ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರುವ ಯಡಿಯೂರಪ್ಪ ರಾಜಕೀಯ ಪುನರ್ ವಸತಿ ಹುದ್ದೆಗಳನ್ನು ಪಡೆಯುವ ಅವಕಾಶ ಇದೆ. ಸಿಎಂ ಹುದ್ದೆಯಿಂದ ಕೆಳಗಿಳಿದ ಹಿರಿಯ ರಾಜಕಾರಣಿಗಳಿಗೆ ನಮ್ಮ ದೇಶದಲ್ಲಿ ಯಾವುದಾದಾರೊಂದು ರಾಜ್ಯದ ರಾಜ್ಯಪಾಲರಾಗಿ ನೇಮಿಸಿ ಅವರ ಆಡಳಿತ ಅನುಭವ, ಸೇವೆಯನ್ನು ರಾಜ್ಯದ ಅಭಿವೃದ್ದಿ, ಆಡಳಿತ ನಿರ್ವಹಣೆಗೆ ಪಡೆದುಕೊಳ್ಳುವ ಸಂಪ್ರದಾಯ ಇದೆ. ಯಡಿಯೂರಪ್ಪಗೂ ಪ್ರಧಾನಿ ಮೋದಿ ರಾಜ್ಯಪಾಲರ ಹುದ್ದೆಯ ಆಫರ್ ನೀಡಿದ್ದಾರೆ. ಈ ತಿಂಗಳ 17 ರಂದು ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ಪ್ರಧಾನಿ ಮೋದಿ, ಯಾವ ರಾಜ್ಯದ ರಾಜ್ಯಪಾಲರಾಗಲು ಬಯಸುತ್ತೀರಾ ಎಂದು ಕೇಳಿದ್ದಾರೆ. ಆದರೆ, ಇದು ಗಂಭೀರವಾಗಿ ಕೇಳಿದ್ದಲ್ಲ. ತಮಾಷೆಗೆ ಪ್ರಧಾನಿ ಮೋದಿ, ಯಡಿಯೂರಪ್ಪ ಮುಂದೆ ಈ ಪ್ರಶ್ನೆ ಇಟ್ಟಿದ್ದಾರೆ. ಆದರೆ, ಯಡಿಯೂರಪ್ಪ ರಾಜ್ಯಪಾಲರ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಇದನ್ನು ಇಂದು ಖುದ್ದಾಗಿ ಯಡಿಯೂರಪ್ಪ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.