1,955 ಎಸೆತಗಳಲ್ಲಿ ಇತಿಹಾಸ ರಚಿಸಿದ ಗ್ಲೆನ್ ಮ್ಯಾಕ್ಸ್ವೆಲ್
Glenn Maxwell Records: ಬಿಗ್ ಬ್ಯಾಷ್ ಲೀಗ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಕೇವಲ 1,955 ಎಸೆತಗಳಲ್ಲಿ ಎಂಬುದು ವಿಶೇಷ. ಈ ಮೂಲಕ ಕಳೆದ ಕೆಲ ವರ್ಷಗಳಿಂದ ಕ್ರಿಸ್ ಲಿನ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮ್ಯಾಕ್ಸ್ವೆಲ್ ಅಳಿಸಿ ಹಾಕಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on: Jan 11, 2025 | 9:53 AM

ಬಿಗ್ ಬ್ಯಾಷ್ ಲೀಗ್ನ 28ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆದ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಕಣಕ್ಕಿಳಿದ ಮ್ಯಾಕ್ಸ್ವೆಲ್ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 58 ರನ್ ಚಚ್ಚಿದ್ದರು.

ಈ 58 ರನ್ಗಳೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್ ಬಿಗ್ ಬ್ಯಾಷ್ ಲೀಗ್ನಲ್ಲಿ 3000 ರನ್ ಪೂರೈಸಿದ್ದಾರೆ. ಈ ಮೂಲಕ ಬಿಬಿಎಲ್ನಲ್ಲಿ ಈ ಸಾಧನೆ ಮಾಡಿದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತೀ ವೇಗವಾಗಿ 3 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ಮ್ಯಾಕ್ಸ್ವೆಲ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಲಿನ್ ಹೆಸರಿನಲ್ಲಿತ್ತು. 2011 ರಿಂದ ಬಿಗ್ ಬ್ಯಾಷ್ ಲೀಗ್ ಆಡುತ್ತಿರುವ ಕ್ರಿಸ್ ಲಿನ್ 2,016 ಎಸೆತಗಳ ಮೂಲಕ 3000 ರನ್ ಪೂರೈಸಿದ್ದರು. ಈ ಮೂಲಕ ಬಿಬಿಎಲ್ನಲ್ಲಿ ಅತೀ ವೇಗವಾಗಿ 3 ಸಾವಿರ ರನ್ಗಳ ಗಡಿದಾಟಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಕೇವಲ 1,955 ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿ ಗ್ಲೆನ್ ಮ್ಯಾಕ್ಸ್ವೆಲ್ ಹೊಸ ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ 2 ಸಾವಿರಕ್ಕೂ ಕಡಿಮೆ ಎಸೆತಗಳಲ್ಲಿ 3000 ರನ್ಗಳ ಗಡಿದಾಟಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್ ಬ್ಯಾಷ್ ಲೀಗ್ನಲ್ಲಿ ಈವರೆಗೆ 110 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ 2 ಶತಕ ಹಾಗೂ 19 ಅರ್ಧಶತಕಗಳೊಂದಿಗೆ ಒಟ್ಟು 3047 ರನ್ ಕಲೆಹಾಕಿದ್ದಾರೆ. ಇದೀಗ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಮ್ಯಾಕ್ಸ್ವೆಲ್ ಅಗ್ರಸ್ಥಾನದಲ್ಲಿರುವ ಕ್ರಿಸ್ ಲಿನ್ (3908) ಅವರನ್ನು ಹಿಂದಿಕ್ಕಲು ಬರೋಬ್ಬರಿ 862 ರನ್ಗಳನ್ನು ಕಲೆಹಾಕಬೇಕಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




