಮ್ಮ ವಿವೇಕದ ಕರೆಗೆ ಓಗೊಟ್ಟು ನನಗೆ ಮತ ನೀಡಬೇಕು ಎಂದು ಕೋರುತ್ತೇನೆ ಎಂದು ಯಶವಂತ್ ಸಿನ್ಹಾ ಮನವಿ ಮಾಡಿದ್ದಾರೆ.
ನನ್ನ ವಿರುದ್ಧ ಹಣ ಬಲದ ಬಳಕೆಯಾಗಿದೆ. ದೇಶದಲ್ಲಿ ಪ್ರತಿಪಕ್ಷಗಳನ್ನು ಮಟ್ಟ ಹಾಕಲು ಸರ್ಕಾರಿ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ನಾನು ಕೇವಲ ರಾಜಕೀಯ ಹೋರಾಟವನ್ನಷ್ಟೇ ಅಲ್ಲದೆ ಸರ್ಕಾರಿ ಸಂಸ್ಥೆಗಳ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ ಎಂದು ಯಶವಂತ್ ಸಿನ್ಹಾ ನೇರ ಆರೋಪ ಮಾಡಿದ್ದಾರೆ. ಇದು ರಹಸ್ಯ ಮತದಾನವಾಗಿದ್ದು, ಎಲ್ಲಾ ಸಂಸದರು ಮತ್ತು ಶಾಸಕರು ತಮ್ಮ ವಿವೇಚನೆಯನ್ನು ಬಳಸಿ ನನ್ನನ್ನು ಆಯ್ಕೆ ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
My appeal to all members of the electoral college ahead of the Presidential election tomorrow. pic.twitter.com/27JVgwC8ZN
— Yashwant Sinha (@YashwantSinha) July 17, 2022
ನಾನು ಜಾತ್ಯತೀತತೆಯನ್ನು ರಕ್ಷಿಸಲು ಚುನಾವಣೆಗೆ ನಿಂತಿದ್ದೇನೆ. ಆದರೆ, ನನ್ನ ಪ್ರತಿಸ್ಪರ್ಧಿ ದ್ರೌಪದಿ ಮುರ್ಮು ಜಾತ್ಯತೀತತೆಯ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ ಎಂದು ಯಶವಂತ್ ಸಿನ್ಹಾ ಟೀಕಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಧ್ಯಕ್ಷೀಯ ಆಯ್ಕೆಯಾಗಿರುವ ದ್ರೌಪದಿ ಮುರ್ಮು ವಿರುದ್ಧ ಸಿನ್ಹಾ ಕಣಕ್ಕಿಳಿದಿದ್ದಾರೆ. ಜುಲೈ 21ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ದ್ರೌಪದಿ ಮುರ್ಮು ಅವರಿಗೆ ಬಹುಮತ ಸಿಗುವುದು ಪಕ್ಕಾ ಆಗಿದೆ.
Published On - 11:55 am, Mon, 18 July 22