- Kannada News Photo gallery Cricket photos Ranji Trophy: Karun Nair Hits Crucial Century for Karnataka After India Team Exit
Ranji Trophy: ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಅಬ್ಬರಿಸಿದ ಕರುಣ್ ನಾಯರ್
Karun Nair comeback century: ರಣಜಿ ಟ್ರೋಫಿ 2025-26 ರಲ್ಲಿ ಕರುಣ್ ನಾಯರ್ ಗೋವಾ ವಿರುದ್ಧ ಕರ್ನಾಟಕ ಪರ 174 ರನ್ ಗಳಿಸಿ ಅಜೇಯರಾಗಿ ಉಳಿದರು. ಟೀಂ ಇಂಡಿಯಾದಿಂದ ಹೊರಬಿದ್ದ ನಂತರ ಅವರ ಈ ಶತಕ ಅತ್ಯಂತ ಮಹತ್ವದ್ದಾಗಿದೆ. ಆರಂಭಿಕ ವಿಕೆಟ್ ಕಳೆದುಕೊಂಡ ಕರ್ನಾಟಕ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಕರುಣ್, ತಂಡಕ್ಕೆ ಬೃಹತ್ ಮೊತ್ತ ಗಳಿಸಲು ನೆರವಾದರು. ಇದು ಅವರ ಅದ್ಭುತ ಕಮ್‌ಬ್ಯಾಕ್ ಸೂಚಿಸುತ್ತದೆ.
Updated on: Oct 26, 2025 | 4:10 PM

2025-26 ರ ರಣಜಿ ಟ್ರೋಫಿಯ ಎರಡನೇ ಸುತ್ತು ಅಕ್ಟೋಬರ್ 25 ರಿಂದ ಆರಂಭವಾಗಿದ್ದು, ಕರ್ನಾಟಕ ತಂಡ ಗೋವಾ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ33 ವರ್ಷದ ಕರುಣ್ ನಾಯರ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಂಡದ ಪರ ಅತ್ಯಧಿಕ ರನ್ ಬಾರಿಸಿದ ಕರುಣ್ 174 ರನ್ ಬಾರಿಸಿ ಅಜೇಯರಾಗಿ ಉಳಿದರು.

ವಾಸ್ತವವಾಗಿ ಕೆಲವು ತಿಂಗಳ ಹಿಂದೆ ಕರುಣ್ ನಾಯರ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ ಆ ಸರಣಿಯಲ್ಲಿ ಕರುಣ್ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಹೀಗಾಗಿ ಕೇವಲ ಒಂದು ಸರಣಿಯ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಆದಾಗ್ಯೂ ಛಲ ಬಿಡದ ಕರುಣ್ ಶತಕದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಕರುಣ್ ಕರ್ನಾಟಕ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ನಿರ್ಣಾಯಕ ಹಂತದಲ್ಲಿ ಶತಕ ಬಾರಿಸಿದರು. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 65 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ಕರುಣ್ ನಾಯರ್ ಏಕಾಂಗಿ ಹೋರಾಟ ನಡೆಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು.

ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ಮೊದಲ ದಿನದಾಟದಲ್ಲಿ 138 ಎಸೆತಗಳಲ್ಲಿ 86 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನವೂ ತಮ್ಮ ಇನ್ನಿಂಗ್ಸ್ ಮುಂದುವರಿಸಿದ ಅವರು ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 163 ಎಸೆತಗಳಲ್ಲಿ ಶತಕ ಬಾರಿಸಿದರು.

ಅಲ್ಲಿಗೆ ನಿಲ್ಲದ ಕರುಣ್ ದ್ವಿಶತಕದತ್ತ ದಾಪುಗಾಲಿಟ್ಟಿದ್ದರು. ಅದರೆ ಅವರಿಗೆ ಉಳಿದವರಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಕರುಣ್ 267 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 174 ರನ್ ಬಾರಿಸಿದರು. ಕರುಣ್ ಅವರ ಈ ಇನ್ನಿಂಗ್ಸ್ನಿಂದಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 371 ರನ್ ಕಲೆಹಾಕಿತು.

ಇತ್ತೀಚೆಗೆ ಟೀಂ ಇಂಡಿಯಾದಿಂದ ಹೊರಬಿದ್ದ ಕಾರಣ, ಈ ಇನ್ನಿಂಗ್ಸ್ ಕರುಣ್ ನಾಯರ್ ಅವರಿಗೆ ಹಲವು ವಿಧಗಳಲ್ಲಿ ವಿಶೇಷವಾಗಿದೆ. ಇದಕ್ಕೂ ಮುನ್ನ ನಡೆದ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ 73 ರನ್‌ಗಳ ಇನ್ನಿಂಗ್ಸ್ ಕೂಡ ಆಡಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಗಾಗಿ ಕರುಣ್ ನಾಯರ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಯಿತು. ಆದಾಗ್ಯೂ, ಈ ಪ್ರವಾಸದಲ್ಲಿ ಅವರು ಒಂದೇ ಒಂದು ಮಹತ್ವದ ಇನ್ನಿಂಗ್ಸ್ ಆಡಲಿಲ್ಲ. ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಒಂದರಲ್ಲಿ ಮಾತ್ರ 50 ರನ್‌ಗಳ ಗಡಿ ದಾಟಿದರು, ಇದರಿಂದಾಗಿ ಇತ್ತೀಚಿನ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಅವರನ್ನು ತಂಡದಿಂದ ಹೊರಗಿಡಲಾಯಿತು.




