ಬಾಬರ್ ಆಝಂ ಡುಮ್ಕಿ ಢಮಾರ್: ರೋಹಿತ್ ಶರ್ಮಾ ವಿಶ್ವ ದಾಖಲೆ ಸೇಫ್
Pakistan vs South Africa: ಪಾಕಿಸ್ತಾನ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18.1 ಓವರ್‌ಗಳಲ್ಲಿ 139 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸೌತ್ ಆಫ್ರಿಕಾ 55 ರನ್ ಗಳ ಜಯ ಸಾಧಿಸಿದೆ.
Updated on: Oct 29, 2025 | 7:54 AM

ಬರೋಬ್ಬರಿ ಒಂದು ವರ್ಷಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಮೊದಲ ಮ್ಯಾಚ್ ನಲ್ಲೇ ಮುಗ್ಗರಿಸಿದ್ದಾರೆ. ಅದು ಸಹ ಸೊನ್ನೆ ಸುತ್ತುವ ಮೂಲಕ ಎಂಬುದು ವಿಶೇಷ.

ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ತಾನೆದುರಿಸಿದ ಎರಡನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯದೊಂದಿಗೆ ಭಾರದ ಹೆಜ್ಜೆ ಹಾಕಿದರು.

ಇತ್ತ ಬಾಬರ್ ಸೊನ್ನೆ ಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯೊಂದು ಸೇಫ್ ಝೋನಲ್ಲೇ ಉಳಿದಿದೆ. ಅಂದರೆ ಈ ಮ್ಯಾಚ್ ನಲ್ಲಿ ಬಾಬರ್ ಆಝಂ ಕೇವಲ 9 ರನ್ ಗಳಿಸಿದ್ದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಸದ್ಯ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಹಿಟ್ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ 151 ಟಿ20 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 4231 ರನ್ ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ದಾಖಲೆ ಮುರಿಯಲು ಬಾಬರ್ ಆಝಂಗೆ ಇನ್ನೂ 9 ರನ್ಗಳು ಬೇಕಿದೆ. ಪಾಕ್ ಪರ ಈವರೆಗೆ 121 ಟಿ20 ಇನಿಂಗ್ಸ್ ಆಡಿರುವ ಬಾಬರ್ ಒಟ್ಟು 4223 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ದ್ವಿತೀಯ ಸ್ಥಾನದಲ್ಲಿರುವ ಬಾಬರ್ ಆಝಂ ರೋಹಿತ್ ಶರ್ಮಾ ಅವರ ದಾಖಲೆ ಮುರಿಯಲು ಅಕ್ಟೋಬರ್ 31 ರವರೆಗೆ ಕಾಯಲೇಬೇಕು. ಅಂದರೆ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಿನ ದ್ವಿತೀಯ ಪಂದ್ಯವು ಮುಂದಿನ ಶುಕ್ರವಾರ ನಡೆಯಲಿದ್ದು, ಆ ಮ್ಯಾಚ್ ನಲ್ಲಿ 9 ರನ್ ಗಳಿಸಿದರೆ ಬಾಬರ್ ಆಝಂ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಲಿದೆ. ಅಲ್ಲೀತನಕ ಹಿಟ್ ಮ್ಯಾನ್ ವರ್ಲ್ಡ್ ರೆಕಾರ್ಡ್ ಸೇಫ್.




