ಆಸ್ಟ್ರಿಯನ್ ಆಟಗಾರ್ತಿಗೆ ನೇರ ಸೆಟ್​ಗಳಲ್ಲಿ ಸೋತು ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಿಂದ ಹೊರಬಿದ್ದ ಮನಿಕಾ ಬಾತ್ರ

TV9 Digital Desk

| Edited By: Arun Kumar Belly

Updated on: Jul 26, 2021 | 7:49 PM

ಹಿಂದಿನ ಎರಡು ಪಂದ್ಯಗಳಲ್ಲಿ ಉತ್ತಮ ಫಾರ್ಮ್ ತೋರಿದ್ದ ಮನಿಕಾ ಸೋಮವಾರ ಆಸ್ಟ್ರೀಯನ್ ಆಟಗಾರ್ತಿಗೆ ಅಷ್ಟು ಸುಲಭವಾಗಿ ಸೋಲುತ್ತಾರೆಂದು ಭಾರತೀಯ ಶಿಬಿರ ಎಣಿಸಿರಲಿಲ್ಲ.

ಆಸ್ಟ್ರಿಯನ್ ಆಟಗಾರ್ತಿಗೆ ನೇರ ಸೆಟ್​ಗಳಲ್ಲಿ ಸೋತು ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಿಂದ ಹೊರಬಿದ್ದ ಮನಿಕಾ ಬಾತ್ರ
ಮನಿಕಾ ಬಾತ್ರಾ

ಟೊಕಿಯೋ ಒಲಂಪಿಕ್ಸ್ 2020ನಲ್ಲಿ ತನ್ನ ಸಿಂಗಲ್ಸ್ ಪಂದ್ಯಗಳನ್ನು ಆಡುವಾಗ ಭಾರತದ ಟೇಬಲ್ ಟೆನಿಸ್ ಕೋಚ್ ಅವರಿಂದ ಸಲಹೆ ಪಡೆಯಲು ನಿರಾಕರಿಸಿದ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಮನಿಕಾ ಬಾತ್ರ ಅವರು ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರಿಯಾದ ಸೋಫಿಯಾ ಪೊಲ್ಕನೊವಾ ವಿರುದ್ಧ 0-4 ಗೇಮ್​ಗಳ ಅಂತರದಿಂದ ಸೋತು ಸಿಂಗಲ್ಸ್ ವಿಭಾಗದಿಂದ ನಿರ್ಗಮಿಸಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿಯನ್ನು ಸೋಲಿಸಲು ಸೋಫಿಯಾಗೆ ಕೇವಲ 27 ನಿಮಿಷ ಸಾಕಾಯಿತು. ಪಂದ್ಯ ಆರಂಭವಾದಾಗ ಮನಿಕಾ ಉತ್ತಮ ಆಟ ಪ್ರದರ್ಶಿಸಿ ಭರವಸೆ ಮೂಡಿಸಿದ್ದರು. ಮೊದಲ ಸೆಟ್​ನಲ್ಲಿ ಮೊನಿಕಾರಿಂದ ತೀವ್ರ ಹೋರಾಟ ಎದುರಿಸಿದ ಸೋಫಿಯಾ ಅದನ್ನು 11-8 ರಿಂದ ಗೆದ್ದರು. ಆದರೆ ಎರಡನೇ ಸೆಟ್​ನಲ್ಲಿ ಮನಿಕಾಗೆ ಹೋರಾಡುವ ಅವಕಾಶವನ್ನೂ ನೀಡದ ಆಸ್ಟ್ರೀಯನ್ ಆಟಗಾರ್ತಿ ಅದನ್ನು ಸುಲಭವಾಗಿ 11-2 ರಿಂದ ಗೆದ್ದರು. ಎರಡನೇ ಸೆಟ್​ ಕೇವಲ ನಾಲ್ಕೇ ನಿಮಿಷಗಳಲ್ಲಿ ಕೊನೆಗೊಂಡಿತು.

ಮನಿಕಾ ಅವರ ಆಟದ ವೈಶಿಷ್ಟ್ಯತೆ ಎಂದರೆ ಅವರ ಫೋರ್​ಆರ್ಮ್ ಹೊಡೆತಗಳು. ಆದರೆ ಅತ್ಯುತ್ತಮ ಡಿಫೆನ್ಸ್ ಆಟ ಪ್ರದರ್ಶಿಸಿದ ಸೋಫಿಯಾ ಮೂರನೆ ಸೆಟ್​ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿ 11-5 ರಿಂದ ಅದನ್ನು ಗೆದ್ದರು.

ನಾಲ್ಕನೇ ಸೆಟ್​ನಲ್ಲಿ ಸಂಪೂರ್ಣ ರಕ್ಷಣಾತ್ಮಕ ಆಟವಾಡಿದ ಮನಿಕಾ ಕೆಲ ಉತ್ತಮ ರ್ಯಾಲಿಗಳಲ್ಲಿ ಪಾಲ್ಗೊಂಡರಾದರೂ ನಿಶ್ಚಿತ ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಸೋಫಿಯಾ ಈ ಸೆಟ್​ ಅನ್ನು 11-7 ರಿಂದ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರು.

ಹಿಂದಿನ ಎರಡು ಪಂದ್ಯಗಳಲ್ಲಿ ಉತ್ತಮ ಫಾರ್ಮ್ ತೋರಿದ್ದ ಮನಿಕಾ ಸೋಮವಾರ ಆಸ್ಟ್ರೀಯನ್ ಆಟಗಾರ್ತಿಗೆ ಅಷ್ಟು ಸುಲಭವಾಗಿ ಸೋಲುತ್ತಾರೆಂದು ಭಾರತೀಯ ಶಿಬಿರ ಎಣಿಸಿರಲಿಲ್ಲ.

ಇದಕ್ಕೆ ಮೊದಲು ಭಾರತದ ಮತ್ತೊಬ್ಬ ಆಟಗಾರ್ತಿ ಸುತಿರ್ಥಾ ಮುಖರ್ಜಿ ಅವರು ಸಹ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಿಂದ ಹೊರಬಿದ್ದರು. ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಪೋರ್ಚುಗಲ್​ನ ಫು ಯು ಅವರಿಗೆ ಸೋತರು.

ಆದರೆ, ಟೇಬಲ್ ಟೆನಿಸ್ ಸ್ಪರ್ಧೆಗಳು ಕುರಿತಂತೆ ಒಂದು ಸಮಾಧಾನಕರ ಸುದ್ದಿಯೂ ಇದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಚಂತ ಶರತ್ ಕಮಾಲ್ ಅವರು ಪೋರ್ಚುಗಲ್​ನ ಟಿಯಾಗೊ ಅಪಲೊನಿಯ ಅವರನ್ನು 4-2 ಸೆಟ್​ಗಳ ಅಂತರದಿಂದ ಸೋಲಿಸಿದರು. ಈ ಪಂದ್ಯ 48 ನಿಮಿಷಗಳ ಕಾಲ ನಡೆಯಿತು.

ಇದನ್ನೂ ಓದಿ: ಟೊಕಿಯೋ ಒಲಂಪಿಕ್ಸ್ 2020: ರಾಷ್ಟ್ರೀಯ ಟೇಬಲ್ ಟೆನಿಸ್​ ಕೋಚ್​ನಿಂದ ಸಲಹೆ ಪಡೆಯಲು ನಿರಾಕರಿಸಿದ ಮನಿಕಾ ಬಾತ್ರಾ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada