- Kannada News Photo gallery Cricket photos Karun Nair Creates Record With Solid Century For Karnataka
ಕನ್ನಡ ರಾಜ್ಯೋತ್ಸವದಂದೇ ಭರ್ಜರಿ ದಾಖಲೆ ಬರೆದ ಕರುಣ್ ನಾಯರ್
Karun Nair Record: ದೇಶೀಯ ಅಂಗಳದಲ್ಲಿ ಕರುಣ್ ನಾಯರ್ ಅಬ್ಬರ ಶುರುವಾಗಿದೆ. ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 174 ರನ್ ಬಾರಿಸಿ ಮಿಂಚಿದ್ದ ಕರುಣ್ ನಾಯರ್ ಇದೀಗ ಕೇರಳ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 142 ರನ್ ಬಾರಿಸಿದ್ದಾರೆ. ಈ ಶತಕದೊಂದಿಗೆ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on:Nov 02, 2025 | 7:25 AM

ರಣಜಿ ಟೂರ್ನಿಯ 2ನೇ ಪಂದ್ಯದಲ್ಲೂ ಕರುಣ್ ನಾಯರ್ (Karun Nair) ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂದಿದೆ. ಅದು ಕೂಡ ಕನ್ನಡ ರಾಜ್ಯೋತ್ಸವದ ದಿನದಂದು (ನ.1) ಎಂಬುದು ವಿಶೇಷ. ಈ ಶತಕದೊಂದಿಗೆ ಕರುಣ್ ಕರ್ನಾಟಕ ಪರ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ತಿರುವನಂತಪುರದ ಕೆಸಿಎ ಮೈದಾನದಲ್ಲಿ ನಡೆಯುತ್ತಿರುವ ಕೇರಳ ವಿರುದ್ಧದ ಟಾಸ್ ಗೆದ್ದ ಕರ್ನಾಟಕ ತಂಡದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ತಂಡಕ್ಕೆ ಆಸರೆಯಾಗಿ ನಿಂತರು.

ಆರಂಭದಿಂದಲೇ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ ಒಂದೊಂದೇ ರನ್ ಕಲೆಹಾಕುತ್ತಾ ಸಾಗಿದರು. ಅಲ್ಲದೆ ಕೃಷ್ಣನ್ ಶ್ರೀಜಿತ್ (65) ಜೊತೆಗೂಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದರ ನಡುವೆ 251 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 142 ರನ್ ಬಾರಿಸಿದರು.

ಈ ಭರ್ಜರಿ ಶತಕದೊಂದಿಗೆ ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್, ಗುಂಡಪ್ಪ ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯದ್ ಕಿರ್ಮಾನಿ ಮತ್ತು ರಾಬಿನ್ ಉತ್ತಪ್ಪ ಮಾತ್ರ ಈ ಸಾಧನೆ ಮಾಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 198 ಪಂದ್ಯಗಳನ್ನಾಡಿರುವ ಕರುಣ್ ನಾಯರ್ 26 ಶತಕ ಹಾಗೂ 38 ಅರ್ಧಶತಕಗಳೊಂದಿಗೆ ಒಟ್ಟು 9072 ರನ್ ಕಲೆಹಾಕಿದ್ದಾರೆ. ಈ ಮೂಲಕ ಕರ್ನಾಟಕ ಪರ 9 ಸಾವಿರ ಪೂರೈಸಿರುವ ಏಕೈಕ ಸಕ್ರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
Published On - 7:18 am, Sun, 2 November 25




