‘ಆ ಆಟಗಾರನಿಗಾಗಿ ಸಿರಾಜ್ರನ್ನು ತಂಡದಿಂದ ಕೈಬಿಡಬೇಕಾಯಿತು’; ಆರ್‌ಸಿಬಿ ನಿರ್ದೇಶಕ
RCB: ಆರ್‌ಸಿಬಿ ತಂಡವು 2025ರ ಐಪಿಎಲ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಬಿಟ್ಟುಬಿಟ್ಟಿದ್ದಕ್ಕೆ ಕಾರಣವನ್ನು ಆರ್‌ಸಿಬಿ ನಿರ್ದೇಶಕರು ವಿವರಿಸಿದ್ದಾರೆ. ಭುವನೇಶ್ವರ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಜೆಟ್ ಮತ್ತು ಆಟಗಾರರ ಆಯ್ಕೆಯನ್ನು ಸಮತೋಲನಗೊಳಿಸುವುದು ಅವಶ್ಯಕವಾಗಿತ್ತು ಎಂದು ಅವರು ಹೇಳಿದ್ದಾರೆ. ಸಿರಾಜ್ ಅವರನ್ನು ಉಳಿಸಿಕೊಂಡಿದ್ದರೆ ಭುವನೇಶ್ವರ್ ಅವರನ್ನು ಪಡೆಯುವುದು ಕಷ್ಟವಾಗುತ್ತಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Updated on:Aug 23, 2025 | 4:30 PM

2025 ರ ಐಪಿಎಲ್‌ನಲ್ಲಿ ಭಾಗಶಃ ಹೊಸ ತಂಡವನ್ನು ಕಟ್ಟಿಕೊಂಡು ಐಪಿಎಲ್ ಅಖಾಡಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 18 ವರ್ಷಗಳ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಆದಾಗ್ಯೂ ಟೂರ್ನಿ ಆರಂಭಕ್ಕೂ ಮುನ್ನ ನಡೆದಿದ್ದ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಕೆಲವು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ವಾಸ್ತವವಾಗಿ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್ ಹಾಗೂ ಯಶ್ ದಯಾಳ್ ಈ ಮೂವರನ್ನು ಮಾತ್ರ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ತೀರ್ಮಾನ ಮಾಡಿತ್ತು. ಉಳಿದಂತೆ ತಂಡದಲ್ಲಿ ಬಹಳ ವರ್ಷಗಳಿಂದ ಆಡಿದ್ದ ವೇಗಿ ಮೊಹಮ್ಮದ್ ಸಿರಾಜ್ರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆದಾಗ್ಯೂ ಹರಾಜಿನ ಸಮಯದಲ್ಲಿ ಸಿರಾಜ್ ಮೇಲೆ ಆರ್‌ಸಿಬಿ ಆರ್ಟಿಎಮ್ ಕಾರ್ಡ್ ಬಳಸಬಹುದು ಎಂಬ ನಿರೀಕ್ಷೆಗಳಿದ್ದವು.

ಆದರೆ ಹರಾಜಿನ ಸಮಯದಲ್ಲಿ ಆರ್‌ಸಿಬಿ, ಸಿರಾಜ್ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಇದು ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಮಾತ್ರವಲ್ಲದೆ ಆರ್‌ಸಿಬಿ ತಂಡದಿಂದ ಹೊರಬಿದ್ದಿದ್ದ ಸಿರಾಜ್ ಗುಜರಾತ್ ತಂಡವನ್ನು ಸೇರಿಕೊಂಡು ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಕೈಬಿಟ್ಟು ಆರ್‌ಸಿಬಿ ದೊಡ್ಡ ತಪ್ಪು ಮಾಡಿತು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು.

ಆದರೀಗ ಐಪಿಎಲ್ ಮುಗಿದು ತಿಂಗಳುಗಳ ಬಳಿಕ ಸಿರಾಜ್ರನ್ನು ತಂಡದಲ್ಲಿ ಉಳಿಸಿಕೊಳ್ಳದಿರಲು ಕಾರಣ ತಿಳಿಸಿರುವ ಆರ್‌ಸಿಬಿ ನಿರ್ಧೇಶಕ ಮೊ ಬೊಬಾಟ್, ‘ವಿಭಿನ್ನ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗುವಂತಹ ಸಮತೋಲಿತ ಮತ್ತು ಬಲವಾದ ಬೌಲಿಂಗ್ ತಂಡವನ್ನು ರಚಿಸುವುದು ಆರ್‌ಸಿಬಿಯ ಗುರಿಯಾಗಿತ್ತು. ಭುವನೇಶ್ವರ ಕುಮಾರ್ ಅವರ ಅನುಭವ ಮತ್ತು ಸ್ವಿಂಗ್ ಬೌಲಿಂಗ್ ಕೌಶಲ್ಯಗಳ ಆರ್‌ಸಿಬಿಯ ತಂತ್ರಕ್ಕೆ ಅನುಗುಣವಾಗಿತ್ತು. ಹೀಗಾಗಿ ಮುಖ್ಯವಾದ ಭುವಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಬಯಕೆ ತಂಡಕ್ಕಿತ್ತು.

ಒಂದು ವೇಳೆ ನಾವು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡದ್ದರೆ ಭುವನೇಶ್ವರ್ ಅವರನ್ನು ಹರಾಜಿನಲ್ಲಿ ಖರೀದಿಸುವುದು ಕಷ್ಟಕರವಾಗುತ್ತಿತ್ತು. ಏಕೆಂದರೆ ಹರಾಜಿನಲ್ಲಿ ಬಜೆಟ್ ಮತ್ತು ಆಟಗಾರರ ಆದ್ಯತೆಯನ್ನು ಸಮತೋಲನಗೊಳಿಸುವುದು ಅಗತ್ಯವಾಗಿತ್ತು ಎಂದು ಬೊಬಾಟ್ ಸ್ಪಷ್ಟಪಡಿಸಿದ್ದಾರೆ.

ಕ್ರಿಕ್‌ಬಜ್ ಜೊತೆ ಮಾತನಾಡಿದ ಬೊಬಾಟ್, ‘ಸಿರಾಜ್ ಬಹುಶಃ ನಾವು ಹೆಚ್ಚು ಯೋಚಿಸಿದ ಆಟಗಾರ. ಏಕೆಂದರೆ ಐಪಿಎಲ್‌ನಲ್ಲಿ ಭಾರತದ ಬೌಲರ್ಗಳು ಅದರಲ್ಲೂ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಬೌಲರ್ಗು ಸಿಗುವುದು ತುಂಬಾ ಕಡಿಮೆ. ಹೀಗಾಗಿ ಸಿರಾಜ್ ಅವರನ್ನು ಉಳಿಸಿಕೊಳ್ಳಬೇಕೆ, ಬಿಡುಗಡೆ ಮಾಡಬೇಕೆ ಅಥವಾ ಆರ್ಟಿಎಮ್ ಕಾರ್ಡ್ ಬಳಸಬೇಕೆ ಎಂಬ ಪ್ರತಿಯೊಂದು ಸಂಭಾವ್ಯ ಪರಿಸ್ಥಿತಿಯನ್ನು ನಾವು ಸಿರಾಜ್ ಅವರೊಂದಿಗೆ ಚರ್ಚಿಸಿದ್ದೇವೆ.

ಹೀಗಾಗಿ ಇದು ನಮ್ಮೊಬ್ಬರ ನೇರ ನಿರ್ಧಾರವಾಗಿರಲಿಲ್ಲ. ಭುವಿಯನ್ನು ಇನ್ನಿಂಗ್ಸ್‌ನ ಎರಡೂ ತುದಿಗಳಿಗೆ ತರಲು ನಾವು ಪ್ರಯತ್ನಿಸುತ್ತಿದ್ದೆವು. ಹೀಗಾಗಿ ಸಿರಾಜ್ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದ್ದರೆ, ಭುವಿ ಅವರನ್ನು ಖರೀದಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ನಾವು ಸಿರಾಜ್ ಅವರನ್ನು ಕೈಬಿಟ್ಟವೇ ಹೊರತು, ಇದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿರಲಿಲ್ಲ ಎಂದಿದ್ದಾರೆ.)
Published On - 4:29 pm, Sat, 23 August 25




