- Kannada News Photo gallery Cricket photos IPL 2026: Royal Challengers Bangalore Set for New Owners? Sale Details
ಬರೋಬ್ಬರಿ 17,587 ಕೋಟಿ ರೂ..! ಆರ್ಸಿಬಿ ಖರೀದಿಗೆ ಆರು ಕಂಪನಿಗಳ ನಡುವೆ ಪೈಪೋಟಿ
RCB sale: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 2026ರ ಟೂರ್ನಿಗೂ ಮುನ್ನ ಮಾರಾಟ ಮಾಡುವ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಡಿಯಾಜಿಯೊ ಕಂಪನಿ ಮಾಲೀಕತ್ವದಲ್ಲಿರುವ ಆರ್‌ಸಿಬಿಗೆ ಅದಾನಿ, ಜೆಎಸ್‌ಡಬ್ಲ್ಯೂ ಗ್ರೂಪ್, ಆದರ್ ಪೂನವಾಲ್ಲಾ ಸೇರಿದಂತೆ ಆರು ಕಂಪನಿಗಳು 17,587 ಕೋಟಿ ರೂ. ಬಿಡ್ ಮಾಡುವ ಆಸಕ್ತಿ ತೋರಿವೆ. ಡಿಯಾಜಿಯೊದಲ್ಲಿಯೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ಮುಂದಿನ ದಿನಗಳಲ್ಲಿ ಮಾಲೀಕತ್ವ ಸ್ಪಷ್ಟವಾಗಲಿದೆ.
Updated on: Oct 17, 2025 | 9:26 PM

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ಟೂರ್ನಮೆಂಟ್‌ಗೆ ಮುಂಚಿತವಾಗಿ ಹೊಸ ಮಾಲೀಕರ ಕೈಸೇರಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಕ್ರಿಕ್‌ಬಜ್ ಪ್ರಕಾರ, ಆರು ಕಂಪನಿಗಳು ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಮುಂದಾಗಿದ್ದು, ಸುಮಾರು 17,587 ಕೋಟಿ ರೂ. ದರವನ್ನು ನಿಗದಿಪಡಿಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಆರ್ಸಿಬಿ ತಂಡದ ಮಾಲೀಕತ್ವ ಡಿಯಾಜಿಯೊ ಕಂಪನಿಯ ಬಳಿ ಇದೆ. ಆದಾಗ್ಯೂ ಪ್ರಸ್ತುತ ಐಪಿಎಲ್ ಚಾಂಪಿಯನ್ ಆಗಿರುವ ಆರ್ಸಿಬಿಯನ್ನು ಮಾರಾಟ ಮಾಡಲು ಕಂಪನಿಯಲ್ಲೇ ಭಿನ್ನ ಸ್ವರ ಮೂಡಿದೆ ಎನ್ನಲಾಗುತ್ತಿದೆ. ಏಕೆಂದರೆ ಡಿಯಾಜಿಯೊದ ಭಾರತೀಯ ಶಾಖೆಯು ಆರ್ಸಿಬಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅತ್ಯಂತ ಜನಪ್ರಿಯ ಐಪಿಎಲ್ ತಂಡವನ್ನು ತಮ್ಮಲ್ಲೇ ಎಂದು ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆದರ್ ಪೂನವಾಲ್ಲಾ ಫ್ರಾಂಚೈಸಿಯನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಪೂನವಾಲ್ಲಾ ಜೊತೆಗೆ, ಜೆಎಸ್‌ಡಬ್ಲ್ಯೂ ಗ್ರೂಪ್ ಮತ್ತು ಅದಾನಿ ಗ್ರೂಪ್ ಕೂಡ ಆಸಕ್ತಿ ಹೊಂದಿವೆ. ದೆಹಲಿ ಮೂಲದ ಬಿಲಿಯನೇರ್ ಕೈಗಾರಿಕೋದ್ಯಮಿ ಮತ್ತು ಎರಡು ಅಮೇರಿಕನ್ ಖಾಸಗಿ ಇಕ್ವಿಟಿ ಸಂಸ್ಥೆಗಳು ಸಹ ಆರ್ಸಿಬಿ ಖರೀದಿಸುವ ಇರಾದೆಯಲ್ಲಿವೆ ಎನ್ನಲಾಗುತ್ತಿದೆ.

ಐಪಿಎಲ್‌ನಲ್ಲಿ ತಂಡ ಖರೀದಿಸಬೇಕೆಂಬ ಬಯಕೆ ಅದಾನಿ ಗ್ರೂಪ್‌ಗೆ ಬಹಳ ಹಿಂದಿನಿಂದಲೂ ಇದೆ. 2022 ರಲ್ಲಿ ಬಿಸಿಸಿಐ ಎರಡು ಹೊಸ ತಂಡಗಳನ್ನು ಮಾರಾಟ ಮಾಡಿದಾಗ, ಅದಾನಿ ಗ್ರೂಪ್ ಗುಜರಾತ್ ತಂಡವನ್ನು ಖರೀದಿಸುವುದಕ್ಕೆ ಬಿಡ್ ಮಾಡಿತ್ತು. ಆದರೆ ಬಿಡ್ ಗೆಲ್ಲುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಆರ್ಸಿಬಿ ತಂಡ ಖರೀದಿಸುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ, ಜಿಂದಾಲ್ ಗ್ರೂಪ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶೇಕಡಾ 50 ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಒಂದು ವೇಳೆ ಜಿಂದಾಲ್ ಗ್ರೂಪ್, ಆರ್‌ಸಿಬಿಗೆ ಬಿಡ್ ಮಾಡಿದರೆ ಡೆಲ್ಲಿ ಫ್ರಾಂಚೈಸಿಯಿಂದ ಹೊರಬರಬೇಕಾಗುತ್ತದೆ.

ಮಾರಾಟದ ಕುರಿತು ಸಲಹೆ ನೀಡಲು ಡಿಯಾಜಿಯೊ ಸಿಟಿ ಸೇರಿದಂತೆ ಎರಡು ಖಾಸಗಿ ಬ್ಯಾಂಕ್‌ಗಳನ್ನು ನೇಮಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಖರೀದಿ ಒಪ್ಪಂದ ಪೂರ್ಣಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ, ಟ್ರೇಡ್ ವಿಂಡೋ ಮತ್ತು ಮಿನಿ ಹರಾಜಿನ ಮೊದಲು ಆರ್ಸಿಬಿ ಫ್ರಾಂಚೈಸಿ ಹೊಸ ಮಾಲೀಕನ ಕೈಸೇರುತ್ತದೋ ಅಥವಾ ಹಳೆ ಮಾಲೀಕರ ಬಳಿಯೇ ಉಳಿಯುತ್ತದೋ ಎಂಬುದು ಕುತೂಹಲ ಮೂಡಿಸಿದೆ.




