R Ashwin: ಬೌಲ್ಡ್ ಮಾಡಿಯೇ ದಾಖಲೆ ನಿರ್ಮಿಸಿದ ಅಶ್ವಿನ್
IND vs WI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಮುಂದೆ ಮುಂಡಿಯೂರಿತು.
India vs West Indies: ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಅಶ್ವಿನ್ ಮೊದಲ ಆಘಾತ ನೀಡಿದ್ದರು.
ವೆಸ್ಟ್ ಇಂಡೀಸ್ ತಂಡವು 31 ರನ್ಗಳಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ತೇಜ್ನರೈನ್ ಚಂದ್ರಪಾಲ್ ಔಟಾಗಿದ್ದರು. ಈ ಮೂಲಕ ಶಿವನರೈನ್ ಚಂದ್ರಪಾಲ್ (ತಂದೆ) ಹಾಗೂ ತೇಜ್ನರೈನ್ ಚಂದ್ರಪಾಲ್ರನ್ನು (ಮಗ) ಔಟ್ ಮಾಡಿದ ವಿಶೇಷ ದಾಖಲೆಯೊಂದನ್ನು ಅಶ್ವಿನ್ ಬರೆದರು.
ಆ ಬಳಿಕ ಕ್ರೈಗ್ ಬ್ರಾಥ್ವೇಟ್ ಹಾಗೂ ಅಲಿಕ್ ಅಥನಾಝ್ ವಿಕೆಟ್ ಪಡೆದ ಅಶ್ವಿನ್ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ಗಳನ್ನು ಪೂರೈಸಿದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು.
ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿ ಇಲ್ಲಿದೆ
ಇದರ ಬೆನ್ನಲ್ಲೇ ಅಲ್ಝಾರಿ ಜೋಸೆಫ್ ಹಾಗೂ ವಾರಿಕನ್ರನ್ನು ಔಟ್ ಮಾಡಿ 5 ವಿಕೆಟ್ಗಳ ಸಾಧನೆ ಮಾಡಿದರು. ವಿಶೇಷ ಎಂದರೆ ಈ 5 ವಿಕೆಟ್ಗಳೊಂದಿಗೆ ಪ್ರಸ್ತುತ ಟೆಸ್ಟ್ ಆಡುತ್ತಿರುವ ಆಟಗಾರರಲ್ಲಿ ಅತೀ ಹೆಚ್ಚು 5 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ 32 ಬಾರಿ 5 ವಿಕೆಟ್ ಕಬಳಿಸಿದ್ದ ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 33ನೇ ಬಾರಿ ಈ ಸಾಧನೆ ಮಾಡಿರುವ ಅಶ್ವಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನವವನ್ನು ಅಲಂಕರಿಸಿದ್ದಾರೆ.
ಬೌಲ್ಡ್ ಮಾಡಿಯೇ ದಾಖಲೆ ಬರೆದ ಅಶ್ವಿನ್:
ಈ ಪಂದ್ಯದಲ್ಲಿ ತೇಜ್ನರೈನ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಅತ್ಯಧಿಕ ಬೌಲ್ಡ್ ಮಾಡಿದ ಬೌಲರ್ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 94 ಬಾರಿ ಬ್ಯಾಟ್ಸ್ಮನ್ ಅನ್ನು ಬೌಲ್ಡ್ ಮಾಡಿದ್ದರು. ಇದೀಗ ರವಿಚಂದ್ರನ್ ಅಶ್ವಿನ್ 95ನೇ ಬಾರಿಗೆ ಬೌಲ್ಡ್ ಮಾಡಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಬೌಲ್ಡ್ ಮಾಡಿ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಆಲೌಟ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಮುಂದೆ ಮುಂಡಿಯೂರಿತು. ಗೂಗ್ಲಿಗಳ ಮೂಲಕ ವಿಂಡೀಸ್ ಬ್ಯಾಟರ್ಗಳನ್ನು ಕಂಗೆಡಿಸಿದ ಅಶ್ವಿನ್ 60 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಮತ್ತೊಂದೆಡೆ ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 150 ರನ್ಗಳಿಗೆ ಸರ್ವಪತನ ಕಂಡಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ (40) ಹಾಗೂ ರೋಹಿತ್ ಶರ್ಮಾ (30) ಕ್ರೀಸ್ನಲ್ಲಿದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.