ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು, ಹೇಗಿತ್ತು ಅಂದಿನ ಕಿತ್ತೂರು ಸಂಸ್ಥಾನದ ಪರಿಸ್ಥಿತಿ?
Kittur Rani Chennamma and British rule: ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು.
ಭಾರತವನ್ನು ವಶಪಡಿಸಿಕೊಂಡು ತನ್ನ ಪ್ರಭುತ್ವವನ್ನು ನೆಲೆಗೊಳಿಸಲು ಯತ್ನಿಸುತ್ತಿದ್ದ ಬ್ರಿಟಿಷರಿಗೆ (British East India Company) ಪರಿಣಾಮಕಾರಿ ಪ್ರತಿರೋಧ ಒಡ್ಡಿದ ಕನ್ನಡನಾಡಿನ ವೀರರಾಣಿ ಕಿತ್ತೂರು ಚೆನ್ನಮ್ಮ ( Kittur Rani Chennamma). ಪುಟ್ಟ ಸಂಸ್ಥಾನವಾದರೂ ಸಮೃದ್ಧವಾಗಿದ್ದ ಕಿತ್ತೂರು ಸಂಸ್ಥಾನದ (princely state) ಪ್ರಸಿದ್ಧ ದೇಸಾಯಿ ಮಲ್ಲಸರ್ಜನ ಕಿರಿಯ ಮಡದಿ ಚೆನ್ನಮ್ಮ. ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತದರ ಆಸುಪಾಸಿನ ಪ್ರದೇಶಗಳನ್ನು 1858 ರಿಂದ 1824 ರವರೆಗೆ ಆಳಿದವರೇ ಕಿತ್ತೂರಿನ ದೇಸಾಯಿಗಳು. ವಿಖ್ಯಾತ ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಟ್ಟಿಕೊಂಡ ಹಲವಾರು ಸಣ್ಣಪುಟ್ಟ ಮನೆತನಗಳಲ್ಲಿ ಕಿತ್ತೂರಿನ ದೇಸಾಯಿಗಳ ಮನೆತನವೂ ಒಂದು.
ದೇಸಾಯಿಗಳ ಮನೆತನದ ಮಲ್ಲಸರ್ಜನ ಪಟ್ಟಕ್ಕೆ ಬಂದಿದ್ದು 1782 ರಲ್ಲಿ. 700 ಹಳ್ಳಿಗಳನ್ನು ಒಳಗೊಂಡಿದ್ದು ಕಲಘಟಗಿ, ಮುನವಳ್ಳಿ, ನರಗುಂದ, ಧಾರವಾಡದವರೆಗೂ ವಿಸ್ತರಿಸಿದ್ದ ಕಿತ್ತೂರು ರಾಜ್ಯದ ಮೇಲೆ ಮಲ್ಲಸರ್ಜನ ಕಾಲದಲ್ಲಿ ಹೈದರಾಲಿ ಖಾನ್, ಟೀಪು ಸುಲ್ತಾನ್ ಮತ್ತು ಮರಾಠರು ದಾಳಿ ಮಾಡಿದ್ದರು. ಮರಾಠರು ದೇಸಾಯಿಯನ್ನು ಸೆರೆಹಿಡಿದಿದ್ದರು. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮನೇ ರಾಜ್ಯದ ಆಡಳಿತ ಸೂತ್ರಗಳನ್ನು ಹಿಡಿದಿದ್ದರು. ಪೇಶ್ವೆಗಳ ಬಂಧನದಲ್ಲಿದ್ದ ಮಲ್ಲಸರ್ಜ ತನ್ನ ಕೊನೆಗಾಲದಲ್ಲಿ ಬಿಡುಗಡೆ ಹೊಂದಿ ಕಿತ್ತೂರಿಗೆ ಹಿಂತಿರುಗಿದರೂ ಬಹುಬೇಗ ತೀರಿಕೊಂಡ.
ಮಲ್ಲಸರ್ಜನ ಮಗ ಶಿವಲಿಂಗ ರುದ್ರ ಸರ್ಜ ಪಟ್ಟಕ್ಕೆ ಬಂದರೂ ಎಂಟು ವರ್ಷಗಳಲ್ಲಿಯೇ ಅನಾರೋಗ್ಯಪೀಡಿತನಾಗಿ ಮರಣಿಸಿದ. ಈ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಇವರು ಮಾಸ್ತ ಮರಡಿ ಗೌಡರ ಮಗ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ಮಲ್ಲಸರ್ಜನನು ತೀರಿಕೊಂಡ ಬಳಿಕ ಚೆನ್ನಮ್ಮನೆ ದತ್ತಕನ ಹೆಸರಿನಿಂದ ರಾಜ್ಯಭಾರ ಮಾಡುತ್ತಿದ್ದಳು.
ತಮಗೆ ಶಿವಲಿಂಗ ರುದ್ರ ಸರ್ಜ ಸಹಾಯ ಮಾಡಿದ್ದರಿಂದ ಆತನಿಗೆ ವಂಶಪಾರಂಪರ್ಯವಾಗಿ ಕಿತ್ತೂರು ಆಳಲು ಸನ್ನದು ನೀಡಿದ್ದರು. ಇಡೀ ದೇಶವನ್ನು ತಮ್ಮ ಆಡಳಿತಕ್ಕೆ ತಂದುಕೊಳ್ಳಬೇಕೆಂಬ ಬ್ರಿಟಿಷರ ಕಾರ್ಯತಂತ್ರದ ಭಾಗವಾಗಿ ದತ್ತು ಸ್ವೀಕಾರವನ್ನು ರದ್ದು ಮಾಡಿ ಕಾನೂನು ತಂದಿದ್ದರು. ಇದೇ ನೆಪದಿಂದ ಕಿತ್ತೂರು ಕಬಳಿಸಲು ಬ್ರಿಟಿಷರು ಮುಂದಡಿಯಿಟ್ಟರು.
ಧಾರವಾಡದಲ್ಲಿ ಕಲೆಕ್ಟರ್ ಆಗಿದ್ದ ಥ್ಯಾಕರೆ ಹಾಗೂ ದಖನ್ನ ಕಮಿಷನರ್ ಆಗಿದ್ದ ಚಾಪ್ಲೀನ್ ಇಬ್ಬರೂ ಸೇರಿ ಕಿತ್ತೂರು ಆಡಳಿತವನ್ನು ತಮ್ಮ ಕಾರುಬಾರುಗಳಿಗೆ ಒಪ್ಪಿಸುವಂತೆ ಚೆನ್ನಮ್ಮನಿಗೆ ಮಾಹಿತಿ ಕಳುಹಿಸಿದರು. ಚೆನ್ನಮ್ಮ ತಮ್ಮ ದತ್ತಕವನ್ನು ಸಮರ್ಥಿಸಿಕೊಂಡು ಅದಕ್ಕೆ ಅಗತ್ಯವಾದ ಸಾಕ್ಷ್ಯಗಳನ್ನು ಒದಗಿಸಿದ್ದೇ ಅಲ್ಲದೆ ಸಮಾಧಾನವಾಗಿ ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾದರು.
ಬ್ರಿಟಿಷರು ಮೊಂಡಾಟ ಬಿಡಲಿಲ್ಲವಾದ್ದರಿಂದ ಸ್ವಾಭಿಮಾನಿಯಾದ ಚೆನ್ನಮ್ಮ ಕಿತ್ತೂರು ಸಂಸ್ಥಾನದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಳು. ವಕೀಲರನ್ನು ಸರ್ಕಾರದ ಬಳಿ ಕಳುಹಿಸಿದಳು. ಕಿತ್ತೂರು ಖಜಾನೆಗೆ ಬೀಗಮುದ್ರೆ ಹಾಕಲು ಯತ್ನಿಸಿದ್ದನ್ನು ಪ್ರತಿಭಟಿಸಿ ಅನಾವಶ್ಯಕವಾಗಿ ಕಿತ್ತೂರು ಆಡಳಿತದಲ್ಲಿ ಮೂಗುತೂರಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಳು.
ಕಿತ್ತೂರನ್ನು ರಕ್ಷಿಸಿಕೊಳ್ಳಲು ಸೇನೆಯನ್ನು ಬಲಪಡಿಸಿದ ಚೆನ್ನಮ್ಮ ಯುದ್ಧೋಪಕರಣಗಳನ್ನು ದಾಸ್ತಾನು ಮಾಡಿಸಿದಳು. ಹತ್ತಿರದ ಬೇರೆ ಸಂಸ್ಥಾನಗಳ ಸೈನಿಕರನ್ನು ಕರೆಸಿಕೊಂಡಳು. ಇದೆಲ್ಲವನ್ನು ಬಲ್ಲ ಬ್ರಿಟಿಷ್ ಸರ್ಕಾರ ಕಿತ್ತೂರನ್ನು ಕಬಳಿಸಲು ಸಂಚು ನಡೆಸುತ್ತಲೇ ಇತ್ತು. ಧಾರವಾಡದ ಕಲೆಕ್ಟರ್ ಥ್ಯಾಕರೆ ಸೈನ್ಯ ಸಮೇತನಾಗಿ 23 ಅಕ್ಟೋಬರ್ 1824 ರಲ್ಲಿ ಕಿತ್ತೂರಿಗೆ ಬಂದಿಳಿದ. ಆದರೆ ಕಿತ್ತೂರು ಕೋಟೆ ಬಾಗಿಲನ್ನು ಭದ್ರಪಡಿಸಲಾಗಿತ್ತು. ಫಿರಂಗಿಗಳಿಂದ ಬಾಗಿಲುಗಳನ್ನು ನಾಶಪಡಿಸುವ ಎಚ್ಚರಿಕೆಯನ್ನು ಆತ ನೀಡಿದರೂ ಕಿತ್ತೂರು ಸೈನ್ಯ ಜಗ್ಗಲಿಲ್ಲ.
ಕಿತ್ತೂರು ಯುದ್ಧಕ್ಕೆ ಸಿದ್ಧವಾಯ್ತು. ಕೋಟೆ ಬಾಗಿಲಲ್ಲಿ ನಿಂತಿದ್ದ ಬ್ರಿಟಿಷ್ ಸೈನ್ಯದ ಮೇಲೆ ಗುರುಸಿದ್ದಪ್ಪನ ನಾಯಕತ್ವದ ಕಿತ್ತೂರು ಸೈನ್ಯ ಮುಗಿಬಿದ್ದಿತು. ಕತ್ತಿಹಿಡಿದು ಚೆನ್ನಮ್ಮ ಕುದುರೆ ಏರಿ ಯುದ್ಧ ಭೂಮಿಯಲ್ಲಿದ್ದು ಸೈನಿಕರನ್ನು ಹುರಿದುಂಬಿಸುತ್ತಿದ್ದಳು. ಕಾಳಗ ಜೋರಾಗಿ ನಡೆಯುತ್ತಲೇ ಇತ್ತು. ಚೆನ್ನಮ್ಮನ ನೆಚ್ಚಿನ ಭಂಟನಾದ ಅಮಟೂರು ಬಾಳಪ್ಪ ಬ್ರಿಟಿಷ್ ಸೈನ್ಯದ ಮುಖ್ಯಸ್ಥ ಥ್ಯಾಕರೆಯನ್ನು ಗುಂಡಿಟ್ಟು ಕೊಂದ. ಇದರಿಂದ ಬ್ರಿಟಿಷ್ ಸೈನ್ಯಕ್ಕೆ ಹಿನ್ನಡೆಯಾಯಿತು. ಹಲವು ಬಿಳಿ ಸೈನಿಕರು ಅಸುನೀಗಿದರು. ಹಲವರು ಸೆರೆ ಸಿಕ್ಕರು. ಕಿತ್ತೂರು ಸೇನೆಯ ಕೈ ಮೇಲಾಯಿತು. ಚೆನ್ನಮ್ಮ ವಿಜಯ ಸಾಧಿಸಿದಳು.
ಬ್ರಿಟಿಷ್ ಸೈನ್ಯ ಸೋತ ವಿಚಾರ ತಿಳಿದ ದಖನ್ ಹಾಗೂ ಮುಂಬೈನಿಂದ ಬ್ರಿಟಿಷ್ ಸೈನ್ಯದ ದೊಡ್ಡ ಪಡೆ ಕಿತ್ತೂರು ಕಡೆಗೆ ಧಾವಿಸಿ ಬಂತು. ಪರಿಸ್ಥಿತಿಯನ್ನು ಅರಿತ ಚೆನ್ನಮ್ಮ, ಸಂಸ್ಥಾನದ ಸ್ಥಿತಿಗತಿಗಳನ್ನು ಮುಂಬೈನಲ್ಲಿದ್ದ ಬ್ರಿಟಿಷ್ ಮೇಲಧಿಕಾರಿಗಳಿಗೆ ತಿಳಿಹೇಳಿದರೂ ಅವರಿಗೆ ಅರ್ಥವಾಗಲಿಲ್ಲ. ಯುದ್ಧವೇ ಕೊನೆಯ ಅಸ್ತ್ರ ಎಂಬ ನಿರ್ಧಾರಕ್ಕೆ ಬ್ರಿಟಿಷರು ಬಂದಾಗಿತ್ತು. ಆಧುನಿಕ ಶಸ್ತ್ರಗಳು, ಅಪಾರ ಸೇನೆಯೊಡನೆ ಬ್ರಿಟಿಷರು ಕಿತ್ತೂರು ಕೋಟೆಗೆ ದಾಳಿ ಇಟ್ಟರು.
ಚೆನ್ನಮ್ಮನೊಡನೆ ಬ್ರಿಟಿಷ್ ಬಂಧಿಗಳನ್ನು ಬಿಡಿಸಿಕೊಳ್ಳಲು ಬ್ರಿಟಿಷ್ ಹಿರಿಯ ಅಧಿಕಾರಿಗಳು ಯತ್ನಿಸುತ್ತಿದ್ದರು. ಕೋಟೆ ಪ್ರವೇಶ ಮಾಡಬಾರದೆಂಬ ಷರತ್ತಿನೊಡನೆ ಬಂಧಿಗಳನ್ನು ಬಿಡುಗಡೆ ಮಾಡುವ ಆಶ್ವಾಸನೆಯನ್ನು ಚೆನ್ನಮ್ಮ ನೀಡಿದರೂ ಆಂಗ್ಲರು ಒಪ್ಪಲಿಲ್ಲ. ಬದಲಿಗೆ ಬೆದರಿಕೆ ಹಾಕಲು, ಒತ್ತಡ ಹೇರಲು ಶುರುವಿಟ್ಟರು. ಚೆನ್ನಮ್ಮ ಎದೆಗುಂದಲಿಲ್ಲ. ಕಿತ್ತೂರಿನ ಸ್ವಾಭಿಮಾನದ ರಕ್ಷಣೆಗೆ ಕಡೆವರೆಗೂ ಹೋರಾಟ ಮಾಡುವುದು ಸರಿ ಎಂಬ ನಿರ್ಧಾರಕ್ಕೆ ಬಂದಳು. ಆಕೆಯ ಸೇನೆ-ಸುಬೇದಾರರೂ ಒಪ್ಪಿಗೆ ಸೂಚಿಸಿದರು.
ಬ್ರಿಟಿಷರ ಶರಣಾಗತಿಯ ಮಾತಿಗೆ ಚೆನ್ನಮ್ಮ ಕಿವಿಗೊಡಲಿಲ್ಲ. ಯುದ್ಧ ಇಲ್ಲದೆ ಮಾತುಕತೆಗೆ ಚೆನ್ನಮ್ಮ ಒಲವು ತೋರಿದರೂ ಸೆರೆಯಲ್ಲಿದ್ದ ತಮ್ಮವರನ್ನು ಬಿಡಿಸಿಕೊಳ್ಳುವುದಕ್ಕೆ ಸೀಮಿತವಾಗಿದ್ದ ಬ್ರಿಟಿಷರಿಗೆ ಕಿತ್ತೂರಿನ ಕೋಟೆಯಲ್ಲಿದ್ದ ಕೆಲವು ವಿದ್ರೋಹಿಗಳು ನೆರವು ಕೊಟ್ಟು ದ್ರೋಹ ಮಾಡಿದರು. ಕಿತ್ತೂರಿನ ಸೈನಿಕರ ಹೋರಾಟದ ಕೆಚ್ಚು ಚೆನ್ನಮ್ಮನಲ್ಲಿ ಹೆಚ್ಚಿನ ವಿಶ್ವಾಸ ತಂದಿತು. ರಕ್ತಪಾತವಿಲ್ಲದೆ ಸಮಸ್ಯೆ ಬಗೆಹರಿಸಲು ಚೆನ್ನಮ್ಮ ಅನೇಕ ಬೇಡಿಕೆಗಳನ್ನು ಮುಂದಿಟ್ಟಳು. ಬ್ರಿಟಿಷರು ತಮ್ಮ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿಸಿಕೊಳ್ಳುವುದರ ವರೆಗೆ ತೆಪ್ಪಗಿದ್ದು, ನಂತರ ಕುಟಿಲ ತಂತ್ರಗಳಿಗೆ ಮುಂದಾದರು.
ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು.
ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ವಿರುದ್ಧ ಸೆಣೆಸಲು ಕಿತ್ತೂರು ಸೈನಿಕರಿಗೆ ಮದ್ದುಗುಂಡು ಸಿಗದಂತಾಯಿತು. ಬಿಳಿಯರ ದೈತ್ಯ ಸೈನ್ಯದ ಮುಂದೆ ಕಿತ್ತೂರು ಸೈನ್ಯ ಬೆಚ್ಚಿತು. ಇಲ್ಲಿ ಬ್ರಿಟಿಷರ ಕೈ ಮೇಲಾಯಿತು. ಕಿತ್ತೂರು ಯೋಧರು ಪ್ರಾಣ ತ್ಯಾಗ ಮಾಡಿದರು.
Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ
ಕೋಟೆ ಕಿರುಕಿಂಡಿಯಿಂದ ಚೆನ್ನಮ್ಮ ತಪ್ಪಿಸಿಕೊಂಡು ಹೋಗುವ ಯತ್ನ ಸಫಲವಾಗಲಿಲ್ಲ. ಸೆರೆಸಿಕ್ಕ ಆಕೆಯನ್ನು ಬೈಲಹೊಂಗಲದ ಸೆರೆಮನೆಯಲ್ಲಿಡಲಾಯಿತು. ಬ್ರಿಟಿಷರ ಸೈನ್ಯ ಕಿತ್ತೂರು ಕೋಟೆಯನ್ನು ಧೂಳಿಪಟ ಮಾಡಿತು. ಅರಮನೆಯನ್ನು ಕೆಡವಿತು. ಅಪಾರ ಸಂಪತ್ತನ್ನು ದೋಚಿತು. ಸೈನಿಕರನ್ನು, ನಾಗರಿಕರನ್ನು ಹತ್ಯೆ ಮಾಡಿತು.
ಬ್ರಿಟಿಷರಿಂದ ತಪ್ಪಿಸಿಕೊಂಡ ಸಂಗೊಳ್ಳಿ ರಾಯಣ್ಣ, ಬಾಲಣ್ಣ, ಗಜವೀರ, ಬಿಚ್ಚುಗತ್ತಿ ಚೆನ್ನಬಸವಣ್ಣ ಮೊದಲಾದವರು ಮತ್ತೆ ಸಂಘಟಿತರಾಗಿ ಬ್ರಿಟಿಷ್ ಸರ್ಕಾರಕ್ಕೆ ಬೆದರಿಕೆ ಒಡ್ಡಿ ಕಿತ್ತೂರನ್ನು ಮತ್ತೆ ಕಟ್ಟಲು ಯತ್ನಿಸಿದರೂ ಅದರಲ್ಲಿ ಅವರು ಸಫಲರಾಗಲಿಲ್ಲ. ಕಿತ್ತೂರು ನಾಡನ್ನು ಬಿಡುಗಡೆ ಮಾಡಲು ಕಿತ್ತೂರಿನ ಅನೇಕ ಭಾಗಗಳಲ್ಲಿ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಅಂತಹವನ್ನೆಲ್ಲಾ ಬ್ರಿಟಿಷರು ಸ್ಥಳೀಯ ವಿದ್ರೋಹಿಗಳ ನೆರವಿನಿಂದ ಮಟ್ಟ ಹಾಕಿದರು.
ಕಿತ್ತೂರು ರಾಣಿ ಚೆನ್ನಮ್ಮನ ಸೈನ್ಯದಲ್ಲಿ ಸಾಮಾನ್ಯ ಸೈನಿಕನಾಗಿದ್ದ ಕೆಚ್ಚೆದೆಯ ಯೋಧ ಸಂಗೊಳ್ಳಿ ರಾಯಣ್ಣ, ಸಮಾನ ಮನಸ್ಕ ಯೋಧರ ಸೇನಾ ಪಡೆಯನ್ನು ಕಟ್ಟಿ ಕಿತ್ತೂರು ಬಿಡುಗಡೆಗೆ ಯತ್ನಗಳನ್ನು ಸಮರ್ಥವಾಗಿ ಮುಂದುವರಿಯುತ್ತಲೇ ಇದ್ದ. ಸಂಗೊಳ್ಳಿ ರಾಯಣ್ಣ ಭೂಗತ ಹೋರಾಟ ಹೋರಾಟ, ಗೆರಿಲ್ಲಾ ಮಾದರಿ ಯುದ್ಧದಿಂದ ಬ್ರಿಟಿಷರು ಕೆಲ ಸಮಯ ಬೆಚ್ಚಿಬಿದ್ದರು. ಆದರೆ ರಾಣಿ ಚೆನ್ನಮ್ಮನಿಗೆ ನಿಷ್ಠನಾಗಿದ್ದ ರಾಯಣ್ಣನನ್ನು ನೇರವಾಗಿ ಹಿಡಿಯಲು ಬ್ರಿಟಿಷರಿಗೆ ಸಾಧ್ಯವಾಗಲೇ ಇಲ್ಲ.
ಮತ್ತೆ ಬ್ರಿಟಿಷರು ತಮ್ಮ ಹಳೆಯ ಚಾಳಿಯನ್ನು ಪ್ರಯೋಗಿಸಿ ರಾಯಣ್ಣನ ಆಪ್ತರಿಗೆ ಬಲೆಬೀಸಿ ಅವರಿಗೆ ಅನೇಕ ಆಮಿಷಯಗಳನ್ನು ಒಡ್ಡಿ ಸಂಗೊಳ್ಳಿ ರಾಯಣ್ಣನನ್ನು ಸೆರೆಹಿಡಿದರು. ವೀರಾವೇಶದಿಂದ ಕಿತ್ತೂರಿಗಾಗಿ ಹೋರಾಡುತ್ತಿದ್ದ ಸಂಗೊಳ್ಳಿ ರಾಯಣ್ಣನನ್ನು ಸೆರೆಹಿಡಿದು, ಆತನಿಗೆ ಮರಣದಂಡನೆ ವಿಧಿಸಿ ನಂದಗಡದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು ಬ್ರಿಟಿಷರು.
Also Read: Toe Rings -ವಿವಾಹಿತ ಮಹಿಳೆಯರು ಏಕೆ ಕಾಲುಂಗುರ ಧರಿಸುತ್ತಾರೆ ಗೊತ್ತಾ? ಅದಕ್ಕಿರುವ ಕಾಳಜಿ-ಕಾರಣವೇನು?
ಬ್ರಿಟಿಷರು ಕುಟಿಲ ತಂತ್ರಗಳಿಂದ ವಶಪಡಿಸಿಕೊಂಡ ಕಿತ್ತೂರು ಪ್ರಾಂತ್ಯವನ್ನು ಬಿಡುಗಡೆ ಮಾಡಲು ಸಂಗೊಳ್ಳಿ ರಾಯಣ್ಣ ಮಾಡಿದ ಕೊನೆ ಪ್ರಯತ್ನವೂ ವಿಫಲವಾಗಿದ್ದರಿಂದ ಕಿತ್ತೂರು ಚೆನ್ನಮ್ಮ ಸೆರೆಮನೆಯಲ್ಲಿಯೇ ಕೊರಗಲು ಮುಂದಾದಳು. ಕಿತ್ತೂರು ಸಂಸ್ಥಾನದ ಅವಸಾನದ ನೋವಿನಲ್ಲೇ ಆರು ವರ್ಷ ಬೈಲಹೊಂಗಲ ಸೆರೆಮನೆಯಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮ 1830 ರ ಫೆಬ್ರವರಿ 30ರಂದು ಮರಣಿಸಿದಳು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ ಬಹುಮುಂಚೆಯೇ (1852) ಕಿತ್ತೂರಿನ ವೀರರಾಣಿ ಚೆನ್ನಮ್ಮ ಬ್ರಿಟಿಷರಿಗೆ (1924) ಪ್ರತಿರೋಧ ಒಡ್ಡಿದ್ದು, ಸ್ವಲ್ಪ ಯಶ ಸಾಧಿಸಿದ್ದು, ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ನಿಂತಿದೆ. ಚೆನ್ನಮ್ಮ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಡೆಸಿದ ಅಪ್ರತಿಮ ಹೋರಾಟ ಇಂದಿಗೂ ಜನಮನದಲ್ಲಿ ಅಚ್ಚಳಿಯದೆ ನಿಂತಿದೆ.
(ಲೇಖಕರು- ಎನ್. ಜಗನ್ನಾಥ ಪ್ರಕಾಶ್)
ಇನ್ನಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Sat, 10 August 24