ಸೆಮಿಫೈನಲ್ಗೂ ಮುನ್ನ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ಹೆಸರಿಗೆ ಹೊಸ ದಾಖಲೆ ಸೇರ್ಪಡೆ
India vs New zealand: ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡ ಮುಖಾಮುಖಿಯಾಗಲಿದೆ. ಈ ಮ್ಯಾಚ್ನಲ್ಲಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಲಿದೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ಹಾಗೂ ವಿಶ್ವದ 22ನೇ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ.
Updated on: Mar 01, 2025 | 10:54 AM

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೊಸ ದಾಖಲೆಯ ಹೊಸ್ತಿಲ್ಲ್ಲಿದ್ದಾರೆ. ಅದು ಕೂಡ ವಿಶ್ವ ಕ್ರಿಕೆಟ್ನಲ್ಲಿ ಕೇವಲ 21 ಆಟಗಾರರು ಮಾಡಿದ ವಿಶೇಷ ದಾಖಲೆಯ ಸನಿಹದಲ್ಲಿ. ಅಂದರೆ ಏಕದಿನ ಕ್ರಿಕೆಟ್ನಲ್ಲಿ ಕೇವಲ 21 ಆಟಗಾರರು ಮಾತ್ರ 300 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ.

ಈ ಇಪ್ಪತ್ತೊಂದು ಆಟಗಾರರಲ್ಲಿ ಕೇವಲ 6 ಭಾರತೀಯರು ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಸಾಧನೆ ಮಾಡಲಿರುವ 7ನೇ ಆಟಗಾರನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 2 ರಂದು ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿದರೆ ಏಕದಿನ ಕ್ರಿಕೆಟ್ನಲ್ಲಿ 300 ಪಂದ್ಯಗಳನ್ನಾಡಿದ 22ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಈವರೆಗೆ 299 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 287 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 15078 ಎಸೆತಗಳನ್ನು ಎದುರಿಸಿ ಒಟ್ಟು 14085 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಗೆಯೇ 299 ಏಕದಿನ ಮ್ಯಾಚ್ಗಳ 296 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ವಿರಾಟ್ ಕೊಹ್ಲಿ ಒಟ್ಟು 158 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಫೀಲ್ಡರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೀಗ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 3 ಕ್ಯಾಚ್ ಹಿಡಿದರೆ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಅಂದರೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿಗೆ ಎರಡು ವಿಶ್ವ ದಾಖಲೆ ನಿರ್ಮಿಸುವ ಅವಕಾಶವಿದೆ.

ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1989 ರಿಂದ 2012 ರವರೆಗೆ ಸಚಿನ್ ತೆಂಡೂಲ್ಕರ್ ಒಟ್ಟು 463 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 452 ಇನಿಂಗ್ಸ್ ಆಡಿರುವ ಅವರು 18426 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.



















