- Kannada News Photo gallery Cricket photos IPL 2024: RCB have replaced Reece Topley with Chris Jordan
IPL 2024: RCB ತಂಡಕ್ಕೆ ಹೊಸ ಆಟಗಾರ ಎಂಟ್ರಿ..?
IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾಗಲಿದೆ ಎಂದು ತಿಳಿದು ಬಂದಿದೆ. ಅಂದರೆ ಆರ್ಸಿಬಿ ತಂಡದಿಂದ ಇಂಗ್ಲೆಂಡ್ ಆಟಗಾರ ರೀಸ್ ಟೋಪ್ಲಿ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
Updated on:Feb 14, 2024 | 3:05 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 (IPL 2024) ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಆರ್ಸಿಬಿ ತಂಡದಲ್ಲಿದ್ದ ಪ್ರಮುಖ ವೇಗಿ ರೀಸ್ ಟೋಪ್ಲಿ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಗಾಯದ ಸಮಸ್ಯೆಯ ಕಾರಣ ರೀಸ್ ಟೋಪ್ಲಿಗೆ ಫ್ರಾಂಚೈಸಿ ಲೀಗ್ ಕ್ರಿಕೆಟ್ ಆಡದಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸೂಚಿಸಿದೆ. ಹೀಗಾಗಿಯೇ ಅವರು ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹೊರಗುಳಿದ್ದಾರೆ. ಇದರ ಬೆನ್ನಲ್ಲೇ ಟೋಪ್ಲಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರ ದೊರೆಯುವುದು ಅನುಮಾನ ಎನ್ನಲಾಗಿತ್ತು. ಇದೀಗ ಟೋಪ್ಲಿ ಬದಲಿಗೆ ಆರ್ಸಿಬಿ ಮತ್ತೋರ್ವ ಆಟಗಾರನಿಗೆ ಮಣೆಹಾಕಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ರೀಸ್ ಟೋಪ್ಲಿ ಬದಲಿ ಆಟಗಾರನಾಗಿ ಕ್ರಿಸ್ ಜೋರ್ಡನ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಐಪಿಎಲ್ ಸೀಸನ್-17 ರಲ್ಲಿ ಆರ್ಸಿಬಿ ಪರ ಇಂಗ್ಲೆಂಡ್ ಆಟಗಾರ ಜೋರ್ಡನ್ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಜೋರ್ಡನ್ 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಐಪಿಎಲ್ಗೆ ರಿಎಂಟ್ರಿ ಕೊಡಲು ಜೋರ್ಡನ್ ಸಜ್ಜಾಗಿದ್ದಾರೆ.

ವಿಶೇಷ ಎಂದರೆ ಕ್ರಿಸ್ ಜೋರ್ಡನ್ 2016 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಈ ವೇಳೆ 9 ಪಂದ್ಯಗಳಿಂದ ಒಟ್ಟು 12 ವಿಕೆಟ್ಗಳನ್ನು ಕಬಳಿಸಿದ್ದರು. ಇದಾಗ್ಯೂ 2017 ರಲ್ಲಿ ಅವರನ್ನು ಆರ್ಸಿಬಿ ತಂಡದಿಂದ ಕೈ ಬಿಡಲಾಗಿತ್ತು.

ಆ ಬಳಿಕ 2017 ಮತ್ತು 2018 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕಣಕ್ಕಿಳಿದಿದ್ದರು. 2019 ರಲ್ಲಿ ಹರಾಜಾಗದೇ ಉಳಿದ ಜೋರ್ಡನ್ 2020 ಮತ್ತು 2021 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

ಹಾಗೆಯೇ 2023 ರಲ್ಲಿ ಜೋಫ್ರಾ ಆರ್ಚರ್ ಅವರ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಮತ್ತೊಮ್ಮೆ ಬದಲಿ ಆಟಗಾರನಾಗಿ ಕ್ರಿಸ್ ಜೋರ್ಡನ್ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
Published On - 9:31 am, Tue, 13 February 24
