- TV9 Kannada Photo gallery Cricket photos Rahul Dravid Buys ETPL Team, Appoints R Ashwin Captain of Dublin Guardians
ರಾಹುಲ್ ದ್ರಾವಿಡ್ ಒಡೆತನದ ತಂಡಕ್ಕೆ ಆರ್. ಅಶ್ವಿನ್ ನಾಯಕ
Rahul Dravid: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಯುರೋಪಿಯನ್ T20 ಪ್ರೀಮಿಯರ್ ಲೀಗ್ (ETPL) ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡವನ್ನು ಖರೀದಿಸಿದ್ದಾರೆ. ಈ ತಂಡಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಆರ್. ಅಶ್ವಿನ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ದ್ರಾವಿಡ್‌ರ ಹೊಸ ಇನ್ನಿಂಗ್ಸ್ ಇದಾಗಿದ್ದು, ಅಶ್ವಿನ್ ಮೊದಲ ಬಾರಿಗೆ ವಿದೇಶಿ ಲೀಗ್‌ನಲ್ಲಿ ನಾಯಕನಾಗಿದ್ದಾರೆ. ಆಗಸ್ಟ್ 2026 ರಿಂದ ETPL ಪ್ರಾರಂಭವಾಗಲಿದೆ.
Updated on: Jul 01, 2026 | 6:54 PM

ಟೀಂ ಇಂಡಿಯಾ ಹಾಗೂ ಐಪಿಎಲ್‌ನಿಂದ ದೂರ ಸರಿದ ಬಳಿಕ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೊಸ ಇನ್ನಿಂಗ್ಸ್ ಆರಂಭಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಆಟಗಾರನಾಗಿ ಯಶಸ್ವಿಯಾಗಿದ್ದ ರಾಹುಲ್ ಇದೀಗ ತಂಡವೊಂದನ್ನು ಖರೀದಿಸಿ, ಆ ತಂಡವನ್ನು ಚಾಂಪಿಯನ್ ಮಾಡಲು ಹೊರಟಿದ್ದಾರೆ.

ಕೆಲವು ದಿನಗಳ ಹಿಂದೆ ರಾಹುಲ್ ದ್ರಾವಿಡ್, ಯುರೋಪಿನಲ್ಲಿ ಆರಂಭವಾಗುತ್ತಿರುವ ಹೊಸ ಟಿ20 ಲೀಗ್ ಆದ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್) ನಲ್ಲಿ ಹೊಸ ತಂಡವನ್ನು ಖರೀದಿಸಿದ್ದಾರೆ. ದ್ರಾವಿಡ್ ಡಬ್ಲಿನ್ ಗಾರ್ಡಿಯನ್ಸ್ ತಂಡದ ಮಾಲೀಕರಾಗಿದ್ದು, ಇದೀಗ ಈ ತಂಡಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಆರ್. ಅಶ್ವಿನ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದಾರೆ.

ವಾಸ್ತವವಾಗಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಅನ್ನು ಮೂರು ದೇಶಗಳ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಆಯೋಜಿಸುತ್ತಿವೆ. ಇದು ಕ್ರಿಕೆಟ್ ಸ್ಕಾಟ್ಲೆಂಡ್, ಕ್ರಿಕೆಟ್ ಐರ್ಲೆಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ನಡುವಿನ ಪಾಲುದಾರಿಕೆಯಾಗಿದ್ದು, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಲೀಗ್‌ನ ಸಹ-ಮಾಲೀಕರಾಗಿದ್ದಾರೆ.

ಮೂರು ದೇಶಗಳಿಂದ ತಲಾ ಎರಡು ತಂಡಗಳು ಲೀಗ್‌ನಲ್ಲಿ ಭಾಗವಹಿಸುತ್ತಿದ್ದು, ದ್ರಾವಿಡ್ ಐರಿಶ್ ಫ್ರಾಂಚೈಸ್ ಡಬ್ಲಿನ್‌ನ ಮಾಲೀಕತ್ವವನ್ನು ಹೊಂದಿದ್ದು, ಅಲ್ಲಿ ಅಶ್ವಿನ್ ನಾಯಕತ್ವ ವಹಿಸಲಿದ್ದಾರೆ. ದ್ರಾವಿಡ್ ಹೊಸ ತಂಡವನ್ನು ಖರೀದಿಸಿದ ಬಳಿಕ ಅಶ್ವಿನ್ ಅವರನ್ನು ನೇರವಾಗಿ ತಂಡಕ್ಕೆ ಸೇರಿಸಿಕೊಂಡಿದ್ದರು.

ಆಗಸ್ಟ್ 2026 ರಲ್ಲಿ ಪ್ರಾರಂಭವಾಗುವ ಈ ಲೀಗ್‌ನಲ್ಲಿ ಎಲ್ಲಾ ತಂಡಗಳನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಜುಲೈ 2 ರಂದು ಡ್ರಾಫ್ಟ್ ಅನ್ನು ನಿಗದಿಪಡಿಸಲಾಗಿದೆ. ಇದಕ್ಕೂ ಮೊದಲು, ಎಲ್ಲಾ ಆರು ತಂಡಗಳು ಕೆಲವು ಆಟಗಾರರನ್ನು ನೇರ ಸಹಿಯಾಗಿ ತಮ್ಮ ತಂಡಗಳಿಗೆ ಸೇರಿಸಿಕೊಂಡಿವೆ. ಅದರಂತೆ ಅಶ್ವಿನ್ ಡಬ್ಲಿನ್ ಗಾರ್ಡಿಯನ್ಸ್‌ಗೆ ನಾಯಕ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಅಶ್ವಿನ್ ಟಿ20 ಲೀಗ್‌ನಲ್ಲಿ ಮಾರ್ಗದರ್ಶಕರಾಗಿ ತೊಡಗಿಸಿಕೊಂಡಿರುವುದು ಇದೇ ಮೊದಲು. ಅಲ್ಲದೆ ಅವರು ಆಡುತ್ತಿರುವ ಎರಡನೇ ವಿದೇಶಿ ಲೀಗ್ ಕೂಡ ಇದಾಗಿದೆ. ಪ್ರಸ್ತುತ, ಅಶ್ವಿನ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಆಡುತ್ತಿದ್ದಾರೆ.




