- Kannada News Photo gallery Cricket photos Karnataka vs Jharkhand: Devdutt Padikkal Century in High Scoring Vijay Hazare Game
412 ರನ್ಗಳ ಬೃಹತ್ ಗುರಿ; 147 ರನ್ ಸಿಡಿಸಿದ ದೇವದತ್ ಪಡಿಕ್ಕಲ್
Devdutt Padikkal century: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಮತ್ತು ಜಾರ್ಖಂಡ್ ನಡುವಿನ ರೋಚಕ ಪಂದ್ಯದಲ್ಲಿ ಇಶಾನ್ ಕಿಶನ್ (125) ಭರ್ಜರಿ ಶತಕದ ನೆರವಿನಿಂದ ಜಾರ್ಖಂಡ್ 412 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಕರ್ನಾಟಕದ ದೇವದತ್ ಪಡಿಕ್ಕಲ್ (147) ಮತ್ತು ಮಯಾಂಕ್ ಅಗರ್ವಾಲ್ (54) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಹಮದಾಬಾದ್ನಲ್ಲಿ ನಡೆದ ಈ ಹೈ ಸ್ಕೋರಿಂಗ್ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಿದೆ.
Updated on: Dec 24, 2025 | 5:19 PM

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ ಬರೋಬ್ಬರಿ 412 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ಕರ್ನಾಟಕ ಕೂಡ ಸವಾಲಿನ ಪ್ರದರ್ಶನ ನೀಡುತ್ತಿದೆ.

ಕರ್ನಾಟಕ ಪರ ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕ ಮಯಾಂಕ್ ಅಗರ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ನಲ್ಲಿ 118 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 147 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇದು ಮಾತ್ರವಲ್ಲದೆ ಮೊದಲ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್ ಅಗರ್ವಾಲ್ 114 ರನ್ಗಳ ಭರ್ಜರಿ ಜೊತೆಯಾಟವನ್ನು ನೀಡಿದರು. ಇವರಿಬ್ಬರು ಕೇವಲ 11.5 ಓವರ್ಗಳಲ್ಲಿ ತಂಡವನ್ನು ಇಷ್ಟು ಮೊತ್ತಕ್ಕೆ ಕೊಂಡೊಯ್ದಿದ್ದು, ಇವರಿಬ್ಬರ ಸ್ಫೋಟಕ ಆಟಕ್ಕೆ ಸಾಕ್ಷಿಯಾಗಿದೆ.

ದೇವದತ್ ಮಾತ್ರವಲ್ಲದೆ ನಾಯಕ ಮಯಾಂಕ್ ಕೂಡ 54 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಮಯಾಂಕ್ 10 ಬೌಂಡರಿ ಕೂಡ ಬಾರಿಸಿದರು. ಇವರಿಬ್ಬರ ಈ ಜೊತೆಯಾಟದಿಂದಾಗಿ ಕರ್ನಾಟಕ ತಂಡ ಬೃಹತ್ ಗುರಿಯನ್ನು ಬೆನ್ನಟ್ಟುವತ್ತ ಹೆಜ್ಜೆ ಇಟ್ಟಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ಕರ್ನಾಟಕ ತಂಡಕ್ಕೆ 42 ಎಸೆತಗಳಲ್ಲಿ 63 ರನ್ ಬೇಕಿದೆ.

ಇನ್ನು ಇದೇ ಪಂದ್ಯದಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಕೂಡ ಕರ್ನಾಟಕದ ವಿರುದ್ಧ ಸ್ಫೋಟಕ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿದ ಕಿಶನ್ 7 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್ಗಳ ಸಹಿತ 125 ರನ್ ಬಾರಿಸಿದರು. ಕಿಶನ್ ಶತಕದಿಂದಾಗಿ ಜಾರ್ಖಂಡ್ ತಂಡ ಕರ್ನಾಟಕದ ಮುಂದೆ 412 ರನ್ಗಳ ಬೃಹತ್ ರನ್ ಕಲೆಹಾಕಿದೆ.
