
ಐಪಿಎಲ್ 2026 ರ ಲೀಗ್ ಹಂತ ಮುಗಿಯಲು ಕೆಲವೇ ಪಂದ್ಯಗಳು ಬಾಕಿ ಇವೆ. ಅಂದರೆ ಇದರರ್ಥ ಪ್ಲೇಆಫ್ ಸುತ್ತಿಗೆ ಕೇವಲ 4 ತಂಡಗಳು ಮುನ್ನಡೆಯಲಿದ್ದು, ಉಳಿದ 6 ತಂಡಗಳು ಲೀಗ್ ಹಂತದಲ್ಲೇ ತಮ್ಮ ಪ್ರಯಾಣವನ್ನು ಮುಗಿಸಲಿವೆ. ಅಂತಹ ತಂಡಗಳಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಕೂಡ ಒಂದಾಗಿದೆ. ಆಡಿರುವ 13 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದಿರುವ ಸಿಎಸ್ಕೆ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಅಭಿಮಾನಿಗಳಿಗೆ ಸಿಎಸ್ಕೆ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಆಘಾತದ ಜೊತೆಗೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಒಂದೇ ಒಂದು ಪಂದ್ಯವನ್ನು ಆಡದಿರುವುದು ಕೂಡ ಬೇಸರ ಮೂಡಿಸಿದೆ. ಲೀಗ್ನ ಕೊನೆಯ ಪಂದ್ಯದಲ್ಲಾದರೂ ಧೋನಿ ಆಡ್ತಾರಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೀಗ ಹೊರಬಿದ್ದಿರುವ ಸುದ್ದಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ.

2026 ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡದೇ ಇರುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಅಂತಿಮ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಆ ಪಂದ್ಯದಲ್ಲಿ ಧೋನಿ ಆಡುವುದಿಲ್ಲ. ಧೋನಿ ಈಗಾಗಲೇ ತಂಡವನ್ನು ತೊರೆದು ರಾಂಚಿಗೆ ಅಂದರೆ ಅವರ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಪವಾಡವೆನಾದರೂ ನಡೆದು ಸಿಎಸ್ಕೆ ತಂಡ ಪ್ಲೇಆಫ್ ತಲುಪಿದರೆ ಆಗ ಧೋನಿ ತಂಡದಲ್ಲಿ ಆಡುವ ಸಾಧ್ಯತೆಗಳಿವೆ. ಆದರೆ ಸಿಎಸ್ಕೆ ತಂಡ ಪ್ಲೇಆಫ್ ತಲುಪುವುದು ಅಸಾಧ್ಯದ ಮಾತಾಗಿದೆ. ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಾತನಾಡಿದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ಕೊನೆಯ ಲೀಗ್ ಪಂದ್ಯದಲ್ಲಿ ಖಂಡಿತವಾಗಿಯೂ ಆಡುತ್ತಾರೆ ಎಂದಿದ್ದರು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಧೋನಿ ಆ ಪಂದ್ಯವನ್ನು ಆಡುವುದಿಲ್ಲ ಎನ್ನಲಾಗುತ್ತಿದೆ. ಸಧ್ಯಕ್ಕೆ ಧೋನಿ ನಿವೃತ್ತಿ ಘೋಷಿಸಿಲ್ಲವಾಗಿರುವುದರಿಂದ ಅವರು ಮುಂದಿನ ಸೀಸನ್‌ನಲ್ಲಿ ಆಡುವುದನ್ನು ಕಾಣಬಹುದು.