- Kannada News Photo gallery Cricket photos Babar Azam Creates New World Record with Few Dot Balls Century
ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಬಾಬರ್ ಆಝಂ
Babar Azam World Record: ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ 12ನೇ ಶತಕ ಬಾರಿಸಿದ್ದಾರೆ. ಆದರೆ ಈ ಹನ್ನೆರಡನೇ ಶತಕ ಮೂಡಿಬಂದಿದ್ದು ಕೇವಲ ಒಂದು ಡಾಟ್ ಬಾಲ್ನೊಂದಿಗೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವಲ್ಲಿ ಬಾಬರ್ ಯಶಸ್ವಿಯಾಗಿದ್ದಾರೆ.
Updated on:Apr 20, 2026 | 7:44 AM

ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ (Babar Azam) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಡಾಟ್ ಬಾಲ್ ಆಡಿ ಶತಕ ಪೂರೈಸಿದ ವಿಶ್ವ ದಾಖಲೆ ಬಾಬರ್ ಆಝಂ ಪಾಲಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ನ 29ನೇ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ಓವರ್ನಿಂದಲೇ ರನ್ ಗಳಿಸುತ್ತಾ ಸಾಗಿದ ಬಾಬರ್ ಆಝಂ ಒಂದೇ ಒಂದೇ ಒಂದು ಡಾಟ್ ಆಡದೇ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದ ಬಳಿಕ ಬಾಬರ್ ಆಡಿದ್ದ ಒಂದೇ ಡಾಟ್ ಬಾಲ್. ಅಂದರೆ ತಾನೆದುರಿಸಿದ 36ನೇ ಎಸೆತದಲ್ಲಿ ಯಾವುದೇ ರನ್ಗಳಿಸಿರಲಿಲ್ಲ.

ಇದಾದ ಬಳಿಕ ಸತತವಾಗಿ ಕನಿಷ್ಠ ಒಂದು ರನ್ಗಳಿಸುತ್ತಾ ಸಾಗಿದ ಬಾಬರ್ ಆಝಂ 52 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ಡಾಟ್ ಬಾಲ್ ಆಡುವ ಮೂಲಕ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಇಂತಹದೊಂದು ಭರ್ಜರಿ ದಾಖಲೆ ನ್ಯೂಝಿಲೆಂಡ್ನ ಫಿನ್ ಅಲೆನ್ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್ 2026 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಲೆನ್ 33 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಅವರು ಕೇವಲ 4 ಡಾಟ್ ಬಾಲ್ಗಳನ್ನು ಮಾತ್ರ ಆಡಿದ್ದರು. ಈ ಮೂಲಕ ಅತೀ ಕಡಿಮೆ ಡಾಟ್ ಬಾಲ್ಗಳೊಂದಿಗೆ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಕೇವಲ 1 ಡಾಟ್ ಬಾಲ್ನೊಂದಿಗೆ ಶತಕ ಪೂರೈಸುವ ಮೂಲಕ ಬಾಬರ್ ಆಝಂ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಡಾಟ್ ಬಾಲ್ ಆಡಿ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Published On - 7:42 am, Mon, 20 April 26




