- Kannada News Photo gallery Cricket photos on this day : Chris Gayle broke his own record by hitting 18 Sixes
Chris Gayle: ಬರೋಬ್ಬರಿ 18 ಸಿಕ್ಸ್: ವಿಶ್ವ ದಾಖಲೆ ಬರೆದಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್
Chris Gayle World Record: ಇಂಗ್ಲೆಂಡ್‌ನ ಗ್ರಹಾಂ ನೇಪಿಯರ್, ಶ್ರೀಲಂಕಾದ ದಸುನ್ ಶಂಕಾ ಮತ್ತು ಅಫ್ಘಾನಿಸ್ತಾನದ ಹಝತುಲ್ಲಾ ಝಜೈ ಅವರು ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
Updated on: Dec 12, 2021 | 2:50 PM

ಕ್ರಿಕೆಟ್ ಅಂಗಳದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೊಂದು ಸಿಕ್ಸರ್ಗಳ ಸುರಿಮಳೆ ದಾಖಲೆ. ಹೌದು, ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಗೇಲ್ ನಿರ್ಮಿಸಿರುವುದು ತಮ್ಮದೇ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

2013 ರ ಐಪಿಎಲ್ ಸೀಸನ್ನಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಈ ವೇಳೆ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್ ವೇಳೆ ಗೇಲ್ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 17 ಸಿಕ್ಸರ್ಗಳು. ಇದು ಬ್ಯಾಟರ್ರೊಬ್ಬರು ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ದಾಖಲೆಯನ್ನು ಬರೆಯಿತು.

ಆದರೆ ಈ 17 ಸಿಕ್ಸ್ಗಳ ದಾಖಲೆಯನ್ನು ಆ ಬಳಿಕ ಕ್ರಿಸ್ ಗೇಲ್ ಅವರೇ ಮುರಿದಿರುವುದು ವಿಶೇಷ. ಡಿಸೆಂಬರ್ 12, 2017 ರಲ್ಲಿ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ರಂಗ್ಪುರ್ ರೈಡರ್ಸ್ ಪರ ಆಡಿದ್ದರು. ಈ ವೇಳೆ ಡೈನಾಮೈಟ್ಸ್ ವಿರುದ್ದದ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 146 ರನ್ ಬಾರಿಸಿದ್ದರು. ಈ ಇನಿಂಗ್ಸ್ನಲ್ಲಿ ಕ್ರಿಸ್ ಗೇಲ್ ಸಿಡಿಸಿರುವುದು ಬರೋಬ್ಬರಿ 18 ಸಿಕ್ಸ್ಗಳು.

ಇದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ 17 ಸಿಕ್ಸ್ಗಳ ದಾಖಲೆಯನ್ನು ಅಳಿಸಿ ಹಾಕಿ ಕ್ರಿಸ್ ಗೇಲ್ ಹೊಸ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ವಿಶ್ವದಾಖಲೆಗೆ ಬರೋಬ್ಬರಿ 4 ವರ್ಷಗಳಾಗಿವೆ. ಇದಾಗ್ಯೂ ವರ್ಲ್ಡ್ ರೆಕಾರ್ಡ್ ಅನ್ನು ಇದುವರೆಗೆ ಯಾವುದೇ ಬ್ಯಾಟರ್ಗೆ ಅಳಿಸಿ ಹಾಕಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಇನ್ನು ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಭಾರತದ ಆಟಗಾರ ಪುನೀತ್ ಬಿಶ್ತ್ ಪಡೆದುಕೊಂಡಿದ್ದಾರೆ. ಮೇಘಾಲಯ ಪರ ಆಡುತ್ತಿರುವ ಬಿಶ್ತ್ ಈ ವರ್ಷದ ಜನವರಿಯಲ್ಲಿ ಮಿಜೋರಾಂ ವಿರುದ್ಧ 51 ಎಸೆತಗಳಲ್ಲಿ 146 ರನ್ ಬಾರಿಸಿದ್ದರು. ಈ ಇನಿಂಗ್ಸ್ನಲ್ಲಿ ಬರೋಬ್ಬರಿ 17 ಸಿಕ್ಸ್ ಸಿಡಿಸಿ ಈ ಸಾಧನೆ ಮಾಡಿದ್ದರು.

ಹಾಗೆಯೇ ಇಂಗ್ಲೆಂಡ್‌ನ ಗ್ರಹಾಂ ನೇಪಿಯರ್, ಶ್ರೀಲಂಕಾದ ದಸುನ್ ಶಂಕಾ ಮತ್ತು ಅಫ್ಘಾನಿಸ್ತಾನದ ಹಝತುಲ್ಲಾ ಝಜೈ ಅವರು ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಮೂವರು ಟಿ20ಯ ಇನ್ನಿಂಗ್ಸ್‌ನಲ್ಲಿ ತಲಾ 16 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.
