
ಕರ್ನಾಟಕದ ದಕ್ಷಿಣ ಭಾಗದಲ್ಲಿ ‘ಸ್ಟಿಂಗ್’ ನ ಗಾಳಿ ಬೀಸುತ್ತಿರುವಾಗ, ಉತ್ತರದ ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳವಣಿಗೆಯೊಂದು ನಡೆದೇ ಹೋಯಿತು. ತಿಂಗಳುಗಳಿಂದ ಸುದ್ದಿಯಲ್ಲಿರುವ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯ ಪರವಾಗಿರುವವರ ಮತ್ತು ವಿರೋಧಿಗಳ ಹೋರಾಟ, ಕುತೂಹಲಕಾರಿ ತಿರುವೊಂದನ್ನು ಪಡೆದುಕೊಂಡಿದೆ. ನದಿ ತಿರುವು ಯೋಜನೆ ವಿರೋಧಿಸುವ ಉತ್ತರ ಕನ್ನಡದ ಜನ ಶಾಂತಿಯುತವಾಗಿ ಬೆಂಗಳೂರಿನಲ್ಲಿ ಒಂದು ದಿನದ ಧರಣಿ ನಡೆಸಿದ ಬೆನ್ನಲ್ಲೇ, ಅಭಿಯಾನದ ಚುಕ್ಕಾಣಿ ಹಿಡಿದಿರುವ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಯಲ್ಲಾಪುರ ತಾಲೂಕಿನ ಕೇಂದ್ರ ಭಾಗದಲ್ಲಿ 20,000 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಹೆದ್ದಾರಿ ರಸ್ತೆ ತಡೆ ಮಾಡಿ, ರಾಜ್ಯಕ್ಕೊಂದು ಸಂದೇಶ ನೀಡಿದೆ.
ರಸ್ತೆ ತಡೆದ ಮರುದಿನವೇ ಹಾವೇರಿಯಲ್ಲಿ ಸಭೆ ನಡೆಸಿದ ಮಠಾಧಿಪತಿಗಳು ಮತ್ತು ಅವರನ್ನು ಒಂದೇ ವೇದಿಕೆಗೆ ಕರೆತಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಕುತೂಹಲಕಾರಿ ಘೋಷಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ, ಸ್ವರ್ಣವಲ್ಲೀ ಮಠಕ್ಕೆ ಹೋಗಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರನ್ನು ಈ ಯೋಜನೆಗೆ ಒಪ್ಪಿಸುವುದು ನಮ್ಮ ಕೆಲಸ ಎಂದಿದ್ದಾರೆ.
ಇದನ್ನೂ ಓದಿ: ನದಿಗಳ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ
ಆದರೆ, ಅವರು ಬಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯನ್ನು ಭೇಟಿ ಮಾಡುವ ಮೊದಲು ಬೇಡ್ತಿ ನದಿ ಪಾತ್ರದ ವೀಕ್ಷಣೆ ಮಾಡಬೇಕು. ಆಗ ಅವರಿಗೆ ವಾಸ್ತವದ ಅರಿವಾಗುವುದು ಖಂಡಿತ. ವಾಡಿಕೆಯ ಪ್ರಕಾರ, ನವೆಂಬರ್ ಮೊದಲ ವಾರದಲ್ಲಿ ನದಿ ತುಂಬಿ ಹರಿಯುತ್ತಿರಬೇಕು. ಆ ಕಾಲ ಹೋಗಿ ಅದೆಷ್ಟೋ ವರ್ಷಗಳು ಕಳೆದಿವೆ. ಈಗ ಪಾದ ಮುಳುಗುವುದು ಕಷ್ಟವಾಗಿರುವ ಬೇಡ್ತಿ ನದಿಯ ಸ್ಥಿತಿ ನೋಡಿ, ವಿರಕ್ತ ಮಠದ ಸ್ವಾಮಿಗಳು ಖಂಡಿತವಾಗಿ ಈ ಯೋಜನೆ ಬೇಡ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೇಡ್ತಿ ನದಿ ತಿರುವು ಯೋಜನೆ ಪರವಾಗಿ ಹಾವೇರಿಯಲ್ಲಿ ನಡೆಯುತ್ತಿರುವ ಹೋರಾಟದ ಹಿಂದಿನ ಶಕ್ತಿ ಮತ್ತು ರೂವಾರಿ ಒಬ್ಬರೇ, ಅವರೇ ಬಸವರಾಜ ಬೊಮ್ಮಾಯಿ. ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಆಮೇಲೆ ಬೇರೆ ಬೇರೆ ಖಾತೆ ನಿರ್ವಹಣೆ ಮಾಡಿ ಪಕ್ವಗೊಂಡಿರುವ ಬೊಮ್ಮಾಯಿ ಒಬ್ಬ ‘ನೈಸ್’ ರಾಜಕಾರಣಿ. ಮಾತಿನಲ್ಲಾಗಲಿ, ನಡೆಯಲ್ಲಾಗಲಿ ಎಲ್ಲೂ ಸಿಕ್ಕಿಬೀಳದಂತೆ ರಾಜಕೀಯ ಮಾಡುತ್ತ ಬಂದಿರುವ ಅವರು, ಮುಖ್ಯಮಂತ್ರಿಯಾದಾಗ ಮಾತ್ರ ರಾಜ್ಯದ ಜನತೆಗೆ ನಿರಾಸೆ ಮಾಡಿದರು. ಕೊನೆಗೆ ‘ಪೇ ಸಿಎಂ’ (ಮುಖ್ಯಮಂತ್ರಿಗೆ ಲಂಚ ನೀಡಿ ಎಂದರ್ಥ) ಎಂಬ ಕಾಂಗ್ರೆಸ್ ಪಕ್ಷದ ಚುನಾವಣಾ ಸಂಕಥನಕ್ಕೆ ಬಲಿಯಾಗಿ, ಅವರು ಅಧಿಕಾರ ಕಳೆದುಕೊಳ್ಳುವಂತಾಗಿದ್ದು ಈಗ ಇತಿಹಾಸ.
ಅವರ ಈಗಿನ ನಡೆಯನ್ನು ನೀವು ಇಷ್ಟಪಡ್ತಿರೋ ಅಥವಾ ಬಿಡ್ತೀರೋ, ಆದರೆ ಒಂದಂತು ಸತ್ಯ. ಹಾವೇರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬೊಮ್ಮಾಯಿಯವರು ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಜಿಲ್ಲೆಗೆ ಬೇರೆ ಸೌಲಭ್ಯ ತಂದಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಅನುಮಾನವಿದ್ದರೂ, ಓರ್ವ ಜನ ಪ್ರತಿನಿಧಿಯಾಗಿ ಜಿಲ್ಲೆಗೆ ಕುಡಿಯುವ ನೀರು ಮತ್ತು ಕೃಷಿ ಜಮೀನಿಗೆ ನೀರಾವರಿ ಹರಿಸುವ ಕನಸು ಕಂಡಿದ್ದಾರೆ. ಆ ಮೂಲಕ ಆಧುನಿಕ ಭಗೀರಥನಾಗಲು ಹೊರಟಿದ್ದಾರೆ! ಅವರ ಸ್ಥಾನದಲ್ಲಿ ಒಮ್ಮೆ ನಿಂತು ನೋಡಿದರೆ ಅವರ ನಡೆಯಲ್ಲಿ ತಪ್ಪೇನೂ ಕಾಣಿಸುತ್ತಿಲ್ಲ. ಪ್ರಜಾ ಪ್ರತಿನಿಧಿಯಾಗಿ ಏನು ಮಾಡಬೇಕೋ ಅದನ್ನೇ ಅವರು ಮಾಡುತ್ತಿದ್ದಾರೆ. ಆದ್ದರಿಂದ ಅವರ ಇಂತಹ ನಡೆಯನ್ನು ವಿರೋಧಿಸುವುದಾದರೂ ಹೇಗೆ? ಮುಂದಿನ ಮೂರು ವರ್ಷದೊಳಗೆ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ, ನದಿ ತಿರುವು ಯೋಜನೆಯನ್ನು ಜಿಲ್ಲೆಗೆ ತಂದೇ ತರುತ್ತೇನೆಂಬ ಭರವಸೆಯನ್ನು ನೀಡಿ, 2029ರ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬೊಮ್ಮಾಯಿಯವರು ವೇದಿಕೆ ಸಿದ್ಧ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ? ಜನಕಲ್ಯಾಣದ ಪ್ರಾಮಾಣಿಕ ಕಳಕಳಿಯೊಂದನ್ನು ರಾಜಕೀಯ ತಂತ್ರಕ್ಕೆ ಮಿಳಿತಗೊಳಿಸಿದ ಚತುರತೆ ಅವರದ್ದು.
ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ಹಾವೇರಿಯಲ್ಲಿ ಈ ಸಲ ನಡೆದ ಸಭೆಗೆ ಸ್ಥಳೀಯ ಮತ್ತು ಸುತ್ತಮುತ್ತಲಿನ ಊರುಗಳ ವಿರಕ್ತ ಮಠಗಳ ಸ್ವಾಮೀಜಿಗಳು ಬಂದು ನದಿ ತಿರುವು ಯೋಜನೆ ಪರವಾಗಿರುವವರಿಗೆ ಬಲ ತುಂಬಿ, ಹೋರಾಟಕ್ಕೆ ಆಶೀರ್ವದಿಸಿದ್ದರೂ, ಈ ಎಲ್ಲ ಸಭೆಗಳೂ ಏಕ ವ್ಯಕ್ತಿ ಕೇಂದ್ರಿತವಾಗಿ ನಡೆದದ್ದು ವಿಪರ್ಯಾಸ. ಹಾಗೆ ನೋಡಿದರೆ ಹಾವೇರಿ ಹೋರಾಟವನ್ನು ಸಂಪೂರ್ಣವಾಗಿ ಪ್ರಜಾಪ್ರಭುತ್ವ-ಕೇಂದ್ರಿತ ಹೋರಾಟ ಎಂದು ಹೇಳಲಾಗದು.
ಉತ್ತರ ಕನ್ನಡಿಗರ ಹೋರಾಟದ ಲಕ್ಷಣವನ್ನು ಸೂಕ್ಷ್ಮವಾಗಿ ಅವಲೋಕಿಸಿ. ಅದು ಪಕ್ಕಾ ಪ್ರಜಾಪ್ರಭುತ್ವದ ತಳಹದಿಯಲ್ಲೇ ನಡೆಯುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಅತ್ಯಂತ ಶಾಂತಿಯುತ ಹೋರಾಟ. ಕರಾವಳಿ ಮತ್ತು ಘಟ್ಟದ ಮೇಲಿನ ಹಲವಾರು ಜನಾಂಗದ ಜನ ಈ ಹೋರಾಟಕ್ಕೆ ದನಿ ಸೇರಿಸಿದ್ದಾರೆ. ಘಟ್ಟದ ಮೇಲಿನ ಜನರಿಗೆ ಮುಳುಗಡೆ ಮತ್ತು ಪರಿಸರ ರಕ್ಷಣೆಯ ಸವಾಲು ಕಾಡಿದರೆ, ಘಟ್ಟದ ಕೆಳಗಿನ ಮೀನುಗಾರರು ಮತ್ತು ಇನ್ನಿತರೆ ತಳ ಸಮುದಾಯದ ಜನಾಂಗದ ಜನರಿಗೆ ಕಾಡುತ್ತಿರುವ ಚಿಂತೆಯೇ ಬೇರೆ. ಈ ಯೋಜನೆ ಜಾರಿಯಾದರೆ ನದಿಪಾತ್ರದಲ್ಲಿ ನೀರು ಕಡಿಮೆಯಾಗಿ ಉಪ್ಪು ತಯಾರಿಕೆ ಮತ್ತು ಕೃಷಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಅವರು ಈ ಬಾರಿ ದನಿ ಎತ್ತಿದ್ದಾರೆ, ವಿರೋಧಿ ಹೋರಾಟಕ್ಕೆ ಬಲ ತುಂಬಿದ್ದಾರೆ. ಇವರ್ಯಾರೂ ಕೂಡ ವೃತ್ತಿಪರ ‘ಎನ್ಜಿಒ ಚಳವಳಿ’ ನಡೆಸುವವರಲ್ಲ. ಹಾಗಾಗಿ ಈ ಚಳವಳಿಯನ್ನು ಪ್ರಜಾ ಚಳವಳಿ ಎಂದರೆ ತಪ್ಪಿಲ್ಲ.
ಆದರೆ, ಪಕ್ಕದ ಹಾವೇರಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವ ಬೊಮ್ಮಾಯಿ ಓರ್ವ ಪ್ರಜಾಪ್ರತಿನಿಧಿಯ ಸ್ಥಾನಕ್ಕೆ ಹೇಗೆ ನ್ಯಾಯ ಒದಗಿಸುತ್ತಿದ್ದಾರೋ ಆ ರೀತಿ, ಉತ್ತರ ಕನ್ನಡದ ಜನ ಪ್ರತಿನಿಧಿಗಳು ಜನರ ದನಿಗೆ ಬಲ ನೀಡುತ್ತಿಲ್ಲ. ಉದಾಹರಣೆಗೆ ಮೊನ್ನೆಯ ಯಲ್ಲಾಪುರದ ಸಭೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಶಾಸಕ ಶಿವರಾಮ್ ಹೆಬ್ಬಾರ್ ನಡೆದುಕೊಂಡ ರೀತಿ ಪ್ರಜಾ ಪ್ರತಿನಿಧಿ ಸ್ಥಾನಕ್ಕೆ ಮಾಡಿದ ಅಪಚಾರವಲ್ಲದೇ ಇನ್ನೇನು? ಅತ್ಯಂತ ಸಮಯೋಚಿತ ಪ್ರಶ್ನೆಗಳನ್ನು ಪ್ರಜಾ ಪ್ರತಿನಿಧಿಗಳಿಗೆ ಕೇಳಿದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಬಿ.ಎಂ. ಕುಮಾರಸ್ವಾಮಿಯವರಿಗೆ ಬೆಂಡೆತ್ತಲು ಹೋಗಿ, ಈ ಇಬ್ಬರೂ ಪ್ರಜಾಪ್ರತಿನಿಧಿಗಳು ತಮ್ಮ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ.
ಹೋರಾಟದ ಸಭೆ ನಡೆದಲ್ಲೆಲ್ಲಾ ಬಂದು, “ಸ್ವಾಮೀಜಿಗಳು ಏನು ಹೇಳುತ್ತಾರೋ ಅದನ್ನು ಶಿರಸಾ ಮಾಡುತ್ತೇವೆ” ಎಂದು ಹೇಳಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತಿದ್ದ ಜಿಲ್ಲೆಯ ಪ್ರಜಾಪ್ರತಿನಿಧಗಳಿಗೆ, ಈ ಬಾರಿ ಎದುರಾಗಿದ್ದುಅರಗಿಸಿಕೊಳ್ಳಲಾದ ಗಂಭೀರ ಪ್ರಶ್ನೆಗಳು. ಜನರ ವಿಶ್ವಾಸ ಕಳೆದುಕೊಂಡಿರುವ ಜಿಲ್ಲೆಯ ಪ್ರಜಾ ಪ್ರತಿನಿಧಿಗಳು ಬೊಮ್ಮಾಯಿಯವರನ್ನು ನೋಡಿ ಕಲಿಯುವುದು ಬಹಳ ಇದೆ.
ಜಿಲ್ಲೆಗೆ ಮತ್ತು ಇಡೀ ರಾಜ್ಯದ ಹವಾಮಾನ ಮತ್ತು ಪರಿಸರವನ್ನು ಪಣಕ್ಕಿಡುವ ಯೋಜನೆಗಳು ಪಶ್ಚಿಮ ಘಟ್ಟಕ್ಕೆ ಕಾಲಿಟ್ಟರೆ ಅಲ್ಲಿಯ ಜನರಿಗಷ್ಟೇ ಅಲ್ಲ, ಇಡೀ ರಾಜ್ಯದ ಹವಾಮಾನದಲ್ಲಿ ಹೇಗೆ ವೈಪರಿತ್ಯವಾಗುತ್ತದೆ ಎಂಬುದನ್ನು ಭಾರತೀಯ ವಿಜ್ಞಾನ ಮಂದಿರದ ಪ್ರೊ ಟಿ.ವಿ. ರಾಮಚಂದ್ರ ಅವರು ನಿರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇಡೀ ರಾಜ್ಯದ ಜನರ ಭವಿಷ್ಯವನ್ನು ಕಾಯುವ ಕೆಲಸ, ಪಶ್ಚಿಮ ಘಟ್ಟದಿಂದ ಮತ್ತು ಈ ಘಟ್ಟದ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯಿಂದ ಆರಿಸಿ ಬಂದಿರುವ ಜನ ಪ್ರತಿನಿಧಿಗಳ ಮೇಲಿದೆ. ಇಂತಹ ಜವಾಬ್ದಾರಿಯನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿರುವ ಜನ ಪ್ರತಿನಿಧಿಗಳಿಗೆ, ಮುಂದೆ ಬರುವ ಚುನಾವಣೆಯಲ್ಲಿ ಪಾಠ ಕಲಿಸಬೇಕೆ? ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Fri, 6 November 26