- Kannada News Photo gallery Cricket photos Asia Cup 2025: Sanju Samson's Place in India's Playing XI Uncertain
Asia Cup 2025: ಪ್ಲೇಯಿಂಗ್ 11ನಲ್ಲಿ ಸಂಜುಗಿದೆಯಾ ಸ್ಥಾನ? ಕ್ಯಾಪ್ಟನ್ ಸೂರ್ಯ ಹೇಳಿದ್ದೇನು?
Asia Cup 2025: ಏಷ್ಯಾಕಪ್ 2025ರಲ್ಲಿ ಭಾರತ ತಂಡದ ಆರಂಭಿಕ ಆಟಗಾರರಾಗಿ ಸಂಜು ಸ್ಯಾಮ್ಸನ್ ಆಡುವುದರ ಬಗ್ಗೆ ಅನಿಶ್ಚಿತತೆ ಇದೆ. ಕಳೆದ ಕೆಲವು ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ ಮತ್ತು ಶುಭ್‌ಮನ್ ಗಿಲ್ ಅವರ ಆಗಮನದಿಂದ ಸ್ಪರ್ಧೆ ಹೆಚ್ಚಾಗಿದೆ. ನಾಯಕ ಸೂರ್ಯಕುಮಾರ್ ಯಾದವ್ ಅವರು ಸಂಜು ಅವರ ಆಯ್ಕೆಯ ಬಗ್ಗೆ ಖಚಿತವಾದ ಉತ್ತರ ನೀಡಿಲ್ಲ.
Updated on: Sep 09, 2025 | 7:00 PM

2025 ರ ಏಷ್ಯಾಕಪ್ ಇಂದಿನಿಂದ ಆರಂಭವಾಗುತ್ತಿದೆ. ಆದಾಗ್ಯೂ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲಿ ದೊಡ್ಡ ಪ್ರಶ್ನೆ ಎಂದರೆ ಸಂಜು ಸ್ಯಾಮ್ಸನ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿದೆಯಾ ಎಂಬುದಾಗಿದೆ.

ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವು ಇದೆ. ಅದೆನೆಂದರೆ ಇಷ್ಟು ದಿನ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ಆರಂಭಿಸುತ್ತಿದ್ದದ್ದು ಸಂಜು ಸ್ಯಾಮ್ಸನ್. ಆರಂಭಿಕರಾಗಿ ಅವರ ಪ್ರದರ್ಶನವೂ ಅಮೋಘವಾಗಿದೆ. ಆದರೆ ಕಳೆದೈದು ಪಂದ್ಯಗಳಲ್ಲಿ ಸಂಜು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇದರ ಜೊತೆಗೆ ಇದೀಗ ಶುಭ್‌ಮನ್ ಗಿಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದು, ಉಪನಾಯಕತ್ವವನ್ನು ನೀಡಲಾಗಿದೆ.

ಇದರರ್ಥ ಶುಭ್‌ಮನ್ ಗಿಲ್ ಆರಂಭಿಕನ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಜೊತೆಗೆ ಪೈಪೋಟಿ ನೀಡಲಿದ್ದಾರೆ. ಗಿಲ್ ಉಪನಾಯಕನಾಗಿರುವ ಕಾರಣ ಅವರಿಗೆ ಈ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಸಂಜುಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಈ ನಡುವೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸಂಜು ಇರುತ್ತಾರೋ ಇಲ್ಲವೋ ಎಂದು ಉತ್ತರಿಸಿದ್ದಾರೆ.

ಪಂದ್ಯಾವಳಿ ಆರಂಭಕ್ಕೂ ಮುನ್ನ ಇಂದು ನಡೆದ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಬಳಿ, ಭಾರತದಲ್ಲಿ ಇಬ್ಬರು ವಿಕೆಟ್ ಕೀಪರ್‌ಗಳಿದ್ದಾರೆ - ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್. ಅಂತಹ ಪರಿಸ್ಥಿತಿಯಲ್ಲಿ, ಪ್ರಶ್ನೆಯೆಂದರೆ ಇಬ್ಬರಲ್ಲಿ ಯಾರು ಆಡುತ್ತಾರೆ? ಸಂಜುಗೆ ಅವಕಾಶವಿದೆಯೇ? ಎಂಬ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, ನಮ್ಮ ಸಂಪೂರ್ಣ ಗಮನ ಸಂಜು ಸ್ಯಾಮ್ಸನ್ ಮೇಲೆ ಇದೆ. ನೀವು ಚಿಂತಿಸಬೇಡಿ. ನಾಳೆ ಅಂದರೆ ಪಂದ್ಯದ ದಿನದಂದು ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಸೂರ್ಯ ಅವರ ಈ ಹೇಳಿಕೆಯಿಂದ ಯಾವುದಕ್ಕೂ ಖಚಿತತೆ ಸಿಕ್ಕಿಲ್ಲ. ಆದರೆ ಟೀಂ ಇಂಡಿಯಾ ಅಭ್ಯಾಸದಲ್ಲಿ ಕಂಡುಬಂದಿರುವ ಪ್ರಕಾರ, ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವುದು ಕಷ್ಟಕರವೆಂದು ತೋರುತ್ತದೆ. ಏಕೆಂದರೆ ಜಿತೇಶ್ ಶರ್ಮಾ ಅಲ್ಲಿ ಪೂರ್ಣ ಪ್ರಮಾಣದ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಅಂದರೆ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ಸಂಜು ಆಡುವುದು ಅನುಮಾನ ಎನ್ನಬಹುದು.




