- Kannada News Photo gallery Cricket photos MI vs GT: Twitterati Calls Rashid Khan Their Man of the Match
IPL 2023: ರಶೀದ್ ಖಾನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡದಿರುವ ಬಗ್ಗೆ ಆಕ್ರೋಶ
IPL 2023 Kannada: 360 ಡಿಗ್ರಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 6 ಭರ್ಜರಿ ಸಿಕ್ಸ್ 11 ಫೋರ್ ಸಿಡಿಸಿದರು. ಪರಿಣಾಮ ಕೇವಲ 49 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು.
Updated on: May 13, 2023 | 3:28 PM

IPL 2023: ಐಪಿಎಲ್ನ 57ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಇಶಾನ್ ಕಿಶನ್ (31) ಹಾಗೂ ರೋಹಿತ್ ಶರ್ಮಾ (29) ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು.

ಮುಂಬೈ ಇಂಡಿಯನ್ಸ್ ಮೊತ್ತ 61 ರನ್ ಆಗಿದ್ದ ವೇಳೆ ರೋಹಿತ್ ಶರ್ಮಾ ಔಟಾದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ತನ್ನ ಪ್ರತಾಪ ತೋರಿಸಲಾರಂಭಿಸಿದ. ಪರಿಣಾಮ ಗುಜರಾತ್ ಟೈಟಾನ್ಸ್ ಬೌಲರ್ಗಳು ಲಯ ತಪ್ಪಿದರು.

ಇತ್ತ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 6 ಭರ್ಜರಿ ಸಿಕ್ಸ್ 11 ಫೋರ್ ಸಿಡಿಸಿದರು. ಪರಿಣಾಮ ಕೇವಲ 49 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಅಲ್ಲದೆ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 218 ಕ್ಕೆ ತಂದು ನಲ್ಲಿಸಿದರು.

219 ರನ್ಗಳ ಕಠಿಣ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡವು 26 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಡೇವಿಡ್ ಮಿಲ್ಲರ್ ಅವರ 41 ರನ್ಗಳ ನೆರವಿನಿಂದ ಗುಜರಾತ್ ತಂಡವು 12 ಓವರ್ಗಳಲ್ಲಿ 100 ರನ್ ಕಲೆಹಾಕಿತು. ಆದರೆ ಅದಾಗಲೇ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.

ಇತ್ತ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಶೀದ್ ಖಾನ್ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್ಗಳ ಬೆಂಡೆತ್ತುವ ಮೂಲಕ ಒಂದು ಕ್ಷಣ ಗೆಲುವಿನ ಆಸೆ ಚಿಗುರಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಸೋಲಿನ ಭೀತಿ ಹುಟ್ಟಿಸುವಲ್ಲಿ ಯಶಸ್ವಿಯಾದರು.

ಅದರಲ್ಲೂ ಡೆತ್ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಶೀದ್ ಖಾನ್ 32 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಅಜೇಯ 79 ರನ್ ಬಾರಿಸಿದರು. ರಶೀದ್ ಖಾನ್ ಅವರ ಈ ಏಕಾಂಗಿ ಹೋರಾಟದ ಹೊರತಾಗಿಯೂ ಗುಜರಾತ್ ಟೈಟಾನ್ಸ್ ತಂಡವು 27 ರನ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಇನ್ನು ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇದರ ಬೆನ್ನಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ರಶೀದ್ ಖಾನ್ ಅವರಿಗೆ ನೀಡಬೇಕಿತ್ತು ಎಂಬ ವಾದವನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಮುಂದಿಟ್ಟಿದ್ದಾರೆ.

ಪಂದ್ಯ ಗೆದ್ದ ತಂಡದ ಆಟಗಾರನಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕೆಂಬ ಯಾವುದೇ ನಿಯಮವಿಲ್ಲ. ಈ ಹಿಂದೆ ಕೂಡ ವಿರೋಚಿತ ಪ್ರದರ್ಶನ ನೀಡಿದ ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಿದರ್ಶನಗಳಿವೆ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಸೂರ್ಯಕುಮಾರ್ಗಿಂತ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರು.

ಏಕೆಂದರೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳು ಅಬ್ಬರಿಸಿದರೂ ಬೌಲಿಂಗ್ನಲ್ಲಿ ರಶೀದ್ ಖಾನ್ ಮಿಂಚಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ರಶೀದ್ ಖಾನ್ 4 ವಿಕೆಟ್ ಕಬಳಿಸಿ ಕೇವಲ 30 ರನ್ ಮಾತ್ರ ನೀಡಿದ್ದರು. ಅಲ್ಲದೆ ಬ್ಯಾಟಿಂಗ್ ಮೂಲಕ ಭರ್ಜರಿ ಪ್ರದರ್ಶನ ನೀಡಿ ಅಜೇಯ 79 ರನ್ ಬಾರಿಸಿದ್ದರು.

ಈ ಎರಡೂ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಸೂರ್ಯಕುಮಾರ್ ಯಾದವ್ಗಿಂತ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ರಶೀದ್ ಖಾನ್ ಅರ್ಹರಾಗಿದ್ದರು. ಇದಾಗ್ಯೂ ಕೇವಲ ಶತಕ ಬಾರಿಸಿದ್ದಾರೆ ಎಂಬ ಮಾತ್ರಕ್ಕೆ ಏಕಾಂಗಿಯಾಗಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಆಟಗಾರನನ್ನು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಆಯ್ಕೆ ಮಾಡದಿರುವ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



















