ಭಾರತ ಮಹಿಳಾ ಕ್ರಿಕೆಟ್ ತಂಡ ಆಂಗ್ಲರ ನಾಡಲ್ಲಿ ವಿಶೇಷ ದಾಖಲೆ ಬರೆದಿದೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಇದೀಗ ದ್ವಿತೀಯ ಪಂದ್ಯದಲ್ಲೂ ಅಮೋಘ ಜಯ ಕಂಡು ಸರಣಿ ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿದೆ.
ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಸ್ಫೋಟಕ ಶತಕದ ಜೊತೆ ಹರ್ಲೀನ್ ಡಿಯೋಲ್ ಅರ್ಧಶತಕ ಮತ್ತು ರೇಣುಕಾ ಸಿಂಗ್ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ 88 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ 2-0 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿದೆ. ಇದರೊಂದಿಗೆ ಬರೋಬ್ಬರಿ 23 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 100 ರನ್ಗೂ ಮೊದಲೆ 3 ವಿಕೆಟ್ ಕಳೆದುಕೊಂಡಿತು. ಶಫಾಲಿ ವರ್ಮಾ 7 ಎಸೆತಗಳಲ್ಲಿ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೆಲಹೊತ್ತು ಕ್ರೀಸ್ನಲ್ಲಿದ್ದ ಯಸ್ತಿಕಾ ಭಾಟಿಯ 26 ರನ್ ಗಳಿಸಿದರಷ್ಟೆ. ಸ್ಮೃತಿ ಮಂದಾನ 51 ಎಸೆತಗಳಲ್ಲಿ 40 ರನ್ಗೆ ಬ್ಯಾಟ್ ಕೆಳಗಿಟ್ಟರು.
ನಂತರ ಶುರುವಾಗಿದ್ದು ನಾಯಕಿ ಹರ್ಮನ್ಪ್ರೀತ್ ಕೌರ್ ಆಟ. ಇವರಿಗೆ ಹರ್ಲೀನ್ ಡಿಯೊಲ್ ಉತ್ತಮ ಸಾಥ್ ನೀಡಿದರು. ಆಂಗ್ಲ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಕೌರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದ ಇವರು ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿ ಬಿಟ್ಟರು. ಆರಂಭದಲ್ಲಿ ಸಿಂಗಲ್, ಡಬಲ್ ಮೂಲಕ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಆ ಬಳಿಕ ತಮ್ಮ ಆಕ್ರಮಕಾರಿ ಆಟಕ್ಕೆ ಮುಂದಾದ ಹರ್ಮನ್ ಬೌಂಡರಿ–ಸಿಕ್ಸರ್ಗಳ ಮಳೆ ಸುರಿಸಿದರು.
ಕೇವಲ 111 ಎಸೆತಗಳಲ್ಲಿ 18 ಫೋರ್, 4 ಸಿಕ್ಸರ್ ಸಿಡಿಸಿ ಕೌರ್ ಅಜೇಯ 143 ರನ್ ಚಚ್ಚಿದರು. ಇವರಿಗೆ ಜೊತೆಯಾದ ಹರ್ಲೀನ್ 72 ಎಸೆತಗಳಲ್ಲಿ 5 ಫೋರ್, 2 ಸಿಕ್ಸರ್ನೊಂದಿಗೆ 58 ರನ್ ಸಿಡಿಸಿದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 18 ಹಾಗೂ ದೀಪ್ತಿ ಶರ್ಮಾ ಅಜೇಯ 15 ರನ್ ಕಲೆಹಾಕಿದರು. ಪರಿಣಾಮ ಭಾರತ ಮಹಿಳಾ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್ ಕಲೆಹಾಕಿತು. ಇದು ಆಂಗ್ಲ ಮಹಿಳೆಯರ ವಿರುದ್ಧ ದಾಖಲೆಯ ಅತ್ಯಧಿಕ ರನ್ ಆಗಿದೆ.
ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು ಭಾರತೀಯ ಬೌಲಿಂಗ್ ದಾಳಿಗೆ ಕುಸಿಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಸೆ (39), ಡೇನಿಲ್ (65), ಜಾನ್ಸಿ (39) ಗೆಲುವಿಗೆ ಹೋರಾಟ ನಡೆಸಿದರೂ ಅದು ಫಲ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 44.2 ಓವರ್ಗಳಲ್ಲಿ 245 ರನ್ಗೆ ಆಲೌಟ್ ಆಯಿತು. ಭಾರತ ಪರ ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಹೇಮಲತಾ 2, ಶೆಫಾಲಿ ಹಾಗೂ ದೀಪ್ತಿ ಶರ್ಮಾ 1 ವಿಕೆಟ್ ಕಿತ್ತರು.
ಈ ಮೂಲಕ ಭಾರತ 88 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಕಲೆಹಾಕಿದ 333 ರನ್ ಮಹಿಳಾ ಕ್ರಿಕೆಟ್ನಲ್ಲಿ ಮೂಡಿ ಬಂದಿರುವ ಎರಡನೇ ಅತಿದೊಡ್ಡ ಏಕದಿನ ಸ್ಕೋರ್ ಆಗಿದೆ. ಈ ಹಿಂದೆ ಭಾರತದ ಮಹಿಳೆಯರು ಐರ್ಲೆಂಡ್ ವಿರುದ್ಧ 2 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದ್ದರು. ಜೊತೆಗೆ 1999ರ ಬಳಿಕ ಆಂಗ್ಲರ ನಾಡಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತು.
Published On - 10:43 am, Thu, 22 September 22