IPL 2024: RCB ದಾಖಲೆ ಧೂಳೀಪಟ ಮಾಡಿದ ಪಂಜಾಬ್ ಕಿಂಗ್ಸ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೊಸ ಇತಿಹಾಸ ಬರೆದಿದೆ., ಅದು ಸಹ 262 ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ಈ ಚೇಸಿಂಗ್ನೊಂದಿಗೆ ಪಂಜಾಬ್ ಪಡೆ ಹಲವು ದಾಖಲೆಗಳನ್ನು ಸಹ ಬರೆದಿದೆ. ಈ ದಾಖಲೆಗಳ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ವಿಶೇಷ ರೆಕಾರ್ಡ್ ಅನ್ನು ಅಳಿಸಿ ಹಾಕಿದೆ.
Updated on: Apr 27, 2024 | 1:03 PM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಹೊಸ ಇತಿಹಾಸ ನಿರ್ಮಾಣವಾಗಿದೆ. ಶುಕ್ರವಾರ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 6 ವಿಕೆಟ್ ಕಳೆದುಕೊಂಡು 261 ರನ್ ಕಲೆಹಾಕಿತು.

262 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಜಾನಿ ಬೈರ್ಸ್ಟೋವ್ ಸ್ಪೋಟಕ ಶತಕ ಸಿಡಿಸಿದರೆ, ಶಶಾಂಕ್ ಸಿಂಗ್ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಅರ್ಧಶತಕ ಬಾರಿಸಿದರು. ಈ ಶತಕ-ಅರ್ಧಶತಕಗಳ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ಕೇವಲ 18.4 ಓವರ್ಗಳಲ್ಲಿ 262 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಟಿ20 ಕ್ರಿಕೆಟ್‌ನಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಆರ್ಸಿಬಿ ತಂಡದ ಹೆಸರಿನಲ್ಲಿತ್ತು. ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 20 ಓವರ್ಗಳಲ್ಲಿ 262 ರನ್ ಕಲೆಹಾಕಿ ಆರ್ಸಿಬಿ ಈ ವಿಶೇಷ ವಿಶ್ವ ದಾಖಲೆ ಬರೆದಿತ್ತು.

ಆದರೀಗ ಕೆಕೆಆರ್ ವಿರುದ್ಧ 18.4 ಓವರ್ಗಳಲ್ಲಿ 262 ರನ್ ಕಲೆಹಾಕುವ ಮೂಲಕ ಪಂಜಾಬ್ ಕಿಂಗ್ಸ್ ಈ ದಾಖಲೆಯನ್ನು ಮುರಿದಿದೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ದ್ವಿತೀಯ ಇನಿಂಗ್ಸ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಪಂಜಾಬ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ.



















