Children’s Day Special: 3D ಪ್ರಿಂಟಿಂಗ್ ಪ್ರವೀಣೆ 7ನೇ ತರಗತಿಯ ಈ ಬಾಲೆ
ಧಾರವಾಡದ 7ನೇ ತರಗತಿ ವಿದ್ಯಾರ್ಥಿನಿ ನೀತಿ ಕುಲಕರ್ಣಿ 3D ಪ್ರಿಂಟಿಂಗ್ ಕಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಶಾಲಾ ಅಧ್ಯಯನದ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಲ್ಯಾಂಪ್ಗಳು, ಆಟಿಕೆಗಳು ಸೇರಿದಂತೆ ಆಕರ್ಷಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಸ್ವಂತ ಆದಾಯ ಗಳಿಸುತ್ತಿರುವ ನೀತಿ, ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.
Updated on: Nov 14, 2025 | 4:21 PM

ವಿದ್ಯಾರ್ಥಿ ದೆಸೆಯಿಂದಲೇ ಆಧುನಿಕ ತಂತ್ರಜ್ಞಾನವನ್ನು ಕಲಿತು ಧಾರವಾಡದ ಮಾಳಮಡ್ಡಿ ಬಡಾವಣೆಯ ನಿವಾಸಿ ನೀತಿ ಕುಲಕರ್ಣಿ ಎಲ್ಲರ ಗಮನ ಸೆಳೆದಿದ್ದಾರೆ. ಕೆ.ಇ. ಬೋರ್ಡ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಇವರು, 3D ಪ್ರಿಂಟಿಂಗ್ ಪ್ರವೀಣೆ. ವಿನಾಯಕ ಹಾಗೂ ಅಂಜಲಿ ದಂಪತಿ ಮಗಳಾಗಿರೋ ಇವರು, ವಿದ್ಯಾಭ್ಯಾಸದ ಜೊತೆಗೆ ಉದ್ಯೋಗದ ದಾರಿಯನ್ನೂ ಕಂಡುಕೊಂಡು ಮಾದರಿಯಾಗಿದ್ದಾರೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯದ ಅಭ್ಯಾಸಕ್ಕೆ ಪೂರಕವಾಗಿ ವಿಜ್ಞಾನ ಪ್ರಯೋಗಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ, ನೀತಿ ಕುಲಕರ್ಣಿ ತಂತ್ರಜ್ಞಾನ ಬಳಸಿಕೊಂಡು ನಿತ್ಯದ ಅಭ್ಯಾಸದ ಜೊತೆಗೆ ಆದಾಯ ಗಳಿಸುತ್ತಿದ್ದಾರೆ.

3ಡಿ ತಂತ್ರಜ್ಞಾನ ಬಳಸಿ ಮದ್ರಾಸ್ ಐಐಟಿ ಸಂಶೋಧಕರು ಒಂದಿಡೀ ಕಟ್ಟಡವನ್ನೇ ನಿರ್ಮಿಸಿರುವುದನ್ನು ಪ್ರೇರಣೆಯಾಗಿ ಪಡೆದುಕೊಂಡ ಇವರು, ಈ ತಂತ್ರಜ್ಞಾನದ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾರೆ. 3ಡಿ ತಂತ್ರಜ್ಞಾನದ ಮೂಲಕ ನಾನು ಸಹ ಏನಾದರೂ ಮಾಡಬೇಕೆಂದು ನಿರ್ಧರಿಸಿ, 3ಡಿ ಲ್ಯಾಂಪ್ಸ್ ಹಾಗೂ ಇತರೆ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದಾರೆ.

3ಡಿ ಪ್ರಿಂಟರೊಂದನ್ನು ಖರೀದಿಸಿರುವ ನೀತಿ, ತಮ್ಮ ಮೊಬೈಲ್‌ನಲ್ಲಿನ ವಿವಿಧ ಆ್ಯಪ್ಗಳ ಸಹಾಯದಿಂದ ಲ್ಯಾಂಪ್ ಅಥವಾ ಯಾವುದಾದರೂ ವಸ್ತುವಿನ ಮೇಲೆ ಮುದ್ರಣ ಆಗುವ ಚಿತ್ರವನ್ನು ಸಂಯೋಜನೆ ಮಾಡಿ ಮುದ್ರಿಸುತ್ತಿದ್ದಾರೆ. ಈಗಾಗಲೇ ಮೂನ್ ಲ್ಯಾಂಪ್‌ಗಳ ಮೇಲೆ ಆಧ್ಯಾತ್ಮ ಗುರುಗಳು, ಕ್ರೀಡಾ ತಾರೆಗಳು, ಸಿನಿಮಾ ತಾರೆಗಳು ಸೇರಿದಂತೆ ವಿವಿಧ ಚಿತ್ರಗಳನ್ನು ಮುದ್ರಿಸಿದ್ದಾರೆ.

ಉಡುಗೊರೆ ಕೊಡಲು ಆಕರ್ಷಕ ಆಟಿಕೆ ವಸ್ತುಗಳು, ಕೀ ಚೈನ್‌ಗಳು, ಲೋಗೋ, ಮೂರ್ತಿಗಳ ನಿರ್ಮಾಣವನ್ನು ಸಹ ಈ ತ್ರಿಡಿ ಪ್ರಿಂಟರ್ ಮೂಲಕ ನೀತಿ ಅವರು ಮಾಡುತ್ತಿದ್ದಾರೆ. 18 ಸಾವಿರ ರೂ.ಗೆ 3ಡಿ ಪ್ರಿಂಟರ್ ಖರೀದಿಸಿದ್ದು, ಪ್ರಿಟಿಂಗ್ ಸಮೇತ ಒಂದು ಮೂನ್ ಲ್ಯಾಂಪ್ಗೆ 350-400 ರೂ.ವರೆಗೆ ವೆಚ್ಚವಾಗುತ್ತಿದೆ. ಇದನ್ನು 750ರಿಂದ 960 ರೂ.ವರೆಗೂ ನೀತಿ ಮಾರಾಟ ಮಾಡುತ್ತಿದ್ದಾರೆ.

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.
Read More
