
ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ತನ್ನ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ.

ಎಂದಿನಂತೆ ಈ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಹಾಗೂ ರುತುರಾಜ್ ಗಾಯಕ್ವಾಡ್ ಸಿಎಸ್‌ಕೆ ಪರ ಇನ್ನಿಂಗ್ಸ್ ಆರಂಭಿಸಿದರು. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿ ಕೇವಲ 6 ರನ್‌ಗಳಿಗೆ ಔಟಾಗಿದ್ದ ಸಂಜು, ಈ ಪಂದ್ಯದಲ್ಲಿ ಅಬ್ಬರಿಸಲಿ ಎಂದು ಅಭಿಮಾನಿಗಳು ಆಶಿಸಿದ್ದರು. ಆದರೆ ಈ ಪಂದ್ಯದಲ್ಲೂ ಸಂಜು ಪ್ರದರ್ಶನ ಸಪ್ಪೆಯಾಗಿತ್ತು.

ಈ ಪಂದ್ಯದಲ್ಲೂ 7 ಎಸೆತಗಳನ್ನು ಎದುರಿಸಿದ ಸಂಜು, ಕಳೆದ ಪಂದ್ಯಕ್ಕಿಂತ ಒಂದು ರನ್ ಹೆಚ್ಚಿಗೆ ಬಾರಿಸಿ ಅಂದರೆ 7 ರನ್ ಬಾರಿಸಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಸಂಜು ಅವರ ಇನ್ನಿಂಗ್ಸ್ನಲ್ಲಿ ಕೇವಲ 1 ಬೌಂಡರಿ ಮಾತ್ರ ಸೇರಿತ್ತು. ಸಂಜು ಬೇಗನೇ ಔಟಾದ ಕಾರಣ ಸಿಎಸ್‌ಕೆ ತಂಡ 14 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.

ಸಂಜು ಸ್ಯಾಮ್ಸನ್ ಅವರ ವಿಕೆಟ್ ಬೇಗನೇ ಪತನವಾದರೂ ಆ ಬಳಿಕ ಜೊತೆಯಾಗಿರುವ ನಾಯಕ ರುತುರಾಜ್ ಹಾಗೂ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ತಂಡವನ್ನು ಶತಕದ ಗಡಿ ದಾಟಿಸಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಸಿಎಸ್‌ಕೆ ಕೇವಲ 10 ಓವರ್ಗಳಲ್ಲಿ 100 ರನ್ ಕಲೆಹಾಕಿದೆ.

ಸಿಎಸ್‌ಕೆ ಪರ ಅಬ್ಬರದ ಇನ್ನಿಂಗ್ಸ್ ಆಡಿರುವ ಆಯುಷ್ ಮ್ಹಾತ್ರೆ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಸಹ ಪೂರೈಸಿದ್ದಾರೆ. ಕ್ರೀಸ್ಗೆ ಬಂದಾಗಿನಿಂದ ಅಬ್ಬರದ ಇನ್ನಿಂಗ್ಸ್ ಆಡಿರುವ ಆಯುಷ್ ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆಯುಷ್ ತಮ್ಮ ಇನ್ನಿಂಗ್ಸ್ನಲ್ಲಿ ಇದುವರೆಗೆ 5 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದ್ದಾರೆ.