Basavanna: “ಬಸವಣ್ಣ ಸಾಂಸ್ಕೃತಿಕ ನಾಯಕ”: ಘೋಷಣೆ ಮಾತ್ರ ಸಾಕೆ?

ಬಸವಣ್ಣನ ಭಾವಚಿತ್ರದಿಂದ ಸರ್ಕಾರೀ ಕಚೇರಿಗಳ ವಾತಾವರಣ ಬದಲಾಗಿದೆಯೇ? ಬಸವಣ್ಣನವರ ಕಾಯಕ ಸಂಸ್ಕೃತಿಯನ್ನು ಮತ್ತು 'ಕಳಬೇಡ ...ಕೊಲಬೇಡ ..ಹುಸಿಯ ನುಡಿಯಲು ಬೇಡ ..' ಎನ್ನುವ ಬಸವಣ್ಣನವರ ಸಪ್ತ ಶೀಲಗಳನ್ನು ಸರ್ಕಾರೀ ಅಧಿಕಾರಿಗಳು ಮತ್ತು ನೌಕರರು ಪಾಲಿಸುತ್ತಿದ್ದಾರೆಯೇ?

Basavanna: “ಬಸವಣ್ಣ ಸಾಂಸ್ಕೃತಿಕ ನಾಯಕ: ಘೋಷಣೆ ಮಾತ್ರ ಸಾಕೆ?
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 07, 2024 | 3:30 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ವಿಶ್ವಗುರು ಬಸವಣ್ಣನವರನ್ನು “ರಾಜ್ಯದ ಸಾಂಸ್ಕೃತಿಕ ನಾಯಕ”ಎಂದು ಘೋಷಿಸಿದ್ದಾರೆ. ಇದರ ಜತೆಗೆ ಸರ್ಕಾರೀ ಕಚೇರಿಗಳ ಗೋಡೆಗಳ ಮೇಲೆ ತೂಗು ಹಾಕಲಾಗಿರುವ ಬಸವಣ್ಣನವರ ಫೋಟೋ ಕೆಳಗೆ “ಬಸವಣ್ಣ ಸಾಂಸ್ಕೃತಿಕ ನಾಯಕ”ಎನ್ನುವ ಘೋಷ ವಾಕ್ಯವನ್ನು ಬರೆಯುವಂತೆ ಸೂಚನೆ ನೀಡಿದ್ದಾರೆ. “ಈ ಘೋಷ ವಾಕ್ಯಗಳು ರಾಜ್ಯಾದ್ಯಂತ ಮೊಳಗಲಿವೆ”ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. “ಬಸವಣ್ಣನ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು” ಎನ್ನುವ ಘನ ಉದ್ದೇಶದೊಂದಿಗೆ ಅವರು ಈ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ.

ಬಸವಣ್ಣನ ಬಗ್ಗೆ ಇಂತಹ ಪ್ರಮುಖ ನಿರ್ಧಾರವನ್ನು ಮುಖ್ಯಮಂತ್ರಿಯವರು ಕೈಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಲ್ಲ. ಸುಮಾರು ಏಳು ವರ್ಷಗಳ ಹಿಂದೆಯೇ ಸರ್ಕಾರೀ ಕಚೇರಿಗಳಲ್ಲಿ ಬಸವಣ್ಣನ ಭಾವ ಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆದೇಶ ಮಾಡಿದ್ದರು. ಬಸವಣ್ಣನ ಭಾವಚಿತ್ರದಿಂದ ಸರ್ಕಾರೀ ಕಚೇರಿಗಳ ವಾತಾವರಣ ಬದಲಾಗಿದೆಯೇ? ಬಸವಣ್ಣನವರ ಕಾಯಕ ಸಂಸ್ಕೃತಿಯನ್ನು ಮತ್ತು ‘ಕಳಬೇಡ …ಕೊಲಬೇಡ ..ಹುಸಿಯ ನುಡಿಯಲು ಬೇಡ ..’ ಎನ್ನುವ ಬಸವಣ್ಣನವರ ಸಪ್ತ ಶೀಲಗಳನ್ನು ಸರ್ಕಾರೀ ಅಧಿಕಾರಿಗಳು ಮತ್ತು ನೌಕರರು ಪಾಲಿಸುತ್ತಿದ್ದಾರೆಯೇ? ಸರ್ಕಾರೀ ಕಚೇರಿಗಳು ಸಾಮಾನ್ಯ ಜನರನ್ನು ಕಾಡುವ, ಪೀಡಿಸುವ ಸುಲಿಗೆಯ ತಾಣಗಳಾಗಿವೆ. ಕೆಲವು ಅಧಿಕಾರಿಗಳ ಮೇಲಿನ ಲೋಕಾಯುಕ್ತ ದಾಳಿಯಲ್ಲಿ ಬಯಲಾಗುವ ಬಂಗಾರದ ಆಭರಣಗಳು, ನೋಟಿನ ಕಂತೆಗಳು, ಐಷಾರಾಮಿ ಕಾರುಗಳು ಮತ್ತು ಬಂಗಲೆಗಳ ಚಿತ್ರಗಳನ್ನು ನೋಡಿದರೆ ಬೆಚ್ಚಿ ಬೀಳುವಂತೆ ಆಗುತ್ತದೆ.

ರಾಜ್ಯದ ಕೆಲವು ಅಧಿಕಾರಿಗಳ ಮತ್ತು ನೌಕರರ ಕಾರ್ಯವೈಖರಿ ಬಗ್ಗೆ ರಾಜ್ಯ ಹೈ ಕೋರ್ಟ್ ಕೂಡಾ ಕೆಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ಛೀಮಾರಿ ಹಾಕಿದೆ. 2022 ರ ಅಕ್ಟೊಬರ್ 19 ರಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರ ಕಾರ್ಯ ವೈಖರಿ ವಿರುದ್ಧ ವ್ಯಕ್ತಪಡಿಸಿದ್ದ ಕಳವಳಕಾರಿ ಅಭಿಪ್ರಾಯಗಳು ಈ ರೀತಿ ಇವೆ :”ಅಧಿಕಾರಿಗಳು…ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿರುವ ಪರಿ ಯಾವಾಗ ಸ್ಫೋಟಗೊಳ್ಳುತ್ತದೆಯೋ ಗೊತ್ತಿಲ್ಲ. ನಮ್ಮ ಜನ ಇನ್ನೂ ಸುಮ್ಮನಿದ್ದಾರೆ. ಅವರೆಲ್ಲಾ ಬಹಳ ಸಜ್ಜನರಿದ್ದಾರೆ. ಒಂದು ವೇಳೆ ನಮ್ಮಲ್ಲಿರುವಂತಹ ವ್ಯವಸ್ಥೆ ಏನಾದರೂ ಫ್ರಾನ್ಸ್, ಜರ್ಮನಿಯಂತಹ ದೇಶಗಳಲ್ಲಿ ಇದ್ದಿದ್ದರೆ ಅಲ್ಲಿನ ಜನರು ವ್ಯವಸ್ಥೆಯ ಪ್ರಮುಖರನ್ನು, ಅವರು ವಾಕಿಂಗ್ ಹೋಗುವಾಗ ಇಲ್ಲವೇ ಕಾರುಗಳಲ್ಲಿ ತೆರಳುವಾಗ ಹೊರಗೆಳೆದು ಅಧಿಕಾರಿಗಳು, ನ್ಯಾಯಮೂರ್ತಿಗಳು, ವಕೀಲರೆನ್ನದೆ ಬಾರಿಸುತ್ತಿದ್ದರು! “ಹೀಗೆ ಜನ ಸಾಮಾನ್ಯರ ದುಃಖದುಮ್ಮಾನಗಳಿಗೆ ಸ್ಪಂದಿಸುವ ಗುಣವನ್ನು ಕಳೆದುಕೊಂಡಿರುವ ಅಧಿಕಾರಿಗಳು ಮತ್ತು ನೌಕರರ ಎದುರು “ಬಸವಣ್ಣ ಸಾಂಸ್ಕೃತಿಕ ನಾಯಕ”ಎನ್ನುವ ಸಂದೇಶವನ್ನು ಮುಖ್ಯಮಂತ್ರಿಯವರು ಪ್ರದರ್ಶಿಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ? ಇದೊಂದು ಕ್ರೂರ ವಿಡಂಬನೆಯಾಗುವುದಿಲ್ಲವೇ?

ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಂದ ಹೆಚ್ಚಿನ ನಿರೀಕ್ಷೆ ಸಾಧ್ಯವಿಲ್ಲ ಎಂದುಕೊಂಡರೂ ತಮ್ಮನ್ನು ಬಸವಣ್ಣನ ನೇರ ಅನುಯಾಯಿಗಳೆಂದುಕೊಂಡಿರುವ ಕೆಲವು ರಾಜಕೀಯ ನಾಯಕರಿಗೆ ಏನಾಗಿದೆ? ” ಛಲ ಬೇಕು ಶರಣಂಗೆ ಪರಧನವ ಒಲ್ಲೆನೆಂಬ”ಎನ್ನುವ ಬಸವಣ್ಣನವರ ಸಂದೇಶವನ್ನೂ ಉಲ್ಲಂಘಿಸಿ ಕೆಲವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿಲ್ಲವೇ? ಸರ್ಕಾರೀ ಗುತ್ತಿಗೆ ಕಾಮಗಾರಿಗಳಲ್ಲಿ 40 ಪರ್ಸೆಂಟ್ ದಂಧೆಗೆ ಬಸವಣ್ಣನ ಭಾವ ಚಿತ್ರ ಅಡ್ಡಿಯಾಗಲಿಲ್ಲ ಅಲ್ಲವೇ? ಬಸವಣ್ಣನವರ ವಚನದ ಮತ್ತೊಂದು ಸಾಲು ಈ ರೀತಿಯಿದೆ:” ಛಲ ಬೇಕು ಶರಣಂಗೆ ಪರಸತಿಯ ಒಲ್ಲೆನೆಂಬ ಮಠಾಧೀಶರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಅವರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದ ನಂತರ ಮತ್ತೆ ಮಠದ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ತೀವ್ರವಾಗಿ ಪ್ರಯತ್ನಿಸುತ್ತಿರುವುದನ್ನು ನೋಡಿ ಹೈ ಕೋರ್ಟ್ ನ್ಯಾಯಮೂರ್ತಿಯವರೇ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದರು. ದಯೆಯೇ ಧರ್ಮದ ಮೂಲವೆಂದಿದ್ದರು. ಆದರೆ ಇಂತಹ ತತ್ವಗಳಿಗೆ ಅನೇಕ ಮಠಾಧೀಶರೂ ವಿಮುಖರಾಗುತ್ತಿದ್ದಾರೆ.

ಅಧಿಕಾರಸ್ಥ ರಾಜಕಾರಣಿಗಳು, ಪ್ರಭಾವಿಗಳು ಮತ್ತು ಶ್ರೀಮಂತ ಭಕ್ತರ ಒಡ್ಡೋಲಗದ ನಡುವೆ ಅವರ ಮನಸ್ಸುಗಳನ್ನು ವಿಚಿತ್ರವಾದ ಅಧಿಕಾರದ ಸುಖ ಆವರಿಸುತ್ತಿದೆ. ಅವರ ಅಂತರ್ದೃಷ್ಟಿ ಮತ್ತು ಅಂತಃಕರಣಕ್ಕೆ ಮಂಪರು ಕವಿಯುತ್ತಿದೆ. ಕೆಲವು ಸ್ವಾಮೀಜಿಗಳು ದಸರಾದರ್ಬಾರ್ ಮತ್ತು ಅಡ್ಡಪಲ್ಲಕ್ಕಿ ಉತ್ಸವಗಳಲ್ಲಿ ಸ್ವಯಂ ವಿಜೃಂಭಣೆಯಲ್ಲಿ ತೊಡಗಿದ್ದಾರೆ. ಭಕ್ತರಿಂದ ಪಾದಪೂಜೆಯನ್ನು ಮಾಡಿಸಿಕೊಳ್ಳುತ್ತಾ ಮೌಢ್ಯ ಮತ್ತು ಕಂದಾಚಾರಗಳಲ್ಲಿ ಮುಳುಗಿದ್ದಾರೆ. ಬಡ ಭಕ್ತರ ಮನೆಗಳಲ್ಲಿ ಪ್ರಸಾದ ಸ್ವೀಕರಿಸುವುದನ್ನು ಎಂದೋ ಮರೆತಿದ್ದಾರೆ. ಹೆಚ್ಚುತ್ತಿರುವ ಅತ್ಯಾಚಾರ, ಭ್ರಷ್ಟಾಚಾರ ಮತ್ತು ಅನಾಚಾರಗಳಿಂದ ಸಮಾಜ ನೈತಿಕವಾಗಿ ಅಧಃಪತನ ಹೊಂದುತ್ತಿರುವ ಬಗ್ಗೆ ಅವರಿಗೆ ಸ್ವಲ್ಪವೂ ಆತಂಕವಿಲ್ಲ. ಈಗಲಾದರೂ ಅವರ ನಡವಳಿಕೆಯಲ್ಲಿ ಸ್ವಲ್ಪವಾದರೂ ಸುಧಾರಣೆಯಾದರೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮುಖ್ಯಮಂತ್ರಿಯವರು ಘೋಷಿಸಿರುವುದು ಸಾರ್ಥಕವಾಗುತ್ತದೆ.

ಏಳು ವರ್ಷಗಳ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಅಳವಡಿಸುವ ನಿರ್ಧಾರವನ್ನು ಕೈಗೊಂಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅದ್ಧೂರಿಯಾಗಿ ಸನ್ಮಾನಿಸಿತ್ತು. ಈಗ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಅವರು ಘೋಷಣೆ ಮಾಡಿರುವುದಕ್ಕಾಗಿ ಮಠಮಾನ್ಯಗಳು ಮತ್ತು ಸಂಘಟನೆಗಳು ಮತ್ತೆ ಅವರನ್ನು ವಿಜೃಂಭಣೆಯಿಂದ ಸನ್ಮಾನ ಮಾಡಲು ಪೈಪೋಟಿ ನಡೆಸಿವೆ. ನಾವು ನಿಜ ಜೀವನದಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳದೆ ಹೀಗೆ ಬಹಿರಂಗದ ಆಡಂಬರದ ಪ್ರದರ್ಶನಗಳಲ್ಲಿ ತೊಡಗುವುದು ಕೇವಲ ಡಾಂಭಿಕತನವಾದೀತು. ಈಗ ನಮಗೆ ಅಗತ್ಯವಾಗಿರುವುದು ತೋರಿಕೆಯ ಆದರ್ಶಗಳು, ಅಸ್ಮಿತೆಗಳು, ಸ್ಫೂರ್ತಿಗಳು, ಪ್ರತಿಮೆಗಳು ಮತ್ತು ಸಂಕೇತಗಳು,ಘೋಷಣೆಗಳು ಮತ್ತು ಸ್ಲೋಗನ್ನುಗಳಲ್ಲ .ಅದರ ಬದಲು ನಮ್ಮ ನಮ್ಮ ವೈಯಕ್ತಿಕ ನೆಲೆಗಳಲ್ಲಿ ಅಂತರ್ಮುಖಿಯಾಗಿ ಆತ್ಮಾವಲೋಕನಗಳ ಮೂಲಕ ನಮ್ಮೊಳಗಿನ ಅಂಕುಡೊಂಕುಗಳನ್ನು ತಿದ್ದಿಕೊಳ್ಳಬೇಕಿದೆ.

ನಮ್ಮ ತನುಮನಗಳನ್ನು ಸಂತೈಸಿಕೊಳ್ಳಬೇಕಿದೆ. ಬಸವಣ್ಣ ಎಂಬ ಕನ್ನಡಿಯಲ್ಲಿ ನಮ್ಮ ವಿಕಾರವಾದ ರೂಪವನ್ನು ನೋಡುವ ಬದಲು ನಮ್ಮ ಅಂತರಂಗವನ್ನು ಕಿಂಚಿತ್ತಾದರೂ ಶುದ್ಧೀಕರಿಸಿಕೊಳ್ಳಬೇಕಿದೆ. ಈ ಮೂಲಕ “ಬಸವಣ್ಣನನ್ನು ಸಾಂಸ್ಕೃತಿಕ ನಾಯಕ “ಎಂದು ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದಾತ್ತ ಉದ್ದೇಶವನ್ನು ಗೌರವಿಸೋಣ.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಕೂಡಾ ಸರ್ಕಾರದಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರ,ಸ್ವಜನ ಪಕ್ಷಪಾತ ಮತ್ತು ಅದಕ್ಷತೆಯನ್ನು ನಿವಾರಿಸುವ ಮೂಲಕ ಆಡಳಿತ ಯಂತ್ರವನ್ನು ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವಂತೆ ಸಜ್ಜುಗೊಳಿಸುವತ್ತ ಆದ್ಯತೆ ಮೇರೆಗೆ ಕಾರ್ಯೋನ್ಮುಖರಾಗಬೇಕು.ಇಲ್ಲದಿದ್ದರೆ ಅವರು ಪ್ರತಿಪಾದಿಸುತ್ತಿರುವ ಬಸವಾದಿ ಶರಣರ ಆದರ್ಶ ಒಂದು ಪ್ರಹಸನದ ಮಟ್ಟದಲ್ಲಿಯೇ ಉಳಿದುಕೊಳ್ಳುತ್ತದೆ.

ಲೇಖನ: ಸಿ.ರುದ್ರಪ್ಪ

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ