
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿರುವ ಕೆಐಎಬಿ ಇಂದು ತಮ್ಮ ಮಹಿಳಾ ಸಿಬ್ಬಂದಿಗೆ ವಿಶೇಷ ರಂಗೋಲಿ ಸ್ಪರ್ಧೆಯನ್ನ ಆಯೋಜನೆ ಮಾಡಿತ್ತು.
ಕೆಂಪೇಗೌಡ ಏರ್ಪೋರ್ಟ್ನ ಮಹಿಳಾ ಸಿಬ್ಬಂದಿ ದಿನದ 24 ಗಂಟೆ ಕೆಲಸದಲ್ಲೇ ಬ್ಯುಸಿಯಾಗಿರುತ್ತಾರೆ. ಆದರೆ ಇಂದು ಮಾತ್ರ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಸ್ಪರ್ಧೆಗಿಳಿದಿದ್ದರು. ಕಲರ್ ಕಲರ್ ರಂಗೋಲಿಯಲ್ಲಿ ಚಿತ್ತಾರ ಮೂಡಿಸಿದ್ದಾರೆ. ಮಹಿಳಾ ಸಿಬ್ಬಂದಿ ಕೈಚಳಕಕ್ಕೆ ಏರ್‌ಪೋರ್ಟ್ ಆಡಳಿತ ಮಂಡಳಿಯೇ ಅಚ್ಚರಿಗೊಂಡಿದೆ.
ಏರ್ಪೋರ್ಟ್ನ ಟರ್ಮಿನಲ್ 2ರ ಆಗಮನ ದ್ವಾರದ ಬಳಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, 1 ಗಂಟೆ ಅವಧಿಯಲ್ಲಿ ಕಲರ್ ಫುಲ್ ಆಗಿ ರಂಗೋಲಿ ಬಿಡಿಸುವ ಮೂಲಕ ಮಹಿಳೆಯರು ನೋಡುಗರನ್ನ ಅಚ್ಚರಿಗೊಳಿಸಿದರು. ಏರ್ಪೋರ್ಟ್ನಲ್ಲಿ ಕೆಲಸ ಮಾಡುವ ವಿವಿಧ ವಿಭಾಗಗಳ 51 ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಜಂಬೂಸವಾರಿ, ಮೈಸೂರು ಅರಮನೆ, ಗಣೇಶ, ಗೋವು ಹೀಗೆ ಹಲವು ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಏರ್‌ಪೋರ್ಟ್ ಮಹಿಳಾ ಸಿಬ್ಬಂದಿ ಎಲ್ಲರನ್ನು ಬೆರಗಾಗುವಂತೆ ಮಾಡಿದರು. ಇನ್ನು ಅತ್ಯುತ್ತಮವಾಗಿ ಮೂಡಿಬಂದ ರಂಗೋಲಿಗೆ ಏರ್‌ಪೋರ್ಟ್ ಆಡಳಿತ ಮಂಡಳಿ ಬಹುಮಾನವನ್ನು ನೀಡಿದೆ.
ಒಟ್ಟಾರೆಯಾಗಿ ಏರ್‌ಪೋರ್ಟ್ ಮಹಿಳಾ ಸಿಬ್ಬಂದಿ ಇಂದು ವಿವಿಧ ಚಿತ್ತಾರಗಳ ರಂಗೋಲಿಯನ್ನ ಬಿಡಿಸುವ ಮೂಲಕ ನವರಾತ್ರಿಯನ್ನ ಸಂಭ್ರಮವನ್ನ ಸಡಗರದಿಂದ ಆಚರಿಸಿದರು.