2022 ರ ಅಂಡರ್-19 ವಿಶ್ವಕಪ್‌ನಲ್ಲಿ ಅನೇಕ ಯುವ ಆಟಗಾರರು ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ 'ಯಂಗಿಸ್ತಾನ್' ತಂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ 5ನೇ ಬಾರಿ ಟ್ರೋಫಿ ವಶಪಡಿಸಿಕೊಂಡಿದೆ. ನಾಯಕನಾಗಿ ಯಶ್ ಧುಲ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ವಿಶ್ವಕಪ್ ನಂತರ, ಈ ಯುವ ಆಟಗಾರರು ಈಗ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ IPL 2022 ಮೆಗಾ ಹರಾಜಿನ ಮೇಲೆ ಕಣ್ಣಿಟ್ಟಿದ್ದಾರೆ. ಅದರಂತೆ ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿದ 5 ಆಟಗಾರರ ಖರೀದಿಗೂ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಬಹುದು. ಆ ಆಟಗಾರರು ಯಾರೆಲ್ಲಾ ನೋಡೋಣ...
ಡೆವಾಲ್ಡ್ ಬ್ರೆವಿಸ್: ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ 2022 ರ ಅಂಡರ್-19 ವಿಶ್ವಕಪ್‌ನ 6 ಪಂದ್ಯಗಳಲ್ಲಿ ಗರಿಷ್ಠ 506 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬೇಬಿ ಡಿವಿಲಿಯರ್ಸ್ ಎಂದು ಜನಪ್ರಿಯವಾಗಿರುವ ಬ್ರೆವಿಸ್, ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ಘೋಷಿಸಿದ್ದಾರೆ.
ರಾಜ್ ಅಂಗದ್ ಬಾವಾ: ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಗಿ ರಾಜ್ ಅಂಗದ್ ಬಾವಾ ಹೊರಹೊಮ್ಮಿದ್ದಾರೆ. ಬಾವಾ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಹಾಗೆಯೇ 6 ಪಂದ್ಯಗಳಲ್ಲಿ ಒಟ್ಟು 252 ರನ್ ಗಳಿಸಿದ್ದಾರೆ. ಇದೀಗ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಅಂಗದ್ ಬಾವಾ ಕೂಡ ಮೆಗಾ ಹರಾಜಿನಲ್ಲಿದ್ದಾರೆ.
ಯಶ್ ಧುಲ್: ಭಾರತದ ಅಂಡರ್-19 ವಿಶ್ವಕಪ್ ತಂಡದ ನಾಯಕ ಯಶ್ ಧುಲ್ ಅವರಿಗೆ ಈ ಟೂರ್ನಿ ಅದ್ಭುತವಾಗಿತ್ತು. ಧುಲ್ 4 ಪಂದ್ಯಗಳಲ್ಲಿ 1 ಶತಕ ಮತ್ತು 1 ಅರ್ಧಶತಕದೊಂದಿಗೆ ಒಟ್ಟು 229 ರನ್ ಗಳಿಸಿದರು. ಸೆಮಿಫೈನಲ್‌ನಲ್ಲಿ ಧುಲ್ ಶತಕ ಬಾರಿಸುವ ವಿರಾಟ್ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್ ದಾಖಲೆಯನ್ನೂ ಸರಿಗಟ್ಟಿದ್ದರು. ಇದೀಗ ಧುಲ್ ಮೂಲ ಬೆಲೆ 20 ಲಕ್ಷ ರೂ. ನೊಂದಿಗೆ ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ.
ವಿಕಿ ಒಸ್ತ್ವಾಲ್: 2022 ರ ಅಂಡರ್-19 ವಿಶ್ವಕಪ್‌ನಲ್ಲಿ ವಿಕಿ ಒಸ್ತ್ವಾಲ್ ಮಿಸ್ಟ್ರಿ ಸ್ಪಿನ್ನರ್ ಆಗಿ ಹೊರಹೊಮ್ಮಿದರು. ಒಸ್ತ್ವಾಲ್ 6 ಪಂದ್ಯಗಳಲ್ಲಿ ಒಟ್ಟು 12 ವಿಕೆಟ್ ಪಡೆದು ಮಿಂಚಿದ್ದಾರೆ. ಐಪಿಎಲ್ ಹರಾಜಿನಲ್ಲಿ 20 ಲಕ್ಷ ಮೂಲ ಬೆಲೆ ಹೊಂದಿರುವ ಓಸ್ತ್ವಾಲ್ ಮೇಲೆ ಕೆಲ ಫ್ರಾಂಚೈಸಿಗಳು ಕಣ್ಣಿಟ್ಟಿದೆ.
ಹರ್ನೂರ್ ಸಿಂಗ್: ಅಂಡರ್-19 ವಿಶ್ವಕಪ್‌ನಲ್ಲಿ ಹರ್ನೂರ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಈ ಯುವ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಹರ್ನೂರ್ 6 ಪಂದ್ಯಗಳಲ್ಲಿ 141 ರನ್ ಗಳಿಸಿದ್ದರು. 19 ವರ್ಷದ ಎಡಗೈ ಬ್ಯಾಟ್ಸ್‌ಮನ್ ಹರ್ನೂರ್ ಸಿಂಗ್ ಐಪಿಎಲ್ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ಘೋಷಿಸಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ಯುವ ಆಟಗಾರ ಬಿಕರಿಯಾದರೂ ಅಚ್ಚರಿಪಡಬೇಕಿಲ್ಲ.
Published On - 2:30 pm, Tue, 8 February 22