IPL 2024: ಗುಜರಾತ್ ಟೈಟಾನ್ಸ್ ಬೇಡವೇ ಬೇಡವೆಂದು ಕೈ ಬಿಟ್ಟ ಆಟಗಾರರಿಗೆ ಕೋಟಿ ಸುರಿದ RCB
IPL 2024: 2 ಬಾರಿ ಫೈನಲ್ಗೇರಿದ ಗುಜರಾತ್ ಟೈಟಾನ್ಸ್ ತಂಡದ ಪರವೇ ಕಳಪೆ ಪ್ರದರ್ಶನ ನೀಡಿದ್ದ ಅಲ್ಝಾರಿ ಜೋಸೆಫ್ ಹಾಗೂ ಯಶ್ ದಯಾಳ್ ಅವರ ಖರೀದಿಗಾಗಿ RCB ಬರೋಬ್ಬರಿ 16.50 ಕೋಟಿ ರೂ. ವ್ಯಯಿಸಿರುವುದು ನಿಜಕ್ಕೂ ಅಚ್ಚರಿಯೇ ಸರಿ.
Updated on: Dec 20, 2023 | 9:57 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಹರಾಜು ಮುಕ್ತಾಯದ ಬೆನ್ನಲ್ಲೇ ಆರ್ಸಿಬಿ ತಂಡದ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಆರ್ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರು. ಏಕೆಂದರೆ ಈ ಬಾರಿ ಆರ್ಸಿಬಿ ಅತೀ ಹೆಚ್ಚು ಮೊತ್ತ ವ್ಯಯಿಸಿರುವುದು ಗುಜರಾತ್ ಟೈಟಾನ್ಸ್ ತಂಡದ ಮಾಜಿ ಆಟಗಾರರ ಮೇಲೆ.

ಅಂದರೆ ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಅಲ್ಝಾರಿ ಜೋಸೆಫ್ ಹಾಗೂ ಯಶ್ ದಯಾಳ್ ಅವರನ್ನು ಈ ಬಾರಿ ಆರ್ಸಿಬಿ ತಂಡ ಖರೀದಿಸಿದೆ. ಅದು ಕೂಡ ಕೋಟಿ ಮೊತ್ತ ನೀಡುವ ಮೂಲಕ ಎಂಬುದೇ ಅಚ್ಚರಿ.

ಇಲ್ಲಿ ಅಲ್ಝಾರಿ ಜೋಸೆಫ್ ಖರೀದಿಗಾಗಿ ಆರ್ಸಿಬಿ ಫ್ರಾಂಚೈಸಿ ವ್ಯಯಿಸಿರುವುದು ಬರೋಬ್ಬರಿ 11.50 ಕೋಟಿ ರೂ. ಹಾಗೆಯೇ ಯಶ್ ದಯಾಳ್ ಅವರನ್ನು 5 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಕೇವಲ ಇಬ್ಬರು ಆಟಗಾರರಿಗೆ ಆರ್ಸಿಬಿ 16.50 ಕೋಟಿ ನೀಡಿರುವುದು ವಿಶೇಷ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಐಪಿಎಲ್ 2022ರ ಹರಾಜಿನಲ್ಲಿ ಅಲ್ಝಾರಿ ಜೋಸೆಫ್ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಕೇವಲ 2.40 ಕೋಟಿ ರೂ.ಗೆ ಖರೀದಿಸಿತ್ತು ಎಂಬುದು.

ಹಾಗೆಯೇ ಯಶ್ ದಯಾಳ್ ಅವರನ್ನು ಗುಜರಾತ್ ಟೈಟಾನ್ಸ್ ತಂಡವು 3.2 ಕೋಟಿ ರೂ.ಗೆ ಖರೀದಿಸಿತ್ತು. ಇದಾಗ್ಯೂ ಈ ಬಾರಿ ಗುಜರಾತ್ ತಂಡವು ದಯಾಳ್ ಅವರನ್ನು ಉಳಿಸಿಕೊಂಡಿರಲಿಲ್ಲ.

ಏಕೆಂದರೆ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ಪರ 14 ಪಂದ್ಯಗಳನ್ನಾಡಿದ್ದ ಯಶ್ ದಯಾಳ್ ಪಡೆದಿರುವುದು ಕೇವಲ 13 ವಿಕೆಟ್ಗಳನ್ನು ಮಾತ್ರ. ಹೀಗಾಗಿಯೇ ಈ ಬಾರಿ ಅವರನ್ನು ಕೈ ಬಿಡಲಾಗಿತ್ತು.

ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ಪರ ಕಳೆದ 2 ಸೀಸನ್ಗಳಲ್ಲಿ ಕಣಕ್ಕಿಳಿದಿದ್ದ ಅಲ್ಝಾರಿ ಜೋಸೆಫ್ 16 ಪಂದ್ಯಗಳಿಂದ ಕಬಳಿಸಿರುವುದು ಕೇವಲ 14 ವಿಕೆಟ್ಗಳು ಮಾತ್ರ. ಹೀಗಾಗಿಯೇ ಗುಜರಾತ್ ಫ್ರಾಂಚೈಸಿ ಈ ಬಾರಿ ವಿಂಡೀಸ್ ವೇಗಿಯನ್ನು ತಂಡದಿಂದ ಕೈಬಿಟ್ಟಿತು.

ಅತ್ತ 2 ಬಾರಿ ಫೈನಲ್ಗೇರಿದ ಗುಜರಾತ್ ಟೈಟಾನ್ಸ್ ಪರವೇ ಕಳಪೆ ಪ್ರದರ್ಶನ ನೀಡಿದ್ದ ಅಲ್ಝಾರಿ ಜೋಸೆಫ್ ಹಾಗೂ ಯಶ್ ದಯಾಳ್ ಅವರ ಖರೀದಿಗಾಗಿ ಆರ್ಸಿಬಿ ಬರೋಬ್ಬರಿ 16.50 ಕೋಟಿ ರೂ. ವ್ಯಯಿಸಿರುವುದು ನಿಜಕ್ಕೂ ಅಚ್ಚರಿಯೇ ಸರಿ.



















