- Kannada News Photo gallery Cricket photos IPL 2025: Rishabh Pant to leave Delhi Capitals Befor IPL Mega Auction?
IPL 2025: ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿದ್ದಾರಾ ರಿಷಭ್ ಪಂತ್..!
IPL 2025 Rishabh Pant: ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಒಟ್ಟು 43 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 19 ಪಂದ್ಯಗಳಲ್ಲಿ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಇನ್ನು 1 ಮ್ಯಾಚ್ ರದ್ದಾದರೆ, ಒಳಿದ 23 ಪಂದ್ಯಗಳಲ್ಲಿ ಡೆಲ್ಲಿ ಪಡೆ ಸೋಲನುಭವಿಸಿದೆ.
Updated on: Oct 13, 2024 | 9:59 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಇದರ ನಡುವೆ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ರಿಷಭ್ ಪಂತ್ ಕೇಳಿರುವ ಪ್ರಶ್ನೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಪಂತ್, ನಾನು ಹರಾಜಿನಲ್ಲಿ ಕಾಣಿಸಿಕೊಂಡರೆ ಮಾರಾಟವಾಗಲಿದ್ದೇನೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಎಷ್ಟು ಮೊತ್ತಕ್ಕೆ ಮಾರಾಟವಾಗಬಹುದು ಎಂದು ಕೇಳಿದ್ದಾರೆ.

ಈ ಪ್ರಶ್ನೆಗಳ ಬೆನ್ನಲ್ಲೇ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಇದಕ್ಕೂ ಮುನ್ನ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದರಲ್ಲೂ ಸಿಎಸ್ಕೆ ಫ್ರಾಂಚೈಸಿಯ ಹಿಟ್ ಲೀಸ್ಟ್ನಲ್ಲಿ ರಿಷಭ್ ಅವರ ಹೆಸರಿದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು.

ಈ ಸುದ್ದಿಗಳ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗಿತ್ತು. ಏಕೆಂದರೆ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕ ಪಾರ್ಥ್ ಜಿಂದಾಲ್ ಹಾಗೂ ರಿಷಭ್ ಪಂತ್ ಮುಂಬೈನಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದರು. ಅಲ್ಲದೆ ಅವರನ್ನು ಮೊದಲ ರಿಟೈನ್ ಆಗಿ ತಂಡದಲ್ಲೇ ಉಳಿಸಿಕೊಳ್ಳುವುದಾಗಿ ತಿಳಿಸಿದ್ದರು.

ಆದರೀಗ ದಿಢೀರ್ ಮೆಗಾ ಹರಾಜಿನ ಕುರಿತಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಷಭ್ ಪಂತ್ ಕುತೂಹಲ ಮೂಡಿಸಿದ್ದಾರೆ. ಅದರಲ್ಲೂ ಹರಾಜಿನಲ್ಲಿ ಕಾಣಿಸಿಕೊಳ್ಳುವ ಇಂಗಿತದೊಂದಿಗೆ ಪೋಸ್ಟ್ ಮಾಡಿರುವ ಕಾರಣ, ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ, ಅಕ್ಟೋಬರ್ 31ರವರೆಗೆ ಕಾಯಲೇಬೇಕು.

ಅಂದಹಾಗೆ ರಿಷಭ್ ಪಂತ್ 2016 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಇದೀಗ ಡಿಸಿ ತಂಡದ ಕ್ಯಾಪ್ಟನ್ ಆಗಿರುವ ಅವರು ಪಡೆಯುತ್ತಿರುವ ಸಂಭಾವನೆ 16 ಕೋಟಿ ರೂ. ಒಂದು ವೇಳೆ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಅವರ ಖರೀದಿಗಾಗಿ ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸುವುದಂತು ಖಚಿತ ಎನ್ನಬಹುದು.
























