ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ (Ellyse Perry) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 6 ವಿಕೆಟ್ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (WPL 2024) ಆರು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪೆರ್ರಿ ಪಾತ್ರರಾಗಿದ್ದಾರೆ.
ಹಾಗೆಯೇ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಾಖಲೆ ಕೂಡ ಎಲ್ಲಿಸ್ ಪೆರ್ರಿ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮರಿಝನ್ನೆ ಕಪ್ ಹೆಸರಿನಲ್ಲಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಮರಿಝನ್ನೆ ಕಪ್ 2023 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್ ನೀಡಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಎಲ್ಲಿಸ್ ಪೆರ್ರಿ ಅಳಿಸಿ ಹಾಕಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಂಜನಾ (30), ಸ್ಕೀವರ್ ಬ್ರಂಟ್ (10), ಹರ್ಮನ್ಪ್ರೀತ್ ಕೌರ್ (0), ಅಮೆಲಿಯಾ ಕೆರ್ (2), ಅಮನ್ಜೊತ್ ಕೌರ್ (4) ಹಾಗೂ ಪೂಜಾ ವಸ್ತ್ರಾಕರ್ (6) ಅವರನ್ನು ಔಟ್ ಮಾಡುವ ಮೂಲಕ ಎಲ್ಲಿಸ್ ಪೆರ್ರಿ 6 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಕಬಳಿಸಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 6 ವಿಕೆಟ್ ಕಬಳಿಸಿದ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೂ ಎಲ್ಲಿಸ್ ಪೆರ್ರಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ಪರ ಅನಿಲ್ ಕುಂಬ್ಳೆ (5/5), ವನಿಂದು ಹಸರಂಗ (5/18), ಜಯದೇವ್ ಉನಾದ್ಕಟ್ (5/25), ಹರ್ಷಲ್ ಪಟೇಲ್ (5/27) ಹಾಗೂ ಆಶಾ ಸೋಬನಾ (5/22) ಐದು ವಿಕೆಟ್ಗಳ ಸಾಧನೆ ಮಾಡಿದ್ದರು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲೇ ಮೊದಲ ಬಾರಿ ಪ್ಲೇಯರ್ ಒಬ್ಬರು 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆರ್ಸಿಬಿ ಪರ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆಯನ್ನೂ ಕೂಡ ಬರೆದಿದ್ದಾರೆ.
Published On - 7:58 am, Wed, 13 March 24