
ನವದೆಹಲಿ, ನವೆಂಬರ್ 5: ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆದ ‘ಇಂಡಿಯಾ’ ಒಕ್ಕೂಟದ ಬೃಹತ್ ರ‍್ಯಾಲಿಗೆ ಗೈರುಹಾಜರಾದ ಕಾರಣಕ್ಕೆ ಭಾರತೀಯ ಯೂತ್ ಕಾಂಗ್ರೆಸ್ ಶಿಸ್ತುಕ್ರಮ ಕೈಗೊಂಡಿದ್ದು, ಸುಮಾರು 200ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಹುದ್ದೆಯಿಂದ ಅಮಾನತುಗೊಳಿಸಿದೆ. ತನ್ನ ಚಿಕ್ಕಪ್ಪ ತೀರಿಹೋದ ಕಾರಣದಿಂದ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯ ರ‍್ಯಾಲಿಗೆ ಬರಲಾಗದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹಿತ್ ರಜೋರಿಯಾ ಅವರನ್ನು ಸಹ ಯಾವುದೇ ವಿವರಣೆ ನೀಡಲು ಅವಕಾಶ ನೀಡದೆ ತಕ್ಷಣವೇ ವಜಾಗೊಳಿಸಲಾಗಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, 7 ರಾಜ್ಯಗಳ ಸುಮಾರು 185ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅಂತಿಮವಾಗಿ ಈ ಸಂಖ್ಯೆ 500ಕ್ಕೆ ಏರುವ ಸಾಧ್ಯತೆಯಿದೆ. ಮಧ್ಯಪ್ರದೇಶದಲ್ಲಿ ಗರಿಷ್ಠ 60, ಗುಜರಾತ್‌ನಲ್ಲಿ 49, ಪಶ್ಚಿಮ ಬಂಗಾಳದಲ್ಲಿ 26, ತೆಲಂಗಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ಹಿಮಾಚಲ ಪ್ರದೇಶದಲ್ಲಿ 13 ಮತ್ತು ಹರಿಯಾಣದಲ್ಲಿ 10 ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಧೈರ್ಯವಿದ್ದರೆ ಚರ್ಚೆಗೆ ಬನ್ನಿ, ಎಸ್‌ಐಆರ್ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ: ರಾಹುಲ್ ಗಾಂಧಿಗೆ ನೇರ ಸವಾಲು
15 ವರ್ಷ ಸೇವೆ ಸಲ್ಲಿಸಿದ ನಾಯಕನ ಅಮಾನತು:
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ರಜೋರಿಯಾ ಮಾತನಾಡಿ, “ಕಾಂಗ್ರೆಸ್ ಪಕ್ಷಕ್ಕಾಗಿ 15 ವರ್ಷ ದುಡಿದಿದ್ದೇನೆ. ಪ್ರತಿಭಟನೆ ನಡೆಸಿ 15 ಎಫ್‌ಐಆರ್ ದಾಖಲಾಗಿ 3-4 ಬಾರಿ ಜೈಲಿಗೂ ಹೋಗಿದ್ದೇನೆ. ಚಿಕ್ಕಪ್ಪನ ಅಂತ್ಯಕ್ರಿಯೆಯ ಕಾರ್ಯಕ್ರಮದ ಬಗ್ಗೆ ನಮ್ಮ ಪಕ್ಷದ ನಾಯಕರಿಗೆ ಮೊದಲೇ ಮಾಹಿತಿ ನೀಡಿದ್ದರೂ, ಒಂದು ಕಾರ್ಯಕ್ರಮ ತಪ್ಪಿದ್ದಕ್ಕೆ ವಿವರಣೆ ಕೇಳದೆ ವಜಾಗೊಳಿಸಿರುವುದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು’; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ
ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯ ಹಾಜರಾತಿಯನ್ನು ಪರಿಶೀಲಿಸಲು ‘ವಿತ್ ಐವೈಸಿ’ ಆ್ಯಪ್ ಹಾಗೂ ಮಿಂಟೋ ರಸ್ತೆಯಲ್ಲಿ ಬಾರ್‌ಕೋಡ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಈ ರ‍್ಯಾಲಿಯಲ್ಲಿ 15,000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಯೂತ್ ಕಾಂಗ್ರೆಸ್ ಹೇಳಿಕೊಂಡರೂ, ಆ್ಯಪ್‌ನಲ್ಲಿ ಕೇವಲ 2,831 ಪದಾಧಿಕಾರಿಗಳ ಹಾಜರಾತಿ ಮಾತ್ರ ರಿಜಿಸ್ಟರ್ ಆಗಿತ್ತು. ಹೀಗಾಗಿ, ಕಾರ್ಯಕ್ರಮಕ್ಕೆ ಬಾರದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ