- Kannada News Photo gallery Cricket photos Engaland Batter Joe Root Creates New World Record in Test Cricket
ಒಂದು ಶತಕದೊಂದಿಗೆ ಮೂವರ ವಿಶ್ವ ದಾಖಲೆ ಮುರಿದ ಜೋ ರೂಟ್
Joe Root Records: ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ 3 ಭರ್ಜರಿ ಶತಕ ಹಾಗೂ 1 ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಒಟ್ಟು 537 ರನ್ ಕಲೆಹಾಕಿ ಹಲವು ದಾಖಲೆಗಳನ್ನು ಸಹ ನಿರ್ಮಿಸಿದ್ದಾರೆ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ರನ್ ಸರದಾರರ ಪಟ್ಟಿಯಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ.
Updated on: Aug 04, 2025 | 8:55 AM

ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲೂ ಜೋ ರೂಟ್ (Joe Root) ಶತಕ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 152 ಎಸೆತಗಳಲ್ಲಿ 12 ಫೋರ್ಗಳೊಂದಿಗೆ 105 ರನ್ ಬಾರಿಸಿದರು. ಈ ಶತಕದೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಭಾರತದ ವಿರುದ್ಧ ಬಾರಿಸಿದ ಈ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಜೋ ರೂಟ್ ಪಾಲಾಗಿದೆ. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಶ್ರೀಲಂಕಾದ ಮಹೇಲ ಜಯವರ್ಧನೆ, ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಹಾಗೂ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದರು.

ಮಹೇಲ ಜಯವರ್ಧನೆ, ರಿಕಿ ಪಾಂಟಿಂಗ್ ಹಾಗೂ ಜಾಕ್ಸ್ ಕಾಲಿಸ್ ತವರಿನಲ್ಲಿ ತಲಾ 23 ಟೆಸ್ಟ್ ಶತಕ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಮೂವರು ದಿಗ್ಗಜರ ಹೆಸರಿನಲ್ಲಿದ್ದ ಈ ವಿಶ್ವ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ. ಅದು ಕೂಡ ಬರೋಬ್ಬರಿ 24 ಹೋಮ್ ಟೆಸ್ಟ್ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

ಅಷ್ಟೇ ಅಲ್ಲದೆ ಈ ಶತಕದೊಂದಿಗೆ ಜೋ ರೂಟ್ ಸೆಂಚುರಿ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 51 ಶತಕಗಳೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, ಇದೀಗ ಜೋ ರೂಟ್ 39 ಸೆಂಚುರಿಗಳೊಂದಿಗೆ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇನ್ನೆರಡು ಶತಕ ಬಾರಿಸಿದರೆ ರಿಕಿ ಪಾಂಟಿಂಗ್ (41) ಅವರನ್ನು ಹಿಂದಿಕ್ಕಿ ತೃತೀಯ ಸ್ಥಾನಕ್ಕೇರಬಹುದು.

ಹಾಗೆಯೇ ಈ ಬಾರಿಯ ಸರಣಿಯಲ್ಲಿ 3 ಭರ್ಜರಿ ಶತಕ ಹಾಗೂ 1 ಅರ್ಧಶತಕದೊಂದಿಗೆ ಬರೋಬ್ಬರಿ 537 ರನ್ ಕಲೆಹಾಕಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ 6 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.
