ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಅರ್ಷದೀಪ್ ಸಿಂಗ್ ಪಾಲಾಗಿದೆ. ಅದು ಕೂಡ ಕೇವಲ 1264 ಎಸೆತಗಳಲ್ಲಿ ಎಂಬುದೇ ಅಚ್ಚರಿ. 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅರ್ಷದೀಪ್ ಕೇವಲ 2 ವರ್ಷಗಳಲ್ಲೇ ಭಾರತದ ನಂಬರ್ ಬೌಲರ್ ಎನಿಸಿಕೊಂಡಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈ ಎರಡು ವಿಕೆಟ್ಗಳೊಂದಿಗೆ ಅರ್ಷದೀಪ್ ಸಿಂಗ್ ಭಾರತದ ಪರ ಹೊಸ ದಾಖಲೆ ಬರೆದರು.
ಟೀಮ್ ಇಂಡಿಯಾ ಪರ 61 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ ಇದುವರೆಗೆ 210.4 ಓವರ್ಗಳನ್ನು ಎಸೆದಿದ್ದಾರೆ. ಅಂದರೆ 1264 ಎಸೆತಗಳ ಮೂಲಕ ಬರೋಬ್ಬರಿ 97 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 95 ಕ್ಕಿಂತ ಅಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿತ್ತು. ಚಹಲ್ 96 ವಿಕೆಟ್ ಕಬಳಿಸಲು ಬರೋಬ್ಬರಿ 1764 ಎಸೆತಗಳನ್ನು ತೆಗೆದುಕೊಂಡಿದ್ದರು. ಅಂದರೆ 294 ಓವರ್ಗಳ ಮೂಲಕ 96 ವಿಕೆಟ್ ಪಡೆದಿದ್ದರು.
ಇನ್ನು ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಪಾಂಡ್ಯ 91 ವಿಕೆಟ್ ಕಬಳಿಸಲು ಎಸೆದಿರುವುದು ಬರೋಬ್ಬರಿ 1763 ಎಸೆತಗಳನ್ನು. ಅಂದರೆ ಅರ್ಷದೀಪ್ಗಿಂತ 500 ಹೆಚ್ಚುವರಿ ಎಸೆತಗಳನ್ನು ಈಗಾಗಲೇ ಎಸೆದಿದ್ದಾರೆ.
ಹಾಗೆಯೇ ಟೀಮ್ ಇಂಡಿಯಾ ಸ್ವಿಂಗ್ ಮಾಸ್ಟರ್ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್ 90 ವಿಕೆಟ್ಗಳನ್ನು ಕಬಳಿಸಲು ಬರೋಬ್ಬರಿ 1791 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಅರ್ಷದೀಪ್ ಸಿಂಗ್ ಕೇವಲ 2 ವರ್ಷಗಳಲ್ಲಿ, 1264 ಎಸೆತಗಳ ಮೂಲಕ ಅಗ್ರಸ್ಥಾನಕ್ಕೇರಿವುದು ವಿಶೇಷ.
Published On - 8:31 am, Thu, 23 January 25