IPL ನಲ್ಲಿ ಸುರೇಶ್ ರೈನಾ ಹೆಸರಿನಲ್ಲಿರುವ ಈ 5 ದಾಖಲೆಗಳನ್ನು ಮುರಿಯುವುದು ಅಸಾಧ್ಯ..!
Suresh Raina: ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಐಪಿಎಲ್ನಲ್ಲಿ ಎಡಗೈ ದಾಂಡಿಗನ ಯುಗಾಂತ್ಯವಾಗಿದೆ.
Updated on: Sep 07, 2022 | 10:32 AM

ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಐಪಿಎಲ್ನಲ್ಲಿ ಎಡಗೈ ದಾಂಡಿಗನ ಯುಗಾಂತ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 205 ಪಂದ್ಯಗಳನ್ನಾಡಿರುವ ರೈನಾ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಹೀಗೆ ನಿರ್ಮಿಸಿದ ಐದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು. ಹಾಗಿದ್ರೆ ಐಪಿಎಲ್ನಲ್ಲಿ ಸುರೇಶ್ ರೈನಾ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಾವುವು ನೋಡೋಣ...

ಒಂದೇ ಓವರ್‌ನಲ್ಲಿ 7 ಬೌಂಡರಿ: ಐಪಿಎಲ್ನಲ್ಲಿ ಒಂದೇ ಓವರ್‌ನಲ್ಲಿ 7 ಬೌಂಡರಿ ಬಾರಿಸಿದ ದಾಖಲೆಯೊಂದು ರೈನಾ ಹೆಸರಿನಲ್ಲಿದೆ. 2014 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಪರ್ವಿಂದರ್ ಅವಾನಾ ಎಸೆದ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ರೈನಾ ಏಳು ಬೌಂಡರಿಗಳನ್ನು ಸಿಡಿಸಿದ್ದರು. ಮೊದಲ ಎರಡು ಎಸೆತಗಳಲ್ಲಿ ಸಿಕ್ಸ್ ಸಿಡಿಸಿದ ರೈನಾ, ಆ ಬಳಿಕ ಎರಡು ಫೋರ್ ಬಾರಿಸಿದ್ದರು. ಇನ್ನು 5ನೇ ಎಸೆತದಲ್ಲಿ ನೋಬಾಲ್ ಆಗಿತ್ತು. ಅದರಲ್ಲೂ ರೈನಾ ಫೋರ್ ಬಾರಿಸಿದ್ದರು. ಮತ್ತೆ ಎಸೆಯಲಾಗಿದ್ದ 5ನೇ ಮತ್ತು 6ನೇ ಎಸೆತದಲ್ಲಿ ರೈನಾ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ್ದರು. ಈ ಮೂಲಕ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದ್ದರು.

ಪವರ್ಪ್ಲೇಯ ಪವರ್ ಸ್ಟಾರ್: ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 2014 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರೈನಾ ಪವರ್ಪ್ಲೇನ 25 ಎಸೆತಗಳಲ್ಲಿ 87 ರನ್ ಸಿಡಿಸುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದರು.

ಅತ್ಯಧಿಕ ಸ್ಟ್ರೈಕ್ ರೇಟ್: 2014 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸುರೇಶ್ ರೈನಾ ಅಬ್ಬರಿಸಿ ಬೊಬ್ಬಿರಿದ್ದರು. ಈ ವೇಳೆ ಕೇವಲ 25 ಎಸೆತಗಳಲ್ಲಿ 87 ರನ್ ಬಾರಿಸಿದ್ದರು. ವಿಶೇಷ ಎಂದರೆ ಈ ವೇಳೆ ರೈನಾ ಅವರ ಸ್ಟ್ರೈಕ್ ರೇಟ್ 348 ಆಗಿತ್ತು. ಇದು ಐಪಿಎಲ್ ಇತಿಹಾಸ ಅತ್ಯಧಿಕ ಸ್ಟ್ರೈಕ್ ರೇಟ್ ಎಂಬುದು ವಿಶೇಷ.

3 ಎಸೆತ 2 ವಿಕೆಟ್: ಐಪಿಎಲ್ನಲ್ಲಿ ಕೇವಲ 3 ಎಸೆತ ಎಸೆದು 2 ವಿಕೆಟ್ ಪಡೆದ ವಿಶೇಷ ದಾಖಲೆಯೊಂದು ರೈನಾ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ 20ನೇ ಓವರ್ ಬೌಲಿಂಗ್ ಮಾಡಿದ್ದ ರೈನಾ ಮೊದಲ 3 ಎಸೆತಗಳಲ್ಲಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆಲೌಟ್ ಮಾಡಿದ್ದರು. ಅಂದರೆ 3 ಎಸೆತಗಳಲ್ಲಿ ಯಾವುದೇ ರನ್ ನೀಡದೆ 2 ವಿಕೆಟ್ ಕಬಳಿಸಿ ಅಪರೂಪದ ದಾಖಲೆ ಬರೆದಿದ್ದಾರೆ.

ಪ್ಲೇಆಫ್ನಲ್ಲಿ ಅತೀ ಹೆಚ್ಚು: ಪ್ಲೇಆಫ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ಸುರೇಶ್ ರೈನಾ ಹೆಸರಿನಲ್ಲಿದೆ. ರೈನಾ ಒಟ್ಟು 24 ಪ್ಲೇಆಫ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 714 ರನ್ ಬಾರಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿಟ್ಟಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ಗೆ ವಿದಾಯ ಹೇಳಿರುವ ಸುರೇಶ್ ರೈನಾ ಅವರ ಈ 5 ಅಪರೂಪದ ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು.

ಸುರೇಶ್ ರೈನಾ
























