ಪಾಕಿಸ್ತಾನ್ ವಿರುದ್ಧ ಪ್ರಜ್ವಲಿಸದ ಸೂರ್ಯ..!
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.
Updated on: Sep 06, 2025 | 2:08 PM

ಭಾರತ ಮತ್ತು ಪಾಕಿಸ್ತಾನ್ ನಡುವಿನ ಹೈವೋಲ್ಟೇಜ್ ಕದನಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಏಷ್ಯಾಕಪ್ ನ 6ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದುವೇ ಸೂರ್ಯಕುಮಾರ್ ಯಾದವ್ ಚಿಂತೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ರಚಂಡ ಬ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಪಾಕಿಸ್ತಾನದ ವಿರುದ್ಧವಲ್ಲ. ಅಂದರೆ ಪಾಕ್ ವಿರುದ್ಧ ಈವರೆಗೆ 5 ಇನಿಂಗ್ಸ್ ಆಡಿದರೂ ಸೂರ್ಯ ಒಮ್ಮೆಯೂ 20 ರನ್ ಗಳಿಸಿಲ್ಲ ಎಂಬುದು ಉಲ್ಲೇಖಾರ್ಹ.

ಪಾಕಿಸ್ತಾನ್ ವಿರುದ್ಧದ 5 ಇನಿಂಗ್ಸ್ ಗಳಿಂದ ಸೂರ್ಯಕುಮಾರ್ ಯಾದವ್ ಈವರೆಗೆ ಕಲೆಹಾಕಿರುವುದು ಕೇವಲ 64 ರನ್ ಗಳು ಮಾತ್ರ. ಈ 64 ರನ್ ಗಳನ್ನು ಕಲೆಹಾಕಲು 54 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇದರ ನಡುವೆ ಅವರು ಗಳಿಸಿದ ಗರಿಷ್ಠ ಸ್ಕೋರ್ ಕೇವಲ 18 ರನ್ ಗಳು ಮಾತ್ರ.

ಇನ್ನು ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ನಿಂದ ಮೂಡಿಬಂದ ಸಿಕ್ಸರ್ ಗಳ ಸಂಖ್ಯೆ ಕೇವಲ ಒಂದು. ಹಾಗೆಯೇ 5 ಇನಿಂಗ್ಸ್ ಗಳಲ್ಲಿ ಕೇವಲ 7 ಫೋರ್ ಗಳನ್ನು ಮಾತ್ರ ಬಾರಿಸಲು ಯಶಸ್ವಿಯಾಗಿದ್ದಾರೆ.

ಅಂದರೆ ಪಾಕಿಸ್ತಾನ್ ವಿರುದ್ಧ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ ರೇಟ್ 118.5 ಅಷ್ಟೇ. ಇನ್ನು ಈ ಸ್ಟ್ರೈಕ್ ರೇಟ್ ನಲ್ಲಿ 12.80 ಅವರೇಜ್ ನಲ್ಲಿ ಕೇವಲ 64 ರನ್ ಮಾತ್ರ ಗಳಿಸಿದ್ದಾರೆ. ಇದೀಗ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಪಾಕ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಅವರು ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.




