- Kannada News Photo gallery Bengaluru Road Potholes: CM Siddaramaiah Inspects City Roads, warns Officials
ಬೆಂಗಳೂರು ರಸ್ತೆ ಗುಂಡಿ: ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್, ಅಧಿಕಾರಿಗಳ ವಿರುದ್ಧ ಸಿದ್ದು ಸಿಡಿಮಿಡಿ
ಬೆಂಗಳೂರು, ಸೆಪ್ಟೆಂಬರ್ 27: ರಾಜಧಾನಿ ಬೆಂಗಳೂರಿನ ಹದಗೆಟ್ಟ ರಸ್ತೆಗಳ ಬಗ್ಗೆ ‘ಟಿವಿ9’ ನಿರಂತರ ಅಭಿಯಾನದ ಮೂಲಕ ಸರ್ಕಾರದ ಕಣ್ಣುತೆರೆಸುವ ಕೆಲಸ ಮಾಡಿತ್ತು. ಐಟಿಸಿಟಿಯ ಗುಂಡಿ ಬಿದ್ದ ರಸ್ತೆಗಳನ್ನು ‘ಏನ್ ರೋಡ್ ಗುರು’ ಅಭಿಯಾನದ ಮೂಲಕ ತೆರೆದಿಡುವ ಕೆಲಸ ಮಾಡಿತ್ತು. ಈ ಅಭಿಯಾನದ ಬೆನ್ನಲ್ಲೆ ಅಲರ್ಟ್ ಆದ ಸರ್ಕಾರ ರಾಜಧಾನಿಯ ರಸ್ತೆಗಳ ಮೇಲೆ ಗಮನಹರಿಸಲು ಹೊರಟಿದೆ. ಖುದ್ದು ಯಾವೇ ಫೀಲ್ಡ್ ಗಿಳಿದ ಸಿಎಂ ಸಿದ್ದರಾಮಯ್ಯ ಶನಿವಾರ ಸಿಟಿ ರೌಂಡ್ಸ್ ನಡೆಸುವ ಮೂಲಕ ರಾಜಧಾನಿಯ ರಸ್ತೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ.
Updated on: Sep 27, 2025 | 7:16 PM

ಬೆಂಗಳೂರಿನ ಹಲವು ರಸ್ತೆಗಳಲ್ಲಿನ ಗುಂಡಿ ಗಂಡಾಂತರದ ಬಗ್ಗೆ ಟಿವಿ9 ನಿರಂತರ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ಜಿಬಿಎ ಹಲವೆಡೆ ಗುಂಡಿಗಳಿಗೆ ತೇಪೆ ಹಚ್ಚುವ ಕೆಲಸ ಮಾಡಿತ್ತು. ಇದೀಗ ರಾಜಧಾನಿಯ ರಸ್ತೆಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿದ್ದಾರೆ. ಶನಿವಾರ ಮಧ್ಯಾಹ್ನ ಜಿಬಿಎ ಅಧಿಕಾರಿಗಳ ಜೊತೆ ಸಿಟಿ ರೌಂಡ್ಸ್ ನಡೆಸಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಪ್ರಮುಖ ರಸ್ತೆಗಳ ಸ್ಥಿತಿಗತಿಗಳನ್ನ ಪರಿಶೀಲಿಸಿದ್ದಾರೆ.

ಕೃಷ್ಣಾ ನಿವಾಸದಿಂದ ಸಿಟಿರೌಂಡ್ಸ್ ಆರಂಭಿಸಿದ ಸಿಎಂ ಸಿದ್ದರಾಮಯ್ಯ ವಿಂಡ್ಸರ್ ಮ್ಯಾನರ್, ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ ರೌಂಡ್ಸ್ ಹಾಕಿದರು. ಈ ವೇಳೆ ರಸ್ತೆ ಬದಿಯೇ ತ್ಯಾಜ್ಯ, ಕಸ ಹಾಕಿರೋದನ್ನು ಕಂಡು ಗರಂ ಆದ ಸಿದ್ದರಾಮಯ್ಯ, ಜಿಬಿಎ ಕಮಿಷನರ್ ಹಾಗೂ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಕಸ ಹಾಕಿರೋದನ್ನು ನೋಡಬಾರದ ಎಂದು ಇಂಜಿನಿಯರ್ಗೆ ಗದರಿದ ಸಿಎಂ, ಇಂಜಿನಿಯರ್ ಮೇಲೆ ಕೇಸ್ ಹಾಕುತ್ತೇವೆ ಎಂದು ಕಿಡಿಕಾರಿದರು. ಇತ್ತ ಬೆನ್ನಿಗಾನಹಳ್ಳಿ ಫ್ಲೈ ಓವರ್ ಮೂಲಕ ತೆರಳಿದ ಸಿಎಂ ಸಿದ್ದರಾಮಯ್ಯ, ರಸ್ತೆ ಮಧ್ಯೆ ವಾಹನಗಳ ಮಧ್ಯೆ ಸಿಲುಕಿದ ಆಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದರು.

ಬಳಗೆರೆಯ ರಸ್ತೆಯಲ್ಲೇ ಸಾಗಿದ ಸಿಎಂ ಸಿದ್ದರಾಮಯ್ಯ ಈ ಮಾರ್ಗದ ರಸ್ತೆಗಳಲ್ಲಿ ಆಗಿರುವ ಟಾರ್ ಹಾಕುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ಇತ್ತ ವಿಬ್ ಗಯರ್ ಸ್ಕೂಲ್ ರಸ್ತೆ ಸೇರಿ ಹಲವೆಡೆ ರಸ್ತೆಗುಂಡಿಗಳನ್ನ ಮುಚ್ಚುವ ಕೆಲಸದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಗುಂಡಿಬಿದ್ದ ರಸ್ತೆಗಳನ್ನ ಸರಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇತ್ತ ಕೆಲವೆಡೆ ಟಾರ್ ಸರಿಯಾಗಿ ಹಾಕಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಆಯಾ ಗುತ್ತಿಗೆದಾರರು ರಸ್ತೆಗಳನ್ನ ಸರಿಯಾಗಿ ನಿರ್ವಹಣೆ ಮಾಡಬೇಕು ಅಂತಾ ಸೂಚನೆ ನೀಡಿದರು.

ಅತಿಹೆಚ್ಚು ತೆರಿಗೆ ಸಂಗ್ರಹ ಆಗುವ ಮಹದೇವಪುರ ಕ್ಷೇತ್ರದಲ್ಲಿ ರಸ್ತೆಗುಂಡಿಗಳ ಕಾಟ ಹೆಚ್ಚಾಗಿರೋ ಬಗ್ಗೆ ಟಿವಿ9 ಜೊತೆ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಅಳಲು ತೋಡಿಕೊಂಡರು. ನಮ್ಮ ಕ್ಷೇತ್ರದಿಂದ ಅತಿಹೆಚ್ಚು ತೆರಿಗೆ ಸಂಗ್ರಹ ಆಗುತ್ತೆ, ಆದರೆ ಈ ಭಾಗದಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಿದೆ ಅಂತಾ ಐಟಿ ಉದ್ಯೋಗಿಗಳು, ಸಾರ್ವಜನಿಕರಿಂದ ಸಾಲು ಸಾಲು ದೂರು ಬರ್ತಿದೆ, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಗುಂಡಿಗಳನ್ನ ಮುಚ್ಚಿಸಲು ಮನವಿ ಮಾಡ್ತೀನಿ ಎಂದರು.

ಒಟ್ಟಿನಲ್ಲಿ ಸಾಲು ಸಾಲು ಅವಾಂತರಗಳ ಬಳಿಕ ರಾಜಧಾನಿಯ ರಸ್ತೆಗುಂಡಿಗಳನ್ನ ಮುಚ್ಚುವಂತೆ ಟಿವಿ9 ಮಾಡಿದ್ದ ನಿರಂತರ ಅಭಿಯಾನದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇತ್ತ ರಾಜಧಾನಿಯ ಬಹುತೇಕ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಕೂಡ ಆರಂಭವಾಗಿದೆ. ಸದ್ಯ ಇಂದು ಸಿಟಿರೌಂಡ್ಸ್ ನಡೆಸಿರೋ ಸಿಎಂ ಸಿದ್ದರಾಮಯ್ಯ ಕೂಡ ಅಧಿಕಾರಿಗಳಿಗೆ ರಸ್ತೆಗುಂಡಿಗಳನ್ನ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ರಾಜಧಾನಿಯ ರಸ್ತೆಗಳು ಇನ್ನಾದ್ರೂ ಗುಂಡಿಮುಕ್ತ ಆಗುತ್ತವೆಯಾ ಎಂಬುದನ್ನು ಕಾದುನೋಡಬೇಕಿದೆ.




