- Kannada News Photo gallery Bangalore Rains: Rain disrupts traffic in many parts of Bengaluru: Traffic jams everywhere, here are the details
Bangalore Rains: ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ವಾಹನ ಸಂಚಾರಕ್ಕೆ ಅಡ್ಡಿ: ಎಲ್ಲೆಲ್ಲಿ ಟ್ರಾಫಿಕ್ ಜಾಮ್, ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್ 3: ಬೆಂಗಳೂರು ಮಹಾನಗರದ ಹಲವೆಡೆ ಜಿಟಿಜಿಟಿ ಮಳೆಯಾಗಿದ್ದರೆ ಇನ್ನು ಕೆಲವೆಡೆ ಭಾರಿ ಮಳೆ ಸುರಿದಿದೆ. ನಗರದ ಮೆಜೆಸ್ಟಿಕ್, ವಿಧಾನಸೌಧ, ಫ್ರೀಡಂಪಾರ್ಕ್, ಮಲ್ಲೇಶ್ವರಂ, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ಟೌನ್, ಲಾಲ್ಬಾಗ್, ಎಸ್ಬಿಎಂ ವೃತ್ತ ಸೇರಿದಂತೆ ಹಲವೆಡೆ ಮಳೆಯಾಗಿದೆ. ನಗರದಲ್ಲಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆ ನೀರು ನಿಂತು ಔಟರ್ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹದೇವಪುರ ವಲಯದಲ್ಲಿ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
Updated on:Apr 03, 2025 | 2:05 PM

ಮಳೆ ನೀರಿನ ಜೊತೆ ತೇಲಿಬರುತ್ತಿರುವ ಕಸ, ಪ್ಲಾಸ್ಟಿಕ್ ಬಾಟಲಿಗಳು ವಾಹನ ಸವಾರರಿಗೆ ತೊಂದರೆಯೊಡ್ಡಿವೆ. ರಸ್ತೆ ಗುಂಡಿ ಗುಂಡಿಯಲ್ಲಿ ಚಲಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಫ್ಲೈಓವರ್ಗಳ ಕೆಳಗೆ ಬೈಕ್ ನಿಲ್ಲಿಸಿ ಸವಾರರು ಆಶ್ರಯ ಪಡೆದರು.

ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ವೈಟ್‌ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇನ್ನು ಹಲವೆಡೆ ರಸ್ತೆಗಳನ್ನು ಅಗೆಯಲಾಗಿದೆ. ಇಷ್ಟು ದಿನ ಬಿಸಿಲು ಹಾಗೂ ಧೂಳಿನಿಂದ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು ಇದೀಗ ನೀರು ನಿಂತಿರುವ ಗುಂಡಿಗಳ ಮೇಲೆ ಚಲಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಣತ್ತೂರು ಸೇತುವೆ ಯಿಂದ ಕಾಡುಬೀಸನಹಳ್ಳಿ ಕಡೆಗೆ, ಕಸ್ತೂರಿ ನಗರದಿಂದ ರಾಮಮೂರ್ತಿ ನಗರದ ಕಡೆಗೆ, ದಾಲ್ಮೀಯಾ ಟು ವೆಗಾ ಸಿಟಿ ಮಾಲ್, ಹಾರೇಹಳ್ಳಿ ಮುಖ್ಯ ರಸ್ತೆ ಯಿಂದ ವಿಷ್ಣುವರ್ಧನ ರಸ್ತೆ ಕಡೆಗೆ ಮಳೆ ನೀರು ನಿಂತಿರುವುದರಿಂದ ಸಂಚಾರ ದಟ್ಟಣೆ ಇರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರ್ ಫೈಓವರ್ ಕಡೆಗೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ 80 ಅಡಿ ರಸ್ತೆ ಕಡೆಗೆ ಹಾಗೂ ವಸಂತನಗರ ಅಂಡರ್ ಪಾಸ್ ಪ್ರದೇಶಗಳಲ್ಲಿಯೂ ಮಳೆ ನೀರು ನಿಂತಿದ್ದು ನಿಧಾನಗತಿಯ ಸಂಚಾರ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಐಟಿಐ ಭವನ ದಿಂದ ಬಾಣಸವಾಡಿ ಸರ್ವಿಸ್ ರಸ್ತೆ ಕಡೆಗೆ , ವಾಹನಗಳ ದಟ್ಟಣೆಯಿಂದಾಗಿ ನಿಧಾನಗತಿಯಲ್ಲಿ ಸಂಚಾರವಿರುತ್ತದೆ. ಪುಟ್ಟೇನಹಳ್ಳಿ ಅಂಡರ್‌ಪಾಸ್‌ನಲ್ಲಿ ಮಳೆ ನೀರುನಿಂತಿರುವುದರಿಂದ ಜೆ.ಪಿ.ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಉದಯ ಟಿವಿ ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಜಯಮಹಲ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 2:04 pm, Thu, 3 April 25




