- Kannada News Photo gallery Cricket photos Nathan Lyon's incredible record vs India, grabs 100 wickets
Nathan Lyon: ಟೀಮ್ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆದ ನಾಥನ್ ಲಿಯಾನ್
Nathan Lyon Records: ಸ್ಪಿನ್ ಮೋಡಿ ಮಾಡಿದ ನಾಥನ್ ಲಿಯಾನ್ ಕೆಎಲ್ ರಾಹುಲ್ (17) ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
Updated on: Feb 18, 2023 | 3:59 PM

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯದ ಮೂಲಕ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಇದುವರೆಗೆ ಆಸ್ಟ್ರೇಲಿಯಾದ ಯಾವೊಬ್ಬ ಬೌಲರ್ ನಿರ್ಮಿಸದ ದಾಖಲೆ ಎಂಬುದೇ ವಿಶೇಷ.

ಬಾರ್ಡರ್-ಗವಾಸ್ಕರ್ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮೊಹಮ್ಮದ್ ಶಮಿ (4 ವಿಕೆಟ್) ಅವರ ಕರಾರುವಾಕ್ ದಾಳಿಗೆ ತತ್ತರಿಸಿದ ಆಸೀಸ್ ಪಡೆ ಕೇವಲ 263 ರನ್ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಅದಕ್ಕೆ ಸ್ಪಿನ್ ಮೋಡಿಗಾರ ನಾಥನ್ ಲಿಯಾನ್ ಅವಕಾಶವನ್ನೇ ಕಲ್ಪಿಸಿರಲಿಲ್ಲ.

2ನೇ ದಿನದಾಟದಲ್ಲಿ ಸ್ಪಿನ್ ಮೋಡಿ ಮಾಡಿದ ನಾಥನ್ ಲಿಯಾನ್ ಕೆಎಲ್ ರಾಹುಲ್ (17) ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ (32) ರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಆ ಬಳಿಕ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಚೇತೇಶ್ವರ ಪೂಜಾರರನ್ನು ಶೂನ್ಯಕ್ಕೆ ಔಟ್ ಮಾಡಿ ಸಂಭ್ರಮಿಸಿದರು. ಇನ್ನು ನಾಥನ್ ಲಿಯಾನ್ ಅವರ ನಾಲ್ಕನೇ ಬಲಿ ಶ್ರೇಯಸ್ ಅಯ್ಯರ್ (4). ಇದಾದ ಬಳಿಕ ಕೆಎಸ್ ಭರತ್ (6) ಅವರನ್ನು ಔಟ್ ಮಾಡುವ ಮೂಲಕ ನಾಥನ್ ಲಿಯಾನ್ 5 ವಿಕೆಟ್ಗಳ ಸಾಧನೆ ಮಾಡಿದರು.

ವಿಶೇಷ ಎಂದರೆ ಈ 5 ವಿಕೆಟ್ಗಳೊಂದಿಗೆ ನಾಥನ್ ಲಿಯಾನ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 100 ವಿಕೆಟ್ ಕಬಳಿಸಿದ ಮೊದಲ ಆಸ್ಟ್ರೇಲಿಯಾ ಬೌಲರ್ ಎನಿಸಿಕೊಂಡರು. ಅಲ್ಲದೆ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ನೂರು ವಿಕೆಟ್ ಉರುಳಿಸಿದ ವಿಶ್ವದ ಮೂರನೇ ಬೌಲರ್ ಎಂಬ ದಾಖಲೆಯನ್ನೂ ಕೂಡ ಬರೆದರು.

ಇದಕ್ಕೂ ಮುನ್ನ ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸನ್ ಹಾಗೂ ಮುತ್ತಯ್ಯ ಮುರಳೀಧರನ್ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 100 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ಅನಿಲ್ ಕುಂಬ್ಳೆ ಹಾಗೂ ಅಶ್ವಿನ್ ನಿರ್ಮಿಸಿದ್ದರು.

ಅನಿಲ್ ಕುಂಬ್ಳೆ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 38 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅನಿಲ್ ಕುಂಬ್ಳೆ ಒಟ್ಟು 111 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್: ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ದೆಹಲಿ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದರು. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 37 ಇನಿಂಗ್ಸ್ನಲ್ಲಿ ಚೆಂಡೆಸೆದಿರುವ ಅಶ್ವಿನ್ ಒಟ್ಟು 100* ವಿಕೆಟ್ ಕಬಳಿಸಿದ್ದಾರೆ.

ನಾಥನ್ ಲಿಯಾನ್: ಟೀಮ್ ಇಂಡಿಯಾ ವಿರುದ್ಧ ದೆಹಲಿ ಟೆಸ್ಟ್ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ 3ನೇ ಬೌಲರ್ ಎಂಬ ಹಿರಿಮೆಗೆ ಲಿಯಾನ್ ಪಾತ್ರರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಇದುವರೆಗೆ 43 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ನಾಥನ್ ಲಿಯಾನ್ ಒಟ್ಟು 100* ಪಡೆದು ವಿಕೆಟ್ ಬೇಟೆ ಮುಂದುವರೆಸಿದ್ದಾರೆ.




