2025 ರ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ನಿಯಮಗಳ ಪ್ರಕಾರ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡರು ಇತರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ. ಆ ಬಳಿಕ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ಸಮತೋಲಿತ ತಂಡವನ್ನು ಕಟ್ಟಬೇಕಾಗುತ್ತದೆ.
ಇದೀಗ ಮೆಗಾ ಹರಾಜಿಗೂ ಮುನ್ನ ಯಾವ್ಯಾವ ತಂಡಗಳು ಯಾವ್ಯಾವ ಆಟಗಾರನನ್ನು ತಂಡದಿಂದ ಕೈಬಿಡಲಿವೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಇದರಲ್ಲಿ ಹಲವು ಸ್ಟಾರ್ ಆಟಗಾರರ ಹೆಸರುಗಳು ಸೇರ್ಪಡೆಗೊಂಡಿವೆ. ಇದರಲ್ಲಿ ಪ್ರಮುಖ ಹೆಸರು ಕನ್ನಡಿಗ ಕೆಎಲ್ ರಾಹುಲ್ ಅವರದ್ದು. ರಾಹುಲ್ರನ್ನು ಲಕ್ನೋ ತನ್ನ ತಂಡದಿಂದ ಬಿಡುಗಡೆ ಮಾಡಲಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು.
ಆದರೀಗ ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಲಕ್ನೋ ಪ್ರಾಂಚೈಸಿ ರಾಹುಲ್ರನ್ನು ತಂಡದಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಕೋಲ್ಕತ್ತಾದಲ್ಲಿರುವ ತಂಡದ ಕಚೇರಿಗೆ ತೆರಳಿದ್ದು ಅಲ್ಲಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾಗಿದ್ದಾರೆ.
ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ರಾಹುಲ್ರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಕೆಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಕೆಎಲ್ ರಾಹುಲ್ ಇದುವರೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮೂರು ಸೀಸನ್‌ಗಳನ್ನು ಆಡಿದ್ದಾರೆ. ಈ ಮೂರು ಸೀಸನ್ಗಳಲ್ಲೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಕಳೆದ ಆವೃತ್ತಿಯ ಪಂದ್ಯದ ವೇಳೆ ರಾಹುಲ್ ಹಾಗೂ ಮಾಲೀಕ ಸಂಜೀವ್ ನಡುವೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತಂಡವನ್ನು ತೊರೆಯುವುದು ಖಚಿತ ಎಂದು ಹೇಳಲಾಗಿತ್ತು.
ಈ ನಡುವೆ ರಾಹುಲ್ ತನ್ನ ಮಾತೃ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹರಾಜಿಗೂ ಮುನ್ನವೇ ಸೇರಿಕೊಳ್ಳಬಹುದು ಎಂಬ ವರದಿಗಳು ಹರಿದಾಡುತ್ತಿದ್ದವು. ಆದಾಗ್ಯೂ, ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ಭೇಟಿಯ ನಂತರ, ರಾಹುಲ್ ಆರ್ಸಿಬಿ ಸೇರುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಕೆಎಲ್ ರಾಹುಲ್ ಇದುವರೆಗೆ ಐಪಿಎಲ್‌ನಲ್ಲಿ ಆಡಿರುವ 132 ಪಂದ್ಯಗಳಲ್ಲಿ 4683 ರನ್ ಗಳಿಸಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದ ರಾಹುಲ್ 136 ಸ್ಟ್ರೈಕ್ ರೇಟ್ನಲ್ಲಿ 4 ಅರ್ಧ ಶತಕ ಸೇರಿದಂತೆ 520 ರನ್ ಗಳಿಸಿದ್ದರು. 2013 ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ರಾಹುಲ್, ಒಟ್ಟು 6 ಸೀಸನ್‌ಗಳಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ.
Published On - 10:50 pm, Mon, 26 August 24