ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ: ದಾಖಲೆಯೊಂದಿಗೆ ರಾಜಧಾನಿ ಎಕ್ಸ್ಪ್ರೆಸ್ ಆಗಮನ
Mayank Yadav: ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ರಾಜಧಾನಿ ಎಕ್ಸ್ಪ್ರೆಸ್ ಎಂಬ ಬಿರುದು ಪಡೆದಿರುವ ಮಯಾಂಕ್ ಯಾದವ್ ಇದೀಗ ಟೀಮ್ ಇಂಡಿಯಾ ಪರ ವೇಗದ ಅಸ್ತ್ರದ ಪ್ರಯೋಗಕ್ಕೆ ಇಳಿದಿದ್ದಾರೆ. ಅಲ್ಲದೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದ ಮೊದಲ ಓವರ್ ಅನ್ನು ಮೇಡನ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
Updated on: Oct 07, 2024 | 7:53 AM

ಗ್ವಾಲಿಯರ್ನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಯುವ ವೇಗಿ ಮಯಾಂಕ್ ಯಾದವ್ (Mayank Yadav) ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಅದು ಸಹ ದಾಖಲೆಯೊಂದಿಗೆ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 14 ರನ್ಗಳಿಗೆ ಬಾಂಗ್ಲಾದೇಶ್ ತಂಡವು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇನ್ನು ಪವರ್ಪ್ಲೇನಲ್ಲಿ ಉತ್ತಮ ಸ್ಕೋರ್ಗಳಿಸುವ ಇರಾದೆಯಲ್ಲಿದ್ದ ಬಾಂಗ್ಲಾ ತಂಡಕ್ಕೆ ಸೂರ್ಯಕುಮಾರ್ ಕೌಂಟರ್ ಅಟ್ಯಾಕ್ ನೀಡಿದ್ದರು. ಅದು ಸಹ ಯುವ ವೇಗಿಯನ್ನು 6ನೇ ಓವರ್ನಲ್ಲಿ ಕರೆ ತರುವ ಮೂಲಕ. ಈ ಓವರ್ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಯಾಂಕ್ ಮಾದವ್ ನೀಡಿದ್ದು 0 ರನ್.

ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ಓವರ್ ಅನ್ನು ಮೇಡನ್ ಮಾಡುವ ಮೂಲಕ ಶುಭಾರಂಭ ಮಾಡಿದ ಮಯಾಂಕ್ ಯಾದವ್ 2ನೇ ಓವರ್ನಲ್ಲಿ ನೀಡಿದ್ದು ಕೇವಲ 3 ರನ್ ಮಾತ್ರ. ಅಲ್ಲದೆ ಮಹಮ್ಮದುಲ್ಲಾ (1) ರನ್ನು ಔಟ್ ಮಾಡಿ ಚೊಚ್ಚಲ ವಿಕೆಟ್ನ್ನು ಸಹ ತಮ್ಮದಾಗಿಸಿಕೊಂಡರು.

ಅಲ್ಲದೆ ಈ ಪಂದ್ಯದಲ್ಲಿ 147 kph ವೇಗದದಲ್ಲಿ ಚೆಂಡೆಸೆದ ಮಯಾಂಕ್ ಯಾದವ್ 4 ಓವರ್ಗಳಲ್ಲಿ ಕೇವಲ 21 ರನ್ ನೀಡಿ 1 ವಿಕೆಟ್ನೊಂದಿಗೆ ತಮ್ಮ ಚೊಚ್ಚಲ ಪಂದ್ಯವನ್ನು ಕೊನೆಗೊಳಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲೇ ಯುವ ವೇಗಿ ತನ್ನ ವೇಗದ ಅಸ್ತ್ರದೊಂದಿಗೆ ಗಮನ ಸೆಳೆದಿದ್ದಾರೆ.

ಅದರಲ್ಲೂ ಟಿ20 ಕ್ರಿಕೆಟ್ನ ಚೊಚ್ಚಲ ಪಂದ್ಯದಲ್ಲೇ ಮೇಡನ್ ಓವರ್ ಎಸೆದ ಭಾರತದ ಮೂರನೇ ವೇಗಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಅಜಿತ್ ಅಗರ್ಕರ್ (2006) ಹಾಗೂ ಅರ್ಷದೀಪ್ ಸಿಂಗ್ (2022) ಮಾತ್ರ ನಿರ್ಮಿಸಿದ್ದರು. ಇದೀಗ ಮೊದಲ ಟಿ20 ಪಂದ್ಯದ ಮೊದಲ ಓವರ್ನಲ್ಲಿ ಯಾವುದೇ ರನ್ ನೀಡದ ಟೀಮ್ ಇಂಡಿಯಾದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಮಯಾಂಕ್ ಪಾತ್ರರಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 19.5 ಓವರ್ಗಳಲ್ಲಿ 127 ರನ್ಗಳಿಸಿ ಆಲೌಟ್ ಆಯಿತು. 128 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 11.5 ಓವರ್ಗಳಲ್ಲಿ 132 ರನ್ ಚಚ್ಚಿ, 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
























