Jacob Bethell: ಆರ್ಸಿಬಿ ಸೇರಿದ ಕೂಡಲೇ ಇಂಗ್ಲೆಂಡ್ ಆಟಗಾರನಿಗೆ ಖುಲಾಯಿಸಿದ ಅದೃಷ್ಟ
Jacob Bethell: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದ್ದು, ಈ ಒಪ್ಪಂದದಲ್ಲಿ ಇತ್ತೀಚಿಗಷ್ಟೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದ ಯುವ ಆಟಗಾರ ಜೇಕಬ್ ಬೆಥೆಲ್ ಅವರ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಆಟಗಾರ 2 ವರ್ಷಗಳ ಕೇಂದ್ರ ಒಪ್ಪಂದವನ್ನು ಪಡೆದಿದ್ದಾರೆ.
Updated on: Dec 04, 2024 | 5:49 PM

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ಅನೇಕ ಆಶ್ಚರ್ಯಕರ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇಡೀ ಹರಾಜಿನಲ್ಲಿ ಯುವ ಆಟಗಾರರನ್ನು ಖರೀದಿಸುವುದರ ಮೇಲೆಯೇ ಹೆಚ್ಚಿನ ಗಮನಹರಿಸಿತ್ತು. ಆ ಪ್ರಕಾರ, ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದರು.

21 ವರ್ಷದ ಜೇಕಬ್ ಬೆಥೆಲ್ ಐಪಿಎಲ್ 2025 ರ ಹರಾಜಿಗೆ 1.25 ಕೋಟಿ ರೂ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅವರನ್ನು ಆರ್ಸಿಬಿ 2.60 ಕೋಟಿಗೆ ಖರೀದಿಸಿತು. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಜೇಕಬ್ ಬೆಥೆಲ್, ಆರ್ಸಿಬಿ ಫ್ರಾಂಚೈಸಿಯನ್ನು ಸೇರಿದ ಬಳಿಕ ಸಿಹಿ ಸುದ್ದಿಯೊಂದನ್ನು ಪಡೆದಿದ್ದಾರೆ.

ವಾಸ್ತವವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ದೇಶದ ಆಟಗಾರರಿಗೆ ಹೊಸ ಒಪ್ಪಂದಗಳನ್ನು ಪ್ರಕಟಿಸಿದೆ. ಆ ಪ್ರಕಾರ, ಕೆಲವು ಆಟಗಾರರಿಗೆ 1 ವರ್ಷದ ಕೇಂದ್ರ ಗುತ್ತಿಗೆ ನೀಡಲಾಗಿದೆ. ಅದೇ ಸಮಯದಲ್ಲಿ, ಕೆಲವು ಆಟಗಾರರು 2 ವರ್ಷಗಳ ಕೇಂದ್ರ ಒಪ್ಪಂದವನ್ನು ಪಡೆದಿದ್ದಾರೆ. ಈ 2 ವರ್ಷಗಳ ಕೇಂದ್ರ ಒಪ್ಪಂದವನ್ನು ಪಡೆದ ಆಟಗಾರರಲ್ಲಿ ಜೇಕಬ್ ಬೆಥೆಲ್ ಅವರ ಹೆಸರನ್ನು ಸೇರಿಸಲಾಗಿದೆ.

ಜೇಕಬ್ ಬೆಥೆಲ್ ಅವರನ್ನು ಕಳೆದ ತಿಂಗಳಷ್ಟೇ ಅಭಿವೃದ್ಧಿ ಒಪ್ಪಂದದಲ್ಲಿ ಸೇರಿಸಲಾಗಿತ್ತು. ಆದರೆ ಈಗ ಅವರ ಒಪ್ಪಂದವನ್ನು ಕೇಂದ್ರ ಒಪ್ಪಂದಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಒಪ್ಪಂದ 2026 ರ ಸೆಪ್ಟೆಂಬರ್ವರೆಗೆ ಇರುತ್ತದೆ.

ಜೇಕಬ್ ಬೆಥೆಲ್ ಇದೇ ವರ್ಷ ಏಕದಿನ ಮತ್ತು ಟಿ20 ಮಾದರಿಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗಷ್ಟೇ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ನಾಲ್ಕನೇ ಇನ್ನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ ಅರ್ಧಶತಕವನ್ನೂ ಸಿಡಿಸಿದ್ದರು.

ಇಂಗ್ಲೆಂಡ್ ಪರ ಇದುವರೆಗೆ 8 ಏಕದಿನ ಮತ್ತು 7 ಟಿ20 ಪಂದ್ಯಗಳನ್ನು ಆಡಿರುವ ಜೇಕಬ್ ಬೆಥೆಲ್, 27.83 ಸರಾಸರಿಯಲ್ಲಿ 167 ರನ್ ಗಳಿಸಿದ್ದರೆ, ಟಿ20 ಯಲ್ಲಿ 57.66 ಸರಾಸರಿಯಲ್ಲಿ 173 ರನ್ ಗಳಿಸಿದ್ದಾರೆ.



















